ADVERTISEMENT

‌ಯಳಂದೂರು: ಖರ್ಚಿಲ್ಲದೆ ಬೀಜ, ರಸಗೊಬ್ಬರ ಹಾಕುವ ಯಂತ್ರ 

ಕೃಷಿಕರ ಮೆಚ್ಚಿನ ಸಾಗುವಳಿದಾರ: ‘ಆಲ್ ಇನ್ ಒನ್’ ಸಾಧನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 4:55 IST
Last Updated 23 ಫೆಬ್ರುವರಿ 2024, 4:55 IST
ಯಳಂದೂರು ತಾಲ್ಲೂಕಿನಲ್ಲಿ ‘ಆಲ್ ಇನ್ ಒನ್ ಯಂತ್ರ’ ಬಳಸಿ ಬಿತ್ತನೆ ಬೀಜ ನಾಟಿ ಮಾಡುತ್ತಿರುವ ಕೃಷಿಕ ಪ್ರದೀಪ ನಾಯಕ
ಯಳಂದೂರು ತಾಲ್ಲೂಕಿನಲ್ಲಿ ‘ಆಲ್ ಇನ್ ಒನ್ ಯಂತ್ರ’ ಬಳಸಿ ಬಿತ್ತನೆ ಬೀಜ ನಾಟಿ ಮಾಡುತ್ತಿರುವ ಕೃಷಿಕ ಪ್ರದೀಪ ನಾಯಕ    

‌ಯಳಂದೂರು: ಕೃಷಿ ಕ್ಷೇತ್ರವನ್ನು ಕಾರ್ಮಿಕರ ಕೊರತೆ ಇನ್ನಿಲ್ಲದಂತೆ ಬಾಧಿಸುತ್ತಿದ. ಉಳುಮೆ, ಕಳೆ ತೆರವು, ನಾಟಿ, ಗೊಬ್ಬರ, ನೀರು ಪೂರೈಸಲು ಪರದಾಡಬೇಕಾದ ಸ್ಥಿತಿ ಇದೆ. ಇಂತಹ ಸಮಸ್ಯೆಗಳಿಗೆ ಈಗ ಯಂತ್ರಗಳು ಪರಿಹಾರ ನೀಡುತ್ತಿವೆ.

ಆಧುನಿಕ ಕೃಷಿ ತಂತ್ರಜ್ಞಾನ ಸಣ್ಣ ಹಿಡುವಳಿದಾರರಿಗೂ ನೆರವಾಗುತ್ತಿವೆ. ಇತ್ತೀಚೆಗೆ ಕೃಷಿ ಮೇಳಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಆಲ್‌ ಇನ್‌ ಒನ್‌’ ಯಂತ್ರಗಳು ಅನ್ನದಾತರಿಗೆ ವರವಾಗಿ ಪರಿಣಮಿಸಿವೆ. 

ಮೆಕ್ಕೆಜೋಳ, ಕಡಲೆ, ಹತ್ತಿ, ಉದ್ದು, ಭತ್ತ, ಸೋಯಾಬೀನ್, ಸೂರ್ಯಕಾಂತಿ ಹಾಗೂ ತರಕಾರಿ ಬೀಜ ಬಿತ್ತನೆಗೆ ಈ ಯಂತ್ರಗಳನ್ನು ರೈತರು ಬಳಕೆ ಮಾಡುತ್ತಿದ್ದಾರೆ. ಬೇಕಾದ ಬೆಳೆಗೆ ಹೊಂದಾಣಿಕೆ ಮಾಡಿಕೊಳ್ಳುವ ಪುಟ್ಟ ಹಾಗೂ ಹಗುರವಾದ ಈ ಯಂತ್ರ ಅಲ್ಪ ಕಾಲಾವಧಿಯಲ್ಲಿ ಹೆಚ್ಚಿನ ಕೆಲಸ ಮಾಡುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದ್ದು. ಕಾರ್ಮಿಕರ ಬೇಡಿಕೆಯನ್ನು ತಗ್ಗಿಸಿದೆ.

ADVERTISEMENT

‘ಯಂತ್ರ ಬಳಸಿ ಬೀಜ ಮತ್ತು ರಸಾಯನಿಕ ಗೊಬ್ಬರವನ್ನು ಏಕಕಾಲದಲ್ಲಿ ಭೂಮಿಗೆ ಸೇರಿಸಬಹುದು. ದಿನಕ್ಕೆ 2 ಎಕೆರೆ ನಾಟಿ ಮಾಡಬಹುದು. ಮಾನವ ಶ್ರಮದಿಂದ ಸುಲಭವಾಗಿ, ಇಂಧನದ ತಾಪತ್ರಯ ಇಲ್ಲದೆ ಬಳಸಬಹುದು. 1 ಕೆಜಿ ಮೆಕ್ಕೆಜೋಳ ಬಿತ್ತನೆಗೆ ₹120 ಬಾಡಿಗೆ ಇದ್ದು, ಬೇಕಾದ ಅಂತರಕ್ಕೆ ಬೀಜ ಉದುರುವಂತೆ ಮಾಡಿಕೊಂಡು ಹೆಚ್ಚುವರಿ ವೆಚ್ಚ ತಗ್ಗಿಸಬಹದು’ ಎಂದು ಯಂತ್ರ ಬಳಸಿರುವ ಮಲಾರಪಾಳ್ಯ ಕೃಷಿಕ ಶಿವಣ್ಣ ಹೇಳಿದರು. 

‘ಸ್ಕ್ರೂ ಮೂಲಕ ಹಲ್ಲುಗಳ ಮಾದರಿಯನ್ನು ಚಕ್ರಗಳಲ್ಲಿ ಅಳವಡಿಸಲಾಗಿದೆ. ಪ್ರತಿ ಹಲ್ಲುಗಳಿಗೂ 1 ರಿಂದ 14ರ  ಇಂಚಿಗೆ ಒಂದರಂತೆ ಸಂಖ್ಯೆ ನೀಡಲಾಗಿದೆ. 2, 4, 10 ಇಂಚಿಗೆ ನಾಟಿ ಮಾಡಬೇಕಾದರೆ ತಿರುಗಣಿಯ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಕೊಂಡು  ಯಾವ ಅಂತರಕ್ಕೆ ಬೇಕಾದರೂ ಬೀಜ ಮಣ್ಣಿಗೆ ಸೇರುವಂತೆ ನೋಡಿಕೊಳ್ಳಬಹುದು. ಚಕ್ರದ ಹಿಂದಿನ ಪುಟ್ಟ ರೋಲರ್ ಬೀಜ ಬಿತ್ತನೆ ನಂತರ ಮಣ್ಣನ್ನು ಹರಗುತ್ತದೆ’ ಎನ್ನುತ್ತಾರೆ ಕೃಷಿ ತಜ್ಞರು.

ಯಂತ್ರದ ಬಾಕ್ಸ್‌ನಲ್ಲಿ 5 ಕೆಜಿಯಷ್ಟು ರಸಗೊಬ್ಬರ ಹಾಗೂ 3.5 ಕೆಜಿಯಷ್ಟು ಬಿತ್ತನೆ ಬೀಜ ತುಂಬಬಹುದು. 14 ಬಾಯಿಗಳಲ್ಲಿ ಬೀಜ ಚೆಲ್ಲಿದಾಗ, 5 ಸೆಂ.ಮೀ ಆಳಕ್ಕೆ ಇಳಿಯುತ್ತದೆ. ಮಣ್ಣು ಸೇರುತ್ತದೆ. ಯಂತ್ರವನ್ನು ಸುಲಭವಾಗಿ  ಕೈಯಲ್ಲಿ ತಳ್ಳುತ್ತಾ ಸಾಗಬಹುದು.

ಬಿತ್ತನೆಗಾಗಿ ಯಂತ್ರಕ್ಕೆ ಕಾಳು ತುಂಬುತ್ತಿರುವ ರೈತ

‘ಕೆಲಸಕ್ಕೆ ವೇಗ ಶ್ರಮ ತಗ್ಗುತ್ತದೆ’

‘ಹೊಲದಲ್ಲಿ ಕೂರಿಗೆಯಿಂದ ಬಿತ್ತುವ ಪದ್ಧತಿ ಇತ್ತು. ಕ್ರಮೇಣ ಟ್ರ್ಯಾ ಕ್ಟರ್ ಟಿಲ್ಲರ್‌ಗಳಿಗೆ ಜೋಡಿಸಿ ಬಿತ್ತನೆ ಮಾಡಬಹುದಿತ್ತು. ಇದು ಹೆಚ್ಚಿನ ಖರ್ಚು ಬೇಡುತ್ತಿತ್ತು. ಕಡಿಮೆ ಭೂಮಿ ಹೊಂದಿರುವ ಬೇಸಾಯಗಾರ ಚಿಕ್ಕ ಯಂತ್ರ ಬಳಸಿದರೆ ವ್ಯಯಸಾಯ ಸುಲಭ. ವೆಚ್ಚವನ್ನೂ ತಗ್ಗಿಸಬಹುದು. ಕಡಲೆಬೀಜ ತೊಗರಿ ಸೂರ್ಯಕಾಂತಿ ಮುಸುಕಿನಜೋಳ ಮತ್ತು ರಾಗಿ ಕಾಳನ್ನು ಸುಲಭವಾಗಿ ಒಬ್ಬರೆ ಬಿತ್ತನೆ ಮಾಡಿಕೊಳ್ಳಹುದು. ‘ಆಲ್ ಇನ್ ಒನ್’ ಬೆಲೆಯೂ ₹10 ಸಾವಿರ ಮೀರದು’ ಎಂ ಸಾಗುವಳಿದಾರ ಮಲಾರಪಾಳ್ಯದ ಪ್ರದೀಪ್ ನಾಯಕ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.