ADVERTISEMENT

ರೈತರ ಸರ್ವನಾಶ ಮಾಡಲು ಹೊರಟ ಸಿದ್ದರಾಮಯ್ಯ: ಕುರಬೂರು ಶಾಂತಕುಮಾರ್‌

ಬಿತ್ತನೆ ಬೀಜ ಬೆಲೆ ಏರಿಕೆಗೆ ಆಕ್ರೋಶ, ಉಚಿತವಾಗಿ ವಿತರಿಸಲು ಕುರಬೂರು ಶಾಂತಕುಮಾರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮೇ 2024, 6:13 IST
Last Updated 31 ಮೇ 2024, 6:13 IST
ಕುರುಬೂರು ಶಾಂತಕುಮಾರ್‌
ಕುರುಬೂರು ಶಾಂತಕುಮಾರ್‌   

ಚಾಮರಾಜನಗರ: ಬರದಿಂದ ತತ್ತರಿಸಿರುವ ರಾಜ್ಯದ ರೈತರನ್ನು ಸರ್ವನಾಶ ಮಾಡಲು ಮುಖ್ಯಮಂತ್ರಿ  ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಗುರುವಾರ ದೂರಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ‘ಬರಗಾಲದ ಸಂಕಷ್ಟದಲ್ಲಿರುವ ರೈತರು ಮಳೆಯಾದ ಕಾರಣಕ್ಕೆ ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ಆದರೆ, ಸರ್ಕಾರ ಸಹಾಯಧನ ರೂಪದಲ್ಲಿ ಬಿತ್ತನೆ ಬೀಜದ ಬೆಲೆಗಳನ್ನು ಶೇ 60ರಿಂದ ಶೇ 70ರಷ್ಟು ಹೆಚ್ಚಿಸಿದೆ. ಹೊರಗಡೆ ಇರುವುದಕ್ಕಿಂತಲೂ ಹೆಚ್ಚು ಬೆಲೆಯನ್ನು ನೀಡಿ ರೈತರು ಸರ್ಕಾರದಿಂದ ಖರೀದಿಸಬೇಕಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದರು. 

‘ಸಿದ್ದರಾಮಯ್ಯ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಕಡಿಮೆ ಇದೆ ಎಂದು ಹೇಳುತ್ತಾರೆ. ಆದರೆ, ನೆರೆಯ ರಾಜ್ಯ ತೆಲಂಗಾಣವನ್ನು ಯಾಕೆ ಅವರು ಪ್ರಸ್ತಾಪ ಮಾಡುವುದಿಲ್ಲ? ಅಲ್ಲಿನ ಸರ್ಕಾರ ರೈತರಿಗೆ ಅನುಕೂಲಗಳನ್ನು ಕಲ್ಪಿಸಿದೆ. ಅದನ್ನು ಮಾದರಿಯಾಗಿಟ್ಟುಕೊಂಡು ಯಾಕೆ ಹೇಳುವುದಿಲ್ಲ? ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಸ್ವಲ್ಪವಾದರೂ ಅಭಿಮಾನ ಇದ್ದರೆ ಬಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಲಿ’ ಎಂದು ಶಾಂತಕುಮಾರ್‌ ಆಗ್ರಹಿಸಿದರು. 

ADVERTISEMENT

‘ತಾನು ರೈತ. ರೈತನ ಮಗ. ರೈತ ಸಂಘದ ಕಾರ್ಯಕರ್ತ ಎಂದು ಹೇಳುತ್ತ ಬಂದಿರುವ  ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಕಿಸಾನ್‌ ಸಮ್ಮಾನ್‌ ಯೋಜನೆಯ ರಾಜ್ಯ ಸರ್ಕಾರದ ಪಾಲು ₹4000 ನೀಡುವುದನ್ನು ನಿಲ್ಲಿಸಿದರು. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ವಿದ್ಯಾಸಿರಿ ಯೋಜನೆ ಸ್ಥಗಿತಗೊಳಿಸಿದರು. ಎಂಟು ತಿಂಗಳಿಂದ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಇದಕ್ಕಾಗಿ ₹ 750 ಕೋಟಿ ಇನ್ನೂ ಬಿಡುಗಡೆ ಮಾಡಿಲ್ಲ. ಕೃಷಿ ಪಂಪ್ ಸೆಟ್‌ಗಳಿಗೆ ಸಂಪರ್ಕ ಪಡೆಯಲು ₹2 ಲಕ್ಷ ರೂಪಾಯಿ ಖರ್ಚು ಮಾಡಬೇಕಾದ ನಿಯಮ ಜಾರಿ ಮಾಡಿದ್ದಾರೆ’ ಎಂದು ದೂರಿದರು. 

‘223 ತಾಲ್ಲೂಕು ಬರಪೀಡಿತ ಎಂದು ಘೋಷಣೆ ಮಾಡಿ, 70 ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ ಮಾತ್ರ ₹500, ₹1000 ಹೀಗೆ ಭಿಕ್ಷಾ ರೂಪದಲ್ಲಿ ಬರಪರಿಹಾರ ನೀಡಿದ್ದಾರೆ’ ಎಂದು ಆರೋಪಿಸಿದರು. 

‘ಬೆಳೆ ನಷ್ಟ ಪರಿಹಾರ ನೀಡುವಾಗ ಎನ್‌ಡಿಆರ್‌ಎಫ್‌ ಮಾನದಂಡದಲ್ಲಿ ಕಡಿಮೆ ಪರಿಹಾರ ನೀಡಲಾಗುತ್ತಿದೆ. ಈ ಮಾನದಂಡಕ್ಕೆ ತಿದ್ದುಪಡಿ ತರಬೇಕು. ನಷ್ಟ ಅನುಭವಿಸಿದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಬೇಕು’ ಎಂದು ಶಾಂತಕುಮಾರ್‌ ಒತ್ತಾಯಿಸಿದರು.  

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ. ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಸತೀಶ್, ಹೆಗ್ಗೋಠಾರ ಶಿವಸ್ವಾಮಿ,
ಎಂ.ಬಿ.ರಾಜು. ಮಾದೇಶ್. ಸುಂದ್ರಪ್ಪ ಭಾಗವಹಿಸಿದ್ದರು.

ಜೂನ್‌ 10ರ ಗಡುವು

‘ಸಂಕಷ್ಟದಲ್ಲಿರುವ ರೈತರ ಹಿತ ಕಾಯಬೇಕಾದ ಸರ್ಕಾರ ಪದೇ ಪದೇ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಸರ್ಕಾರ ತನ್ನ ನಿರ್ಧಾರವನ್ನು ವಾಪಸ್‌ ಪಡೆಯಬೇಕು. ಜೂನ್‌ 10ರವರೆಗೆ ಕಾಯುತ್ಥೇವೆ. ಅಂದು ಬೆಳಗಾವಿಯಲ್ಲಿ ರೈತ ಸಂಘಟನೆಗಳ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಕುರುಬೂ‌ರು ಶಾಂತಕುಮಾರ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.