ADVERTISEMENT

ಚಾಮರಾಜನಗರ | ಸುರಕ್ಷತೆಯೇ ಸವಾಲು; ಬೇಕು ಸಿಸಿಟಿವಿ ಕಣ್ಗಾವಲು

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು; ಸಾರ್ವಜನಿಕರಲ್ಲಿ ಆತಂಕ

ಬಾಲಚಂದ್ರ ಎಚ್.
Published 21 ಅಕ್ಟೋಬರ್ 2024, 7:59 IST
Last Updated 21 ಅಕ್ಟೋಬರ್ 2024, 7:59 IST
ಚಾಮರಾಜನಗರದ ಡಿವೈಎಸ್‌ಪಿ ಕಚೇರಿ ಬಳಿಯ ಸಿಸಿಟಿವಿ ಕ್ಯಾಮೆರಾ
ಚಾಮರಾಜನಗರದ ಡಿವೈಎಸ್‌ಪಿ ಕಚೇರಿ ಬಳಿಯ ಸಿಸಿಟಿವಿ ಕ್ಯಾಮೆರಾ   

ಚಾಮರಾಜನಗರ: ನಗರ, ಪಟ್ಟಣ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳು, ಪ್ರಮುಖ ವೃತ್ತಗಳು, ಜನವಸತಿ ಬಡಾವಣೆಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಸಮರ್ಪಕ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರ ಮನೆ, ವಾಣಿಜ್ಯ ಮಳಿಗೆ, ಶಿಕ್ಷಣ ಸಂಸ್ಥೆಗಳಲ್ಲಿ ಎಗ್ಗಿಲ್ಲದೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಸಾರ್ವಜನಿಕರ ನಿದ್ದೆಗೆಡಿಸಿದೆ.

ನಾಗರಿಕರು ಮನೆಬಿಟ್ಟು ಒಂದೆರಡು ದಿನ ಹೊರಗೆ ಹೋಗಿ ಬರಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಇಲ್ಲದ, ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲದ ಜನವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ನಾಗರಿಕರು ಭೀತಿಯಲ್ಲಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆಯ ಅಪರಾಧ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2024ರ ಜ.1ರಿಂದ ಸೆಪ್ಟೆಂಬರ್ ಅಂತ್ಯದವರೆಗೂ 198 ಕಳವು, ಡಕಾಯಿತಿ, ದರೋಡೆ ಪ್ರಕರಣಗಳು ನಡೆದಿದ್ದು ₹ 3 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು, ಸ್ವತ್ತು ಕಳವು  ಮಾಡಲಾಗಿದೆ. 51 ಪ್ರಕರಣಗಳಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದು ₹ 94.45 ಲಕ್ಷದಷ್ಟು ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ 147 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಾಗಬೇಕಿದೆ. ₹ 2 ಕೋಟಿಗೂ ಹೆಚ್ಚು ಮೌಲ್ಯದ ಸ್ವತ್ತುಗಳು ಸಿಗಬೇಕಿದೆ.

ADVERTISEMENT

ವರದಿಯಾದ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಭೇದಿಸಿದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇರುವುದಕ್ಕೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಎದುರಾಗುತ್ತಿರುವ ಸವಾಲುಗಳ ಹಾಗೂ ಸಿಸಿಟಿವಿ ಕ್ಯಾಮೆರಾ ಸಾಕ್ಷ್ಯಗಳ ಕೊರತೆ ಪ್ರಮುಖ ಕಾರಣ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಗಳು.

ಯಾವುದೇ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಸಿಸಿಟಿವಿ ಕ್ಯಾಮೆರಾಗಳು ಪ್ರಮುಖ ಪಾತ್ರ ವಹಿಸುತ್ತವೆ. ನಗರ, ಪಟ್ಟಣಗಳ ಆಯಕಟ್ಟಿನ ಸ್ಥಳಗಳು, ವೃತ್ತಗಳು, ಬಸ್, ನಿಲ್ದಾಣ, ರೈಲು ನಿಲ್ದಾಣ, ವಾಣಿಜ್ಯ ಮಳಿಗೆಗಳು, ಕೋಮುಸೂಕ್ಷ್ಮ ಪ್ರದೇಶಗಳು, ನಗರ ಪ್ರವೇಶಿಸುವ ಹಾಗೂ ಹೊರಹೋಗುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದ್ದರೆ ಆರೋಪಿಗಳ ಪತ್ತೆ ಕಾರ್ಯ ಸುಲಭವಾಗಲಿದೆ.

ಸಿಸಿಟಿವಿ ಕ್ಯಾಮೆರಾಗಳಿರುವ ಕಡೆಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದರೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕಳವು ಮಾಡಲು ಕಳ್ಳರು ಹಿಂಜರಿಯುತ್ತಾರೆ. ಇದಲ್ಲದೆ ಅಪಘಾತ ಹಾಗೂ ಹಿಟ್‌ ಅಂಡ್ ರನ್ ಕೇಸ್‌ಗಳಲ್ಲಿ ತಪ್ಪೆಸಗಿದ, ಸಂಚಾರ ನಿಮಯ ಉಲ್ಲಂಘಿಸಿದ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ಮನೆ, ವಾಣಿಜ್ಯ ಮಳಿಗೆಗಳಲ್ಲಿ ಕಳವು, ರಸ್ತೆಗಳಲ್ಲಿ ಮಹಿಳೆಯರ ಸರಗಳವು ಸೇರಿದಂತೆ ಬಹಳಷ್ಟು ಅಪರಾಧ ಪ್ರಕರಣಗಳನ್ನು ಭೇದಿಸಲು ಹಾಗೂ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಲು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಪ್ರಮುಖ ಸಾಕ್ಷ್ಯಗಳಾಗಿ ಬಳಕೆಯಾಗುತ್ತವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಇದ್ದೂ ಇಲ್ಲದಂತಾದ ಸಿಸಿಟಿವಿ ಕ್ಯಾಮೆರಾ: ಚಾಮರಾಜನಗರದಲ್ಲಿ 13 ವರ್ಷಗಳ ಹಿಂದೆ ನಗರಸಭೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಅನುದಾನದಲ್ಲಿ ನಗರದ ಪ್ರಮುಖ ಭಾಗಗಳಲ್ಲಿ 45ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಿರ್ವಹಣೆ ಕೊರತೆ ಹಾಗೂ ಹಳತಾದ ಕಾರಣ ಇವುಗಳಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವುದು ಕೇವಲ 10 ಮಾತ್ರ. ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟಿದ್ದು ಇದ್ದೂ ಇಲ್ಲದಂತಿವೆ.

ಮುಖ್ಯವಾಗಿ ಜಿಲ್ಲೆ ಪ್ರವೇಶಿಸುವ ಗಡಿ ಹಾಗೂ ನಿರ್ಗಮಿಸುವ ಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ.

ಕಳವು, ಅಪಘಾತ, ಕೊಲೆಯಂತಹ ಕೃತ್ಯಗಳು ನಡೆದಾಗ ನಗರದ ಖಾಸಗಿ ವಾಣಿಜ್ಯ ಮಳಿಗೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಮೇಲೆ ಅವಲಂಬಿಸಬೇಕಾಗಿದೆ. ಇದರಿಂದ ಪ್ರಕರಣಗಳ ತನಿಖೆಗೆ ಹಿನ್ನಡೆಯಾಗುತ್ತಿದೆ. ಸಿಸಿಟಿವಿಯಲ್ಲಿ ಕೃತ್ಯ ದಾಖಲಾದರೂ ಅಸ್ಪಷ್ಟವಾದ ದೃಶ್ಯಗಳಿಂದ ಪ್ರಕರಣಕ್ಕೆ ಯಾವುದೇ ಲೀಡ್ ದೊರೆಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.

ಮನೆಬಿಟ್ಟು ಹೋದರೆ ಮನೆಗೆ ಕನ್ನ: ಹೊಸ ಬಡಾವಣೆಗಳಲ್ಲಿ ಮನೆಗಳು ಹಾಗೂ ಜನರ ಸಂಚಾರ ವಿರಳವಾಗಿರುವುದರಿಂದ ಅಲ್ಲಿಯೇ ಹೆಚ್ಚು ಕಳವು ಪ್ರಕರಣಗಳು ನಡೆಯುತ್ತಿವೆ. ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಸಮಾರಂಭಗಳಿಗೆ, ದೇವಸ್ಥಾನಗಳಿಗೆ ಒಂದೆರಡು ದಿನ ತೆರಳಿದರೂ ಕಳ್ಳರು ಮನೆಗಳಿಗೆ ಕನ್ನ ಹಾಕುತ್ತಿದ್ದಾರೆ. ಈಚೆಗಷ್ಟೆ ಚಾಮರಾಜನಗರದ ಸೇವಾ ಭಾರತಿ ಶಾಲೆಯ ಮುಂಭಾಗ ಪೊಲೀಸ್ ಸಿಬ್ಬಂದಿಯ ಮನೆಯಲ್ಲೇ ಕಳ್ಳರು ಚಿನ್ನಾಭರಣ ನಗದು ದೋಚಿರುವುದು ನಾಗರಿಕರಲ್ಲಿ ಭಯ ಹೆಚ್ಚಿಸಿದೆ. ಆರಕ್ಷಕರ ಮನೆಗಳಿಗೆ ರಕ್ಷಣೆ ಇಲ್ಲದಿರುವಾಗ ಸಾರ್ವಜನಿಕರ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಹೊಸ ಬಡಾವಣೆಗಳೇ ಟಾರ್ಗೆಟ್‌: ಕೊಳ್ಳೇಗಾಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಒಂಟಿ ಮನೆ, ಹೊಸ ಬಡಾವಣೆಗಳನ್ನು ಗುರಿಯಾಗಿಸಿ ಕಳವು ಮಾಡಲಾಗುತ್ತಿದೆ. ನಗರದ ಪ್ರಮುಖ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದೆ, ಬೀದಿದೀಪಗಳನ್ನು ದುರಸ್ತಿ ಮಾಡಿಸದೆ ಪೊಲೀಸ್ ಇಲಾಖೆ ಹಾಗೂ ನಗರಸಭೆಯೇ ಕಳ್ಳರಿಗೆ ಕಳ್ಳತನ ಮಾಡಲು ಅವಕಾಶ ಮಾಡಿಕೊಟ್ಟಿವೆ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.

ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಸಹಿತ ಜನವಸತಿ ಸ್ಥಳಗಳಲ್ಲೂ ಕಳ್ಳರು ಕರಾಮತ್ತು ಪ್ರದರ್ಶಿಸುತ್ತಿದ್ದಾರೆ. ಕೊಳ್ಳೇಗಾಲದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದು ಬಿಟ್ಟರೆ ಜನವಸತಿ ಬಡಾವಣೆಗಳಲ್ಲಿ ಇಲ್ಲವಾಗಿದೆ. ಇದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ ಎನ್ನುತ್ತಾರೆ ಜನರು.

ಹನೂರಿನಲ್ಲಿ ಕಳವು ಹೆಚ್ಚು: ಹನೂರು ಪಟ್ಟಣ ಪಂಚಾಯಿತಿ ಕಚೇರಿ ಹಾಗೂ ಪೊಲೀಸ್ ಠಾಣೆ ಹೊರತುಪಡಿಸಿ ಬೇರೆಡೆ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಇದರಿಂದ ತಾಲ್ಲೂಕಿನಾದ್ಯಂತ ಕಳ್ಳತನ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಖ್ಯ ರಸ್ತೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪಟ್ಟಣದ 11ನೇ ವಾರ್ಡಿನಲ್ಲಿ ಸೆ.10ರಂದು ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಲಾಗಿತ್ತು. ರಾಮಾಪುರ ಠಾಣಾ ವ್ಯಾಪ್ತಿಯ ದೊಡ್ಡಾಲತ್ತೂರು ಗ್ರಾಮದ ತೋಟದ ಮನೆಯೊಂದರಲ್ಲಿ ಮನೆ ಮಾಲೀಕನಿಗೆ ಕೈಕಾಲು ಕಟ್ಟಿ 168 ಗ್ರಾಂ ಚಿನ್ನ ಹಾಗೂ ₹41000 ನಗದು ದೋಚಲಾಗಿದೆ. ಹೀಗೆ ಮೇಲಿಂದ ಮೇಲೆ ಕಳ್ಳತನ, ದರೋಡೆ ಪ್ರಕರಣಗಳು ನಡೆಯುತ್ತಿದ್ದರೂ ಆರೋಪಿಗಳ ಪತ್ತೆ ಸಾದ್ಯವಾಗುತ್ತಿಲ್ಲ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್ ವಿ, ಮಲ್ಲೇಶ ಎಂ, ಬಸವರಾಜು ಬಿ.

ಚಾಮರಾಜನಗರದ ಭುವನೇಶ್ವರಿ ಸರ್ಕಲ್‌ಬಳಿಯ ಸಿಸಿಟಿವಿ ಕ್ಯಾಮೆರಾ
ಸತ್ತಿ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದರುವುದು
ಸಿಸಿಟಿವಿ ಕ್ಯಾಮೆರಾ ಅಲಭ್ಯತೆ; ಹಿಟ್ ಅಂಡ್ ರನ್ ಹೆಚ್ಚಳ
ಯಳಂದೂರು ತಾಲ್ಲೂಕು ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೀದಿ ದೀಪ ಮತ್ತು ಸಿಸಿಟಿವಿ ಕ್ಯಾಮೆರಾಗಳ ಕೊರತೆ ಕಾಡಿದೆ. ಬಹುತೇಕ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿದ್ದು ಬೆಲೆಬಾಳುವ ಬಲ್ಬ್ ಮತ್ತು ಸಲಕರಣೆಗಳು ಕಳ್ಳರ ಪಾಲಾಗಿವೆ. ಇದರಿಂದ ಪಂಚಾಯಿತಿ ಕೇಂದ್ರಗಳು ಮತ್ತು ಪ್ರಮುಖ ಬೀದಿಗಳಲ್ಲಿ ಕತ್ತಲು ಆವರಿಸಿದ್ದು ಗ್ರಾಮೀಣರು ಪರದಾಡುವಂತಾಗಿದೆ. ಪಟ್ಟಣ ಪ್ರದೇಶಗಳ ಪ್ರಮುಖ ವೃತ್ತಗಳ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಅಪಘಾತ ಹಾಗೂ ಹಿಟ್‌ ಅಂಡ್ ರನ್ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದೇ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಕಳವು ಪ್ರಕರಣಗಳು ನಡೆದಾಗ ಕಳ್ಳರ ಚಹರೆ ಗುರುತಿಸಲು ತ್ರಾಸ ಪಡುವಂತಾಗಿದೆ. ತಾಲ್ಲೂಕು ಕೇಂದ್ರ ಪ್ರವೇಶಿಸುವಾಗ ಮತ್ತು ಕೊನೆಗೊಳ್ಳುವಾಗ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎನ್ನುತ್ತಾರೆ ಪಟ್ಟಣ ಠಾಣೆ ಪಿಎಸ್‌ಐ ಹನುಮಂತ ಉಪ್ಪಾರ್.

ಯಾರು ಏನು ಹೇಳ್ತಾರೆ...?

‘ಬಹುತೇಕ ದುರಸ್ತಿ’ ಚಾಮರಾಜನಗರದ ಪ್ರಮುಖ ಭಾಗಗಳಲ್ಲಿ ದಶಕದ ಹಿಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿವೆ. 49 ಸಿಸಿಟಿವಿ ಕ್ಯಾಮೆರಾಗಳ ಪೈಕಿ 10 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಕೆಟ್ಟುನಿಂತಿರುವ ಸಿಸಿಟಿವಿಗಳನ್ನು ದುರಸ್ತಿ ಮಾಡಿಸಲಾಗುತ್ತಿದೆ. ದುರಸ್ತಿ ಸಾಧ್ಯವಿಲ್ಲದವುಗಳನ್ನು ತೆರವುಗೊಳಿಸಿ ಹೊಸದಾಗಿ ಅಳವಡಿಸಲಾಗುತ್ತದೆ. ನಗರದಲ್ಲಿ ಹೆಚ್ಚುವರಿಯಲಾಗಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳು ಬೇಕು ಎಂಬ ವರದಿ ಸಿದ್ಧಪಡಿಸಿ ನಗರಸಭೆಗೆ ಸಲ್ಲಿಸಲಾಗುವುದು. ಎರಡೂ ಇಲಾಖೆಗಳ ಅನುದಾನ ಬಳಸಿಕೊಂಡು ಶೀಘ್ರವೇ ನಗರದಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು.

- ಬಿ.ಟಿ.ಕವಿತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕೆಲವೆಡೆ ಮಾತ್ರ ಕಾರ್ಯ ನಿರ್ವಹಣೆ ಯಳಂದೂರು ಪಟ್ಟಣದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗಿದೆ. ಆದರೆ ವಿದ್ಯುತ್ ಪೂರೈಕೆ ಏರುಪೇರಿನಿಂದ ಕೆಲವೆಡೆ ದೀಪಗಳು ಸುಟ್ಟಿದ್ದು ಹೊಸದಾದ ಕಡಿಮೆ ವಿದ್ಯುತ್ ಬಳಸುವ ಬಲ್ಬ್‌ಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಬಳೆಪೇಟೆ ಬಸ್ ನಿಲ್ದಾಣ ಮತ್ತು ಇತರ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ.

- ಮಹೇಶ್ ಕುಮಾರ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಳೆಗಾಲದಲ್ಲಿ ಸಮಸ್ಯೆ ಹೆಚ್ಚು ಮಳೆಗಾಲದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಹಾಗೂ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ಹೊರಸೂಸುವ ಬೀದಿದೀಪಗಳನ್ನು ಯಳಂದೂರು ಪಟ್ಟಣದಲ್ಲಿ ಅಳವಡಿಸಬೇಕು. ಮುಖ್ಯವಾಗಿ ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು.

-ಕೃಷ್ಣಮೂರ್ತಿ ಚಂಗಚಳ್ಳಿ

ಸುಲಭವಾಗಿ ಪತ್ತೆ ಮಾಡಬಹುದು ಹನೂರು ಪಟ್ಟಣದ ಮುಖ್ಯ ರಸ್ತೆ ಹಾಗೂ ಪ್ರಮುಖ ಬಡಾವಣೆಗಳಲ್ಲಿ ಸಿಸಿಟಿವಿ ಕ್ಯಾಮೆರಗಳನ್ನು ಅಳವಡಿಸಿದರೆ ಅಪರಾಧ ಪ್ರಕರಣಗಳನ್ನು ಕಡಿಮೆಯಾಗುತ್ತವೆ. ಅಪರಾಧ ಕೃತ್ಯಗಳು ನಡೆದಾಗಲೂ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

- ಮಹೇಶ್ ಹನೂರು

ಭಯದ ವಾತಾವರಣ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕಬೇಕಿದೆ. ಪೊಲೀಸ್ ಇಲಾಖೆ ಕೊಳ್ಳೇಗಾಲದ ನಗರದ ಪ್ರಮುಖ ಕಡೆಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಿದರೆ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತವೆ.

- ಅಜಯ್ ಹಾಲಿನ ವ್ಯಾಪಾರಿ

‘ಕೃತ್ಯಗಳಿಗೆ ಕಡಿವಾಣ ಹಾಕಿ’ ರಾಷ್ಟ್ರೀಯ ಹೆದ್ದಾರಿ ಹಾಗೂ ಪಟ್ಟಣದ ಪ್ರಮುಖ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಬೇಕು. ಕಳವು ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಅಪಘಾತ ಕೃತ್ಯಗಳು ಕಡಿಮೆಯಾಗುತ್ತವೆ. ಸಂತೋಷ್ ಕುಮಾರ್ ಗುಂಡ್ಲುಪೇಟೆ ನಿವಾಸಿ ಪುರಸಭೆಗೆ ಮನವಿ ಪೊಲೀಸ್ ಇಲಾಖೆಯ ವತಿಯಿಂದ ಸಿಸಿಟಿವಿ ಅಳವಡಿಸಿಲ್ಲ ಪುರಸಭೆಗೆ ಅಳವಡಿಸಿಲು ಮನವಿ ಮಾಡಿದ್ದೇವೆ.

- ಪರಶಿವಮೂರ್ತಿ ಗುಂಡ್ಲುಪೇಟೆ ಇನ್‌ಸ್ಪೆಕ್ಟರ್

‘ಸಾರ್ವಜನಿಕ ಸ್ಥಳಗಳಲ್ಲಿ ಇಲ್ಲ ಭದ್ರತೆ’
ಗುಂಡ್ಲುಪೇಟೆ ಪಟ್ಟಣದಲ್ಲಿ ಪೊಲೀಸ್ ಇಲಾಖೆಯಾಗಲಿ ತಾಲ್ಲೂಕು ಆಡಳಿತವಾಗಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಆರ್‌ಟಿವಿ ಕಚೇರಿ ಬಳಿ ಇರುವ ಸಿಸಿಟಿವಿ ಕ್ಯಾಮೆರಾವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಖಾಸಗಿ ವಾಣಿಜ್ಯ ಮಳಿಗೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಹೊರತು‍ಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆ ಇಲ್ಲದಂತಾಗಿದೆ. ಹಿಂದೆ ತಾಲ್ಲೂಕು ಕಚೇರಿ ಆವರಣದಲ್ಲಿಯೇ ಕಳ್ಳರು ಬೈಕ್ ಕದ್ದೊಯ್ದಿದ್ದರು. ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇದ್ದರೂ ರಾಷ್ಟ್ರೀಯ ಹೆದ್ದಾರಿವರೆಗಿನ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿಲ್ಲ. ವರ್ಷದ ಹಿಂದೆ ಮಹಿಳೆಯೊಬ್ಬರು ಬಸ್ ನಿಲ್ದಾಣದಲ್ಲಿ ಮಗು ಬಿಟ್ಟುಹೋದರೂ ಅಲ್ಲಿನ ದೃಶ್ಯಾವಳಿ ಸರಿಯಾಗಿ ಕಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.