ADVERTISEMENT

ಹೊಸಪೇಟೆ ವಕೀಲ ವೆಂಕಟೇಶ್‌ ಹತ್ಯೆ ಖಂಡಿಸಿ ‌ವಕೀಲರಿಂದ ಕಲಾಪ ಬಹಿಷ್ಕಾರ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 14:53 IST
Last Updated 2 ಮಾರ್ಚ್ 2021, 14:53 IST
ಹೊಸಪೇಟೆಯಲ್ಲಿ ವಕೀಲ ವೆಂಕಟೇಶ್‌ ಹತ್ಯೆ ಖಂಡಿಸಿ ಚಾಮರಾಜನಗರದ ವಕೀಲರು ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು
ಹೊಸಪೇಟೆಯಲ್ಲಿ ವಕೀಲ ವೆಂಕಟೇಶ್‌ ಹತ್ಯೆ ಖಂಡಿಸಿ ಚಾಮರಾಜನಗರದ ವಕೀಲರು ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ವಿಜಯನಗರ ಜಿಲ್ಲೆಯ ಹೊಸಪೇಟೆಯ ವಕೀಲ ತಾರಳ್ಳಿ ವೆಂಕಟೇಶ್ ಅವರ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕಾರಿಸಿ ಪ್ರತಿಭಟನೆ ನಡೆಸಿದರು.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಿಂದ ಮೆರವಣಿಗೆ ನಡೆಸಿದ ವಕೀಲರು, ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ವಕೀಲ ತಾರಳ್ಳಿ ವೆಂಕಟೇಶ್ ಹಾಗೂ ತೆಲಂಗಾಣದ ವಕೀಲ ದಂಪತಿ ಕೊಲೆಯನ್ನು ಖಂಡಿಸಿದರು. ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿದರು. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

‘ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷಉಮ್ಮತ್ತೂರು ಇಂದುಶೇಖರ್ ಅವರು, ‘ತಾರಳ್ಳಿ ವೆಂಕಟೇಶ್ ಅವರು ಕೊಲೆಯಾಗಿರುವುದು ದುರದೃಷ್ಟಕರ. ಇದೊಂದು ಘೋರ ಕೃತ್ಯವಾಗಿದ್ದು, ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರನ್ನೇ ನ್ಯಾಯಾಲಯದ ಆವರಣದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವುದು ಸಮಾಜವೇ ತಲೆತಗ್ಗಿಸುವ ವಿಚಾರ. ಈ ಕೃತ್ಯದ ಹಿಂದೆ ಇರುವವರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ರಾಜ್ಯದಲ್ಲಿವಕೀಲರ ಮೇಲೆ ದಿನೇ ದಿನೇ ಹಲ್ಲೆ, ಕೊಲೆ ಪ್ರಯತ್ನ, ಹತ್ಯೆಗಳು ನಡೆಯುತ್ತಲೇ ಇವೆ. ಅವರ ಜೀವದ ರಕ್ಷಣೆಗಾಗಿ ಇದುವರೆಗೆ ಯಾವುದೇ ಸರ್ಕಾರ ಕಾನೂನು ತಂದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕೂಡಲೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಲು ಕ್ರಮ ವಹಿಸಬೇಕು. ಕಾಯ್ದೆ ಜಾರಿಗೆ ತರದಿದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಂಜು, ಜಂಟಿ ಕಾರ್ಯದರ್ಶಿ ಬಿ.ಮಂಜು, ವಕೀಲರಾದ ಬಿ.ಜಿ.ಜಯಪ್ರಕಾಶ್, ಸಿ.ಎನ್.ರವಿಕುಮಾರ್, ರಾಮಸಮುದ್ರ ಪುಟ್ಟಸ್ವಾಮಿ, ಎನ್.ಬಿ.ಮಹೇಶ್, ಬದನಗುಪ್ಪೆ ನಾಗರಾಜು, ಎಹ್ಸಾನ್ ಜಾವೀದ್, ಉತ್ತುವಳ್ಳಿ ಕುಮಾರ, ಶಿವಸ್ವಾಮಿ, ನಾಗಣ್ಣ, ಡಾ. ರಂಗಸ್ವಾಮಿ, ಎನ್.ಕೆ.ವಿರುಪಾಕ್ಷಾಸ್ವಾಮಿ, ಸಿ.ಚಿನ್ನಸ್ವಾಮಿ, ಪುಟ್ಟರಾಚಯ್ಯ, ದಲಿತ್ ರಾಜ್, ಗಟ್ಟವಾಡಿ ಮಹದೇವಸ್ವಾಮಿ, ಎನ್.ಪಿ.ನಾಗಾರ್ಜುನ್ ‌ಪೃಥ್ವಿ, ಪರಶಿವಮೂರ್ತಿ, ಬಿ.ಪ್ರಸನ್ನಕುಮಾರ್, ಎಂ.ಆರ್.ಸವಿತಾ, ರಾಜೇಶ್ವರಿ, ಮೇಘಾ, ಸಿ.ಚಿನ್ನಸ್ವಾಮಿ, ದುರ್ಗಪ್ಪ, ಹೆಗ್ಗವಾಡಿ ಮಹೇಂದ್ರ, ಸೋಮಣ್ಣ, ಶ್ರೀನಿವಾಸ್, ಸಿ.ಸಿ.ರಮೇಶ್, ಮಲ್ಲು, ಎಚ್.ಬಿ.ಮಹೇಶ್, ಎಚ್.ಬಿ.ಲೋಕೇಶ್, ಸುಂದರ್‌ರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.