ಹನೂರು: ತಾಲ್ಲೂಕಿನ ಮಾರ್ಟಳ್ಳಿ ಭಾಗದಲ್ಲಿ ಸಮರ್ಪಕವಾದ ಬಸ್ ಸೌಲಭ್ಯ ಇಲ್ಲದೆ ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.
ಹನೂರು ತಾಲ್ಲೂಕಿನ ಪ್ರಮುಖ ಭಾಗವಾಗಿರುವ ಸುಮಾರು 12,000 ಜನಸಂಖ್ಯೆ ಹೊಂದಿರುವ ಮಾರ್ಟಳ್ಳಿಯಿಂದ ಮೈಸೂರಿಗೆ ಒಂದೇ ಒಂದು ಕೆಎಸ್ಆರ್‌ಟಿಸಿ ಬಸ್ ಮಾತ್ರ ಸಂಚರಿಸುತ್ತಿದ್ದು, ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಾರ್ಟಳ್ಳಿಯಿಂದ ಪ್ರತಿನಿತ್ಯ ಮೈಸೂರಿಗೆ ನೂರಾರು ಮಂದಿ ಪ್ರಯಾಣ ಬಳಸುತ್ತಾರೆ. ಇವರಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಶಿಕ್ಷಕರು, ನೌಕರರು ಹಾಗೂ ರೋಗಿಗಳು ಹೆಚ್ಚಾಗಿ ಮೈಸೂರಿಗೆ ಓಡಾಡುತ್ತಾರೆ. ಒಂದೇ ಒಂದು ಬಸ್ ಇರುವುದರಿಂದ ಬಹುತೇಕರು ಖಾಸಗಿ ಬಸ್ಸುಗಳನ್ನೇ ಆಶ್ರಯಿಸಬೇಕು. ಕೆಲವು ಬಾರಿ ಮಾರ್ಟಳ್ಳಿಗೆ ಖಾಸಗಿ ಬಸ್‌ಗಳು ಬಾರದಿದ್ದರೆ ವಡಕೆ ಹಳ್ಳಕ್ಕೆ ಜನರು ಬಂದು ಬಸ್ ಹತ್ತಬೇಕು.
ಸಾರಿಗೆ ಬಸ್‌ಗಳ ಕೊರತೆಯಿಂದ ಶಕ್ತಿ ಯೋಜನೆಯಡಿ ಉಚಿತವಾಗಿ ಸಂಚರಿಸುವ ಮಹಿಳೆಯರು, ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಪಾಸ್ ಬಳಸಿ ಓಡಾಡುವ ವಿದ್ಯಾರ್ಥಿಗಳು ಹಾಗೂ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಮೈಸೂರಿಗೆ ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ದರ ಪಾವತಿಸಿ ತೆರಳಬೇಕಾಗಿದೆ.
ಮಾರ್ಟಳ್ಳಿ–ಮೈಸೂರು ಮಾರ್ಗವಾಗಿ ಹೆಚ್ಚುವರಿ ಸಾರಿಗೆ ಬಸ್‌ಗಳನ್ನು ಓಡಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಿಗದಿತ ಸಮಯಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವಂತೆ ಕ್ಷೇತ್ರದ ಶಾಸಕರ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸುತ್ತಾರೆ ಗ್ರಾಮಸ್ಥರು.
ಹೂಗ್ಯಂನಿಂದ ಹೊರಡುವ ಬಸ್ ವಡಕೆಹಳ್ಳದ ಮಾರ್ಗವಾಗಿ ತೆರಳುತ್ತದೆ. ಆದರೆ, ಹೂಗ್ಯಂ, ಕೂಡ್ಲೂರು ಹಾಗೂ ನೆಲ್ಲೂರು, ಹಂಚಿಪಾಳ್ಯ ಗ್ರಾಮಗಳಿಗೆ ಬರುವ ಹೊತ್ತಿಗೆ ಬಸ್ ಸಂಪೂರ್ಣವಾಗಿ ಭರ್ತಿಯಾಗಿರುತ್ತದೆ. ಮಾರ್ಟಳ್ಳಿಯಲ್ಲಿ ಪ್ರಯಾಣಿಕರಿಗೆ ಬಸ್ ಹತ್ತಲೂ ಸ್ಥಳವಿರುವುದಿಲ್ಲ. ನಾಲ್ ರೋಡ್‌ನಿಂದ ಸಂದನಪಾಳ್ಯ, ಸೂಳ್ವಾಡಿ, ಮಾರ್ಟಳ್ಳಿ, ಹಳೇ ಮಾರ್ಟಳ್ಳಿ, ವಡ್ಡರದೊಡ್ಡಿ, ಆಲದಮರ ಹಾಗೂ ಬಿದರಳ್ಳಿ ನಿವಾಸಿಗಳು ಬಸ್ ಸಿಗದೆ ಪರದಾಡಬೇಕಿದೆ. ಸುತ್ತಮುತ್ತಲ ಗ್ರಾಮಗಳಿಗೆ ಮಾರ್ಟಳ್ಳಿ ಕೇಂದ್ರಸ್ಥಾನವಾಗಿರುವ ಹಿನ್ನೆಲೆಯಲ್ಲಿ ಇಲ್ಲಿಂದಲೇ ಪ್ರತ್ಯೇಕ ಬಸ್ ಓಡಿಸಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರು.
ಪ್ರತಿನಿತ್ಯ ಮಾರ್ಟಳ್ಳಿಯಿಂದ ಹನೂರು, ಕೊಳ್ಳೇಗಾಲ, ಮೈಸೂರಿಗೆ ಜನರು ಓಡಾಡುತ್ತಾರೆ. ಇರುವ ಒಂದೇ ಬಸ್‌ನಲ್ಲಿ ನೂಕು ನುಗ್ಗಲಿನಲ್ಲಿ ತೆರಳಬೇಕು. ಮಾರ್ಟಳ್ಳಿಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿದ್ದು ಇಲ್ಲಿಗೆ ಹೂಗ್ಯಂ, ಕೂಡ್ಲೂರು, ನೆಲ್ಲೂರು, ಹಂಚಿಪಾಳ್ಯ, ನಾಲ್ ರೋಡ್, ಸಂದನಪಾಳ್ಯ, ಸುಳ್ವಾಡಿ, ವಡಡ್ಡರದೊಡ್ಡಿ ಹಾಗೂ ಬಿದರಳ್ಳಿ ಗ್ರಾಮದಿಂದ ವಿದ್ಯಾರ್ಥಿಗಳು ಬರುತ್ತಾರೆ. ನಿಗದಿತ ಸಮಯಕ್ಕೆ ಬಸ್ ಸಿಗದಿದ್ದರೆ ಆಟೊ ಅಥವಾ ನಡೆದುಕೊಂಡೇ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಎನ್ನುತ್ತಾರೆ ಮಾರ್ಟಳ್ಳಿಯ ಜಾಯ್.
ಮಾರ್ಟಳ್ಳಿ ಹಾಗೂ ಸುಳ್ವಾಡಿಯಿಂದ ಹೆಚ್ಚಿನ ಚಿಕಿತ್ಸೆ ಪಡೆಯಲು ರೋಗಿಗಳು ರಾಮಾಪುರ, ಹನೂರು ಅಥವಾ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಬರಬೇಕು. ತುರ್ತು ಸಂದರ್ಭಗಳಲ್ಲಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಪ್ರಾಣಾಪಾಯಕ್ಕೆ ಸಿಲುಕುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರ್ಟಳ್ಳಿಯಿಂದ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು.
ಮಾರ್ಟಳ್ಳಿಯಿಂದ ಬೆಳಿಗ್ಗೆ 7.30 11 4 ಹಾಗೂ ಸಂಜೆ 5 ಗಂಟೆಗೆ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ರಸ್ತೆ ಸರಿಯಿಲ್ಲದ ಕಾರಣ ಎರಡು ಬಾರಿ ಹೋಗುವ ಬಸ್ ಒಂದೇ ಬಾರಿ ಹೋಗುತ್ತಿದೆ. ರಸ್ತೆ ಸರಿಯಾದರೆ ಎರಡೆರಡು ಬಾರಿ ಸಂಚರಿಸಲಿವೆ. ಶಂಕರ್ ಕೊಳ್ಳೇಗಾಲ ಡಿಪೊ ಮ್ಯಾನೇಜರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.