ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ಸಂಭವಿಸಿರುವ ದುರಂತದ ಪ್ರಕರಣದ ಆರೋಪಿಗಳ ವಕಾಲತ್ತು ವಹಿಸದಿರಲು ಜಿಲ್ಲಾ ವಕೀಲರ ಸಂಘ ಸೋಮವಾರ ನಿರ್ಧರಿಸಿದೆ.
ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ನೇತೃತ್ವದಲ್ಲಿ ನಡೆದ ವಕೀಲರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನಂತರ ಮಾತನಾಡಿದ ಇಂದುಶೇಖರ್ ಅವರು, ‘ಇದೊಂದು ಅತ್ಯಂತ ಅಮಾನವೀಯ ಘಟನೆ. ಸಂಘವು ಇದನ್ನು ಬಲವಾಗಿ ಖಂಡಿಸುತ್ತದೆ. ಆರೋಪಿಗಳ ಪರ ಜಿಲ್ಲೆಯ ಯಾವೊಬ್ಬ ವಕೀಲರೂ ವಕಾಲತ್ತು ವಹಿಸುವುದಿಲ್ಲ’ ಎಂದು ಹೇಳಿದರು.
‘ಈ ಪ್ರಕರಣದ ಹಿಂದೆ ಪ್ರಭಾವಿಗಳು ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.
ನ್ಯಾಯಾಂಗ ತನಿಖೆಗೆ ಆಗ್ರಹ: ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಮಾತನಾಡಿ, ‘ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ಕಲಾಪ ಬಹಿಷ್ಕಾರ: ದುರಂತವನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಕೀಲರು ಸೋಮವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.