ADVERTISEMENT

ಚಾಮರಾಜನಗರ | ತ್ಯಾಜ್ಯ ವಿಲೇವಾರಿ ತಾಣವಾದ ಕುಲುಮೆ ರಸ್ತೆ

ಮೂಗು ಮುಚ್ಚಿಕೊಂಡು ಸಂಚರಿಸುವ ಸಾರ್ವಜನಿಕರು; ಜಾನುವಾರು ಹೊಟ್ಟೆ ಸೇರುತ್ತಿರುವ ಮಾರಕ ಪ್ಲಾಸ್ಟಿಕ್‌

ಬಾಲಚಂದ್ರ ಎಚ್.
Published 3 ಜುಲೈ 2024, 6:23 IST
Last Updated 3 ಜುಲೈ 2024, 6:23 IST
ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ತ್ಯಾಜ್ಯ ಸೇವಿಸುತ್ತಿರುವ ಹಸು
ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ತ್ಯಾಜ್ಯ ಸೇವಿಸುತ್ತಿರುವ ಹಸು   

ಚಾಮರಾಜನಗರ: ಪಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ರಾಮಸಮುದ್ರ ಬಡಾವಣೆಯ ಕುಲುಮೆ ರಸ್ತೆ ಪ್ರವೇಶಿಸುವ ಸಾರ್ವಜನಿಕರಿಗೆ ಮುಖ್ಯ ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸದ ರಾಶಿ ದುರ್ವಾಸನೆಯೊಂದಿಗೆ ಸ್ವಾಗತ ಕೋರುತ್ತವೆ. ಈ ರಸ್ತೆಯ ಸುಮಾರು 500 ಮೀಟರ್‌ ವ್ಯಾಪ್ತಿ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಿದೆ.

ರಸ್ತೆ ಪ್ರವೇಶಿಸುತ್ತಿದ್ದಂತೆ ವಾಹನ ಸವಾರರು ಹಾಗೂ ಸಾರ್ವಜನಿಕರು ಉಸಿರು ಬಿಗಿಹಿಡಿದು ಕಸದ ರಾಶಿ ಮುಗಿಯುವವರೆಗೂ ಮೂಗು ಮುಚ್ಚಿಕೊಂಡೇ ಹೋಗಬೇಕಾದಂತಹ ಅಸಹನೀಯ ವಾತಾವರಣ ಇಲ್ಲಿದೆ. ಬೆಟ್ಟದಂತಿರುವ ಕಸದ ರಾಶಿ ಸಂಬಂಧಪಟ್ಟ ಇಲಾಖೆಯ ಕಣ್ಣಿಗೆ ಬೀಳದಿರುವುದು ಅಚ್ಚರಿ ತಂದಿದೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.

ಸೇಂಟ್ ಫ್ರಾನ್ಸಿಸ್‌ ಶಾಲೆ, ಇಮ್ಯಾನ್ಯುವೆಲ್‌ ಶಾಲೆ, ಸೇವಾ ಭಾರತಿ ವಿದ್ಯಾಸಂಸ್ಥೆ ಹಾಗೂ ಸರ್ಕಾರಿ ಶಾಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಕುಲುಮೆ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ಸಗಟು ಹೂವಿನ ಮಾರುಕಟ್ಟೆಗೆ ಹೋಗಲು ವ್ಯಾಪಾರಿಗಳು, ಹೂ ಬೆಳೆಗಾರರು ಕೂಡ ಇದೇ ರಸ್ತೆಯನ್ನು ಬಳಕೆ ಮಾಡುತ್ತಾರೆ.

ADVERTISEMENT

ಪ್ರಶಾಂತ್ ನಗರ ಬಡಾವಣೆ, ಹೊಸ ಹೌಸಿಂಗ್ ಬಡಾವಣೆ, ಚೆನ್ನಾಪುರದ ಮೊಳೆ ಪ್ರದೇಶವನ್ನು ಸಂಪರ್ಕಿಸುವ ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿವರೆಗೂ ಚಾಚಿಕೊಂಡಿದ್ದು ರಸ್ತೆಯ ಬದಿ ಬಿದ್ದಿರುವ ತ್ಯಾಜ್ಯದಿಂದ ಸಾರ್ವಜನಿಕರು ಮುಖ ಸಿಂಡರಿಸಿಕೊಂಡು ಸಂಚರಿಸಬೇಕಾಗಿದೆ.

ಕಿರಿದಾದ ಕುಲುಮೆ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ಹೊತ್ತು ಶಾಲಾ ವಾಹನಗಳು ಹಾಗೂ ಸಾರ್ವಜನಿಕರ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ನಡೆದು ಹೋಗುವ ಮಕ್ಕಳು, ಪೋಷಕರು ಹಾಗೂ ಪಾದಚಾರಿಗಳು ತ್ಯಾಜ್ಯವನ್ನು ತುಳಿದುಕೊಂಡೇ ಹೋಗಬೇಕಾದ ಸ್ಥಿತಿ ಇದೆ.

‘ಪ್ರತಿದಿನ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಒಣ ಕಸ, ಹಳೆಯ ಬಟ್ಟೆ, ನಿರುಪಯುಕ್ತ ವಸ್ತುಗಳನ್ನು ಸಾರ್ವಜನಿಕರು ರಾಶಿಯಾಗಿ ರಸ್ತೆ ಬದಿಗೆ ತಂದು ಸುರಿಯುತ್ತಿದ್ದಾರೆ. ಬೆಳಗಿನ ಜಾವ ಹಾಗೂ ರಾತ್ರಿಯ ಹೊತ್ತು ಹೆಚ್ಚಾಗಿ ಕಸ ತಂದು ಹಾಕುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಕಸ ಹಾಕುವುದನ್ನು ತಡೆದು ದಂಡ ವಿಧಿಸಬೇಕು. ತಾತ್ಕಾಲಿಕವಾಗಿ ತ್ಯಾಜ್ಯದ ರಾಶಿಯನ್ನಾದರೂ ವಿಲೇವಾರಿ ಮಾಡುವ ಕಾರ್ಯ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಸ್ಥಳೀಯ ನಿವಾಸಿ ಮಹೇಶ್ವರಪ್ಪ.

ಬೀದಿ ದೀಪ ಇಲ್ಲದಿರುವುದು ಕಾರಣ: ಕುಲುಮೆ ರಸ್ತೆಯ 200 ಮೀಟರ್‌ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಉರಿಯುವುದಿಲ್ಲ. ಇದೇ ಜಾಗದಲ್ಲಿ ಕಸ ತಂದು ಹಾಕಲಾಗುತ್ತಿದೆ. ಈ ಜಾಗದಲ್ಲಿ ಬೀದಿ ದೀಪಗಳನ್ನಾದರೂ ದುರಸ್ತಿಗೊಳಿಸಿದರೆ, ಕಸದ ಕಿರಿಕಿರಿ ಸ್ವಲ್ಪ ಕಡಿಮೆಯಾಗಬಹುದು ಎನ್ನುತ್ತಾರೆ ಅವರು.

ಸಮರ್ಪಕವಾಗಿಲ್ಲ ಕಸ ಸಂಗ್ರಹ: ‘ಕುಲುಮೆ ರಸ್ತೆಯ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸಮರ್ಪಕವಾಗಿ ಹಸಿ ಹಾಗೂ ಒಣ ಕಸ ಸಂಗ್ರಹ ಮಾಡಲಾಗುತ್ತಿಲ್ಲ. ಮೂರ್ನಾಲ್ಕು ದಿನಗಳಾದರೂ ಕಸವನ್ನು ಪಡೆಯುವುದಿಲ್ಲ. 2 ದಿನಕ್ಕೆ ಹಸಿ ಕಸ ಕೊಳೆತು ಗಬ್ಬು ನಾರುತ್ತದೆ. ನಗರಸಭೆ ಪ್ರತಿದಿನ ಹಸಿ ಹಾಗೂ ಒಣಕಸ ಸಂಗ್ರಹಿಸಿದರೆ ಜನರು ತ್ಯಾಜ್ಯವನ್ನು ರಸ್ತೆಗೆ ತಂದು ಸುರಿಯುವ ಅಗತ್ಯವಾದರೂ ಏನಿರುತ್ತದೆ’ ಎಂದು ಪ್ರಶ್ನಿಸುತ್ತಾರೆ ಗೃಹಿಣಿ ಲಕ್ಷ್ಮಮ್ಮ.

ಜಾನುವಾರುಗೂ ಕಂಟಕ: ‘ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿ ಎಸೆಯುವ ಹಸಿ ತ್ಯಾಜ್ಯವನ್ನು ಜಾನುವಾರುಗಳು ಪ್ಲಾಸ್ಟಿಕ್ ಕವರ್ ಸಹಿತವಾಗಿಯೇ ತಿನ್ನುತ್ತಿದ್ದು ಗೋವುಗಳ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ನಿತ್ಯವೂ ಹಿಂಡು ದನಗಳು ಪ್ಲಾಸ್ಟಿಕ್ ಕವರ್ ಸಹಿತ ತ್ಯಾಜ್ಯ ಸೇವಿಸುವ ದೃಶ್ಯಗಳು ಸಾಮಾನ್ಯವಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ರಾಮಪ್ಪ.

ನಾಯಿಗಳು ಹಸಿ ತ್ಯಾಜ್ಯವನ್ನು ರಸ್ತೆಗೆ ಎಳೆಯುತ್ತಿದ್ದು, ಪಾದಚಾರಿಗಳು ತುಳಿದುಕೊಂಡು ಹೋಗಬೇಕಾಗಿದೆ. ಹಲವು ಬಾರಿ ತ್ಯಾಜ್ಯ ಚೀಲಗಳು ದ್ವಿಚಕ್ರ ವಾಹನಗಳ ಚಕ್ರಕ್ಕೆ ಸಿಲುಕಿ ಸವಾರರು ಆಯತಪ್ಪಿ ಬಿದ್ದು ಗಾಯಮಾಡಿಕೊಂಡಿದ್ದಾರೆ.

‘ಪರಿಶೀಲಿಸಿ ಕ್ರಮ’ ಕುಲುಮೆ ರಸ್ತೆಯ ಬದಿ ಸಾರ್ವಜನಿಕರು ಕಸ ತುಂದು ಸುರಿಯುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಈ ಜಾಗವನ್ನು ಬ್ಲಾಕ್ ಸ್ಪಾಟ್‌ ಎಂದು ಗುರುತಿಸಲಾಗಿದ್ದು ಹಲವು ಬಾರಿ ಜೆಸಿಬಿ ತಂದು ವಿಲೇವಾರಿ ಮಾಡಲಾಗಿದೆ. ಕೂಡಲೇ ಕಸ ತೆರವು ಮಾಡುವಂತೆ ಹಾಗೂ ಕಸ ಸಂಗ್ರಹ ಸಮರ್ಪಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಕೂಡ ಕಸವನ್ನು ರಸ್ತೆ ಬದಿಗೆ ಬಿಸಾಡದೆ ಕಸ ಸಂಗ್ರಹಿಸುವವರಿಗೆ ನೀಡಬೇಕು ಎಂದು ನಗರಸಭೆ ಆಯುಕ್ತ ರಾಮದಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.