ADVERTISEMENT

ಹನೂರು: ಪ್ರಕೃತಿ ಮಡಿಲಲ್ಲಿರುವ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ

ಬಿ.ಬಸವರಾಜು
Published 28 ಸೆಪ್ಟೆಂಬರ್ 2021, 21:00 IST
Last Updated 28 ಸೆಪ್ಟೆಂಬರ್ 2021, 21:00 IST
   

ಹನೂರು: ಕಾಡು ಬೆಟ್ಟ ಗುಡ್ಡಗಳಿಂದ ಆವೃತವಾಗಿ ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ತಾಲ್ಲೂಕಿನ ಪ್ರವಾಸಿ ತಾಣಗಳು, ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತಗೊಂಡು ನರಳುತ್ತಿವೆ.

ಮಹದೇಶ್ವರ ಬೆಟ್ಟದಲ್ಲಿರುವ ಪವಾಡ ಪುರುಷ ಮಲೆಮಹದೇಶ್ವರ ಸ್ವಾಮಿ ದೇವಾಲಯ ತಾಲ್ಲೂಕು, ಜಿಲ್ಲೆಯಲ್ಲದೇ ಇಡೀ ರಾಜ್ಯಕ್ಕೆ ಪ‍್ರಸಿದ್ಧ ಧಾರ್ಮಿಕ ಪ್ರವಾಸಿ ಸ್ಥಳ. ಪ್ರತ್ಯೇಕ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಡಳಿತಕ್ಕೆ ಒಳಪಡುವ ಈ ದೇವಾಲಯದ ಐಎಸ್‌ಒ ಮಾನ್ಯತೆಯನ್ನು ಪಡೆದಿದೆ. ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಸ್ಥಳದಲ್ಲಿ ಪ್ರಾಧಿಕಾರವು ಮೂಲಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ. ಹಲವು ಅಭಿವೃದ್ಧಿ ಕಾರ್ಯಗಳೂ ಪ್ರಗತಿಯಲ್ಲಿವೆ.

ಈ ಸ್ಥಳ ಬಿಟ್ಟರೆ, ಪ್ರವಾಸಿಗರು ನೋಡುವಂತಹ ಹಲವು ತಾಣಗಳು ತಾಲ್ಲೂಕಿನಲ್ಲಿವೆ. ಗಡಿ ಭಾಗದಲ್ಲಿರುವ ಹೊಗೆನಕಲ್‌ ಜಲಪಾತ, ಗುಂಡಾಲ್‌ ಜಲಾಶಯ, ಟಿಬೆಟನ್ನರ ನಿರಾಶ್ರಿತರ ಶಿಬಿರ, ಉಡುತೊರೆ ಜಲಾಶಯ,ಮಿಣ್ಯತ್ತಳ್ಳ ಜಲಾಶಯ, ಗೋಪಿನಾಥಂ ಜಲಾಶಯ, ಚಿಕ್ಕಲ್ಲೂರು ಮಹದೇಶ್ವರ ಬೆಟ್ಟ.. ಇತರ ಪ್ರಮುಖ ಪ್ರವಾಸಿ ತಾಣಗಳು.

ADVERTISEMENT

ಧಾರ್ಮಿಕ ಕೇಂದ್ರಗಳನ್ನು ಬಿಟ್ಟರೆ ಉಳಿದ ತಾಣಗಳು ನಿರ್ವಹಣೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಪ್ರವಾಸಿಗರಿಂದ ದೂರ ಇವೆ.

ಅವಸಾನದತ್ತ ಜಲಾಶಯಗಳು:ತಾಲ್ಲೂಕಿನಲ್ಲಿರುವ ಜಲಾಶಯಗಳ ಪೈಕಿ ಉಡುತೊರೆ ಹಾಗೂ ಗುಂಡಾಲ್ ಜಲಾಶಯಗಳನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಕೂಗು ದಶಕಗಳಿಂದಲೂ ಕೇಳಿಬರುತ್ತಿದೆ. ವಿಶೇಷ ದಿನ ಹಾಗೂ ವಾರಾಂತ್ಯದಲ್ಲಿ ಇಲ್ಲಿಗೆ ಜಿಲ್ಲೆ ಹಾಗೂ ಸುತ್ತಮುತ್ತಲಿನ ಸ್ಥಳೀಯರು ಬಂದು ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾರೆ. ಆದರೆ, ಎರಡೂ ಜಲಾಶಯಗಳು ಯಾವುದೇ ಸೌಕರ್ಯಗಳಿಲ್ಲದೇ ಅವನತಿ ಹಾದಿ ಹಿಡಿದಿವೆ.

ಕೊಳ್ಳೇಗಾಲದಿಂದ 15 ಕಿ.ಮೀ ದೂರದಲ್ಲಿರುವ ಗುಂಡಾಲ್‌ ಜಲಾಶಯವು ಹಸಿರು ಹೊದ್ದಿರುವ ಬೆಟ್ಟಗಳ ಸಾಲಿಗೆ ಹೊಂದಿಕೊಂಡಂತೆ ಇದೆ. ಅಪೂರ್ವವಾದ ರುದ್ರರಮಣೀಯ ಸೌಂದರ್ಯವನ್ನು ಹೊಂದಿರುವ ಈ ಜಲಾಶಯ ಹಾಗೂ ಸುತ್ತಮುತ್ತಲಿನ ಪ್ರದೇಶ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಕೆಲಸ ಪ್ರವಾಸೋದ್ಯಮ ಇಲಾಖೆಯಿಂದ ಆಗಿಲ್ಲ. ಕಾವೇರಿ ನೀರಾವರಿ ನಿಗಮವು ಈ ಜಲಾಶಯವನ್ನು ನಿರ್ವಹಿಸುತ್ತಿದೆ.

ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ತಪ್ಪಲಿನಲ್ಲಿರುವ ಈ ಜಲಾಶಯ ಚಲನಚಿತ್ರ ಹಾಗೂ ಪ್ರೀ ವೆಡ್ಡಿಂಗ್ ಶೂಟಿಂಗ್‌ಗೆ ವೇದಿಕೆಯಾಗುತ್ತಿದೆ. ಪ್ರಕೃತಿಯ ರಮಣೀಯತೆಯನ್ನು ಸವಿಯಲು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಕುಟುಂಬ ಸಮೇತರಾಗಿ ಬರುತ್ತಿರುತ್ತಾರೆ.

ಜಲಾಶಯದ ಆಕರ್ಷಣೆ ಹೆಚ್ಚಿಸುವುದಕ್ಕಾಗಿ ಗುಂಡಾಲ್‌ನಲ್ಲಿ 2019ರಲ್ಲಿ ₹80 ಲಕ್ಷ ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿತ್ತು.ಉದ್ಯಾನದ ಸುತ್ತಲೂ ನಡೆದಾಡುವ ಪಥ, ವಿಶ್ರಾಂತಿಗಾಗಿ ಅಲ್ಲಲ್ಲಿ ಕುರ್ಚಿಗಳು ಹಾಗೂ ಸುತ್ತಲೂ ತಂತಿ ಬೇಲಿಯನ್ನು ಹಾಕಲಾಗಿತ್ತು. ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಉದ್ಯಾನ ಹಾಳಾಗಿದೆ. ‌ಸುತ್ತಲೂ ಹಾಕಿದ್ದ ತಂತಿ ಬೇಲಿ ಕಿತ್ತು ಬಂದಿದೆ. ಅಲ್ಲಲ್ಲಿ ಅಳವಡಿಸಿದ್ದ ವಿಶ್ರಾಂತಿ ಕುರ್ಚಿಗಳೂ ಮುರಿದು ಬಿದ್ದಿದೆ. ಗಿಡಗಂಟಿಗಳ ಹಾವಳಿ ಹೆಚ್ಚಾಗಿದೆ.

ಪಾಳು ಬಿದ್ದ ಉಡುತೊರೆ ಜಲಾಶಯ

ತಾಲ್ಲೂಕಿನ ಅಜ್ಜೀಪುರ, ಸೂಳೇರಿಪಾಳ್ಯ, ರಾಮಾಪುರ ಹಾಗೂ ಕಾಂಚಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಕೃಷಿ ಭೂಮಿಗಳಿಗೆ ನೀರುಣಿಸುವ ಉದ್ದೇಶದಿಂದಕೆ.ಗುಂಡಾಪುರ ಬಳಿ ನಿರ್ಮಿಸಿರುವ ಉಡುತೊರೆ ಜಲಾಶಯವು ಪ್ರಕೃತಿ ಸೌಂದರ್ಯವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ.

1977–78ರಲ್ಲಿ ಈ ಜಲಾಶಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತಾದರೂ, ಕಾಮಗಾರಿ ಮುಗಿಯಲು ಬರೋಬ್ಬರಿ 38 ವರ್ಷಗಳನ್ನು ತೆಗೆದುಕೊಂಡಿತ್ತು. 2016ರಲ್ಲಿ ಜಲಾಶಯ ಲೋಕಾರ್ಪಣೆಗೊಂಡಿತ್ತು. ಐದು ವರ್ಷಗಳ ಅವಧಿಯಲ್ಲೇ ಅಣೆಕಟ್ಟು ನಿರ್ವಹಣೆ ಇಲ್ಲದೆ ಸೊರಗಿದೆ. ಜಲಾಶಯದ ವೀಕ್ಷಣೆಗೆ ಸ್ಥಳೀಯರು ಹಾಗೂ ಹೊರ ತಾಲ್ಲೂಕಿನವರು ಬರುತ್ತಿರುತ್ತಾರೆ. ಆದರೆ, ಬಂದವರಿಗೆ ಅಗತ್ಯವಾದ ಮೂಲಸೌಕರ್ಯ ಇಲ್ಲಿಲ್ಲ. ಹಾಗಾಗಿ, ಸುಂದರ ತಾಣವಾಗ ಬೇಕಾಗಿದ್ದ ಜಲಾಶಯ ಕುಡುಕರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.

‘ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಸ್ಥಳೀಯ ರೈತರಿಂದ 400 ಎಕರೆಗಳಷ್ಟ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆ ಜಾಗವು ಈಗ ಗಿಡಗಂಟಿಗಳು ಬೆಳೆದು ಪಾಳು ಬಿದ್ದಿದೆ. ಕೆಲವು ಕಡೆ ಒತ್ತುವರಿಯೂ ಆಗಿದೆ. ಅಧಿಕಾರಿಗಳುಒತ್ತುವರಿ ತೆರವುಗೊಳಿಸಿ ಆ ಜಾಗವನ್ನು ಅಭಿವೃದ್ಧಿಪಡಿಸಿ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆ ಹಸ್ತಾಂತರಿಸಿ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಅದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬಹುದು’ ಎಂದು ಹೇಳುತ್ತಾರೆ ಅಜ್ಜೀಪುರ ಗ್ರಾಮದ ಎಂ.ಜಗದೀಶ್.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನೀವಾರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಾಂತ ಕುಮಾರ್‌ ಅವರು, ‘ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು. ಜಲಾಶಯದ ನಿರ್ವಹಣೆಯ ಹೊಣೆ ನಮ್ಮದು. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದರು.

---

ಉಡುತೊರೆ ಜಲಾಶಯವನ್ನು ಕೃಷಿ ಉದ್ದೇಶಕ್ಕೆ ನಿರ್ಮಿಸಿದ್ದರೂ ತನ್ನ ಪ್ರಾಕೃತಿಕ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿದೆ. ಜಲಾಶಯದ ನಿರ್ವಹಣೆ ಸಮರ್ಪಕವಾಗಿಲ್ಲ
ಮರುಡೇಶ್ವರಸ್ವಾಮಿ, ಅಜ್ಜೀಪುರ

----

ವಾರಾಂತ್ಯದಲ್ಲಿ ಜನರು ಗುಂಡಾಲ್ ಜಲಾಶಯಕ್ಕೆ ಕುಟುಂಬ ಸಮೇತ ಬಂದು ಪ್ರಕೃತಿ ಸೌಂದರ್ಯ ಸವಿಯುತ್ತಾರೆ. ಆದರೆ, ನಿರ್ವಹಣೆಯಿಲ್ಲದೇ ಜಾಗವು ಅನೈತಿಕ ಚುಟುವಟಿಕೆ ತಾಣವಾಗಿದೆ
ಪ್ರಭುಸ್ವಾಮಿ, ದೊಡ್ಡಿಂದುವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.