ಚಾಮರಾಜನಗರ: ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನಿಯೋಜನೆಗೊಂಡಿರುವ ಸದಾಶಿವ ಸಿದ್ದಪ್ಪ ಸುಲ್ತಾನಪುರಿ ಅವರನ್ನು ಜಿಲ್ಲಾ ವಕೀಲರ ಸಂಘವು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿತು.
ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ ನ್ಯಾಯಾಧೀಶರು, ‘ನ್ಯಾಯಾಲಯವು ನಿರಂತರ ಕಲಿಕಾ ಕೇಂದ್ರವಾಗಿದ್ದು, ಹೊಸ ಹೊಸ ಪ್ರಕರಣಗಳು ಬರುತ್ತಲೇ ನ್ಯಾಯಾಧೀಶರು ಮತ್ತು ವಕೀಲರು ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾರೆ’ ಎಂದು ಹೇಳಿದರು.
‘ಚಾಮರಾಜನಗರ ಜಿಲ್ಲೆಯಲ್ಲಿ ಒಳ್ಳೇಯ ವಕೀಲ ಸಂಘವಿದ್ದು, ಉತ್ತಮ ವಕೀಲರೂ ಇದ್ದಾರೆ. ನ್ಯಾಯದ ನಿರೀಕ್ಷೆಯಲ್ಲಿ ಬರುವ ಜನರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ನ್ಯಾಯಾಧೀಶರು ಮತ್ತು ವಕೀಲರು ಸೇರಿ ಕಕ್ಷಿದಾರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ವಕೀಲರು ನಮಗೆ ಉತ್ತಮ ಸಹಕಾರ ನೀಡಬೇಕು’ ಎಂದರು.
‘ಇದೇ 19ರಂದು ಇ- ಲೋಕ ಅದಾಲತ್ ನಡೆಯಲಿದ್ದು, ರಾಜಿಯಾಗಬಹುದಾದ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಉಭಯ ಪಕ್ಷಗಾರರು ಇದರ ಸದುಪಯೋಗವನ್ನು ಪಡೆದುಕೊಳ್ಳುಬೇಕು’ ಎಂದು ಸದಾಶಿವ ಸಿದ್ದಪ್ಪ ಸುಲ್ತಾನಪುರಿ ಅವರು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿ, ‘ಕಕ್ಷಿದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೊಸ ನ್ಯಾಯಾಧೀಶರಿಗೆ ವಕೀಲರೆಲ್ಲರೂ ಸಹಕರಿಸಲಿದ್ದಾರೆ’ ಎಂದರು.
ಜಿಲ್ಲೆಯ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ವಿನಯ್ ಮತ್ತು ಜಿಲ್ಲಾ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಂಜುಹರವೆ, ಉಪಾಧ್ಯಕ್ಷ ಎಂ.ಶಿವರಾಮು, ಖಜಾಂಚಿ ನಾಗಮ್ಮ, ಪಬ್ಲಿಕ್ ಪ್ರಾಸಿಕ್ಯೂಟರ್ ಲೋಲಾಕ್ಷಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯೋಗೀಶ್, ವಕೀಲರಾದ ಕೆ. ಬಾಲಸುಬ್ರಮಣ್ಯ, ಪುಟ್ಟರಾಜು, ಕೆ.ಎಂ. ಶ್ರೀನಿವಾಸಮೂರ್ತಿ, ಎಂ.ಚಿನ್ನಸ್ವಾಮಿ, ಆರ್.ವಿರೂಪಾಕ್ಷ, ಪುಟ್ಟಸ್ವಾಮಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.