ADVERTISEMENT

ಚಾಮರಾಜನಗರ: ಹೊಸ ವರ್ಷಕ್ಕೆ ಮದ್ಯ ಮಾರಾಟ ಹೆಚ್ಚಳ

ಸೂರ್ಯನಾರಾಯಣ ವಿ.
Published 2 ಜನವರಿ 2024, 6:55 IST
Last Updated 2 ಜನವರಿ 2024, 6:55 IST
   

ಚಾಮರಾಜನಗರ: ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಜನರು ಅದ್ದೂರಿಯಾಗಿ ಆಚರಿಸಿದ್ದಾರೆ. ಪಾನಪ್ರಿಯರು ಭರ್ಜರಿ ಪಾರ್ಟಿ ಮಾಡಿದ್ದಾರೆ. ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ ಆಗಿರುವ ಮದ್ಯ ಮಾರಾಟದ ಅಂಕಿ ಅಂಶ ಇದನ್ನು ಹೇಳುತ್ತಿವೆ. 

ಅಬಕಾರಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಭಾನುವಾರ ಒಂದೇ ದಿನ ಜಿಲ್ಲೆಯಲ್ಲಿ 5,044 ಪೆಟ್ಟಿಗೆಗಳಷ್ಟು (ಕೇಸ್‌) ಮದ್ಯ ಹಾಗೂ 2,183 ಪೆಟ್ಟಿಗೆಗಳಷ್ಟು ಬಿಯರ್‌ ಮಾರಾಟವಾಗಿದೆ. ಒಟ್ಟು 7,227 ಪೆಟ್ಟಿಗೆ ಮದ್ಯ ಹಾಗೂ ಬಿಯರ್‌ ಬಿಕರಿಯಾಗಿದೆ. ಸಾಮಾನ್ಯ ದಿನಗಳಲ್ಲಿ ಎರಡೂ ಸೇರಿ ಸರಾಸರಿ 3,500 ಪೆಟ್ಟಿಗೆ ಮಾರಾಟವಾಗುತ್ತದೆ. 

ಕರ್ನಾಟಕ ರಾಜ್ಯ ಪಾನೀಯ ನಿಗಮದ (ಕೆಎಸ್‌ಬಿಸಿಎಲ್‌) ಡಿಪೊಗೆ ಭಾನುವಾರ ರಜೆ ಇರುತ್ತದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಜನರು ಮೋಜು- ಮಸ್ತಿ ಮಾಡುವುದರಿಂದ ಮದ್ಯಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ರಾಜ್ಯದೆಲ್ಲೆಡೆ ಡಿಪೊಗಳನ್ನು ತೆರೆಯಲು ಇಲಾಖೆ ಸೂಚಿಸಿತ್ತು. ಅದರಂತೆ ತಾಲ್ಲೂಕಿನ ಕೆಲ್ಲಂಬಳ್ಳಿ, ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿರುವ ಕೆಎಸ್‌ ಬಿಸಿಎಲ್‌ ಡಿಪೊದಿಂದ ಜಿಲ್ಲೆಯಲ್ಲಿರುವ 141 ಮಳಿಗೆಗಳಿಗೆ ಮದ್ಯ ಮತ್ತು ಬಿಯರ್‌ ಪೂರೈಕೆಯಾಗಿದೆ. 

ADVERTISEMENT

ಒಂದು ಪೆಟ್ಟಿಗೆಯಲ್ಲಿ 8.64 ಲೀಟರ್‌ಗಳಷ್ಟು ಮದ್ಯ ಇರುತ್ತದೆ. 5,044 ಪೆಟ್ಟಿಗೆ ಅಂದರೆ, 33,492.16 ಲೀಟರ್‌ಗಳಷ್ಟು ಮದ್ಯ ಭಾನುವಾರ ಮಾರಾಟವಾಗಿದೆ. ಒಂದು ಪೆಟ್ಟಿಗೆಯಲ್ಲಿ ಬಿಯರ್‌ 8.8 ಲೀಟರ್‌ಗಳಷ್ಟು ಇರುತ್ತದೆ. ಭಾನುವಾರ ಒಂದೇ ದಿನ  2,183 ಪೆಟ್ಟಿಗೆ ಅಂದರೆ  19,210.4 ಲೀಟರ್‌ಗಳಷ್ಟು ಬಿಯರನ್ನು ಗ್ರಾಹಕರು ಖರೀದಿಸಿದ್ದಾರೆ. 

2022ರ ಡಿಸೆಂಬರ್‌ 31ರಂದು ಆಗಿರುವ ಮದ್ಯ ಮಾರಾಟಕ್ಕಿಂತಲೂ ಹೆಚ್ಚು ಮಾರಾಟ ಈ ಡಿ.31ರಂದು ಆಗಿದೆ. 2022ರ ಡಿ.31ರಂದು 4,794 ಪೆಟ್ಟಿಗೆ ಮದ್ಯ ಮಾರಾಟವಾಗಿತ್ತು. ಆದರೆ, ಬಿಯರ್‌ ಈ ಬಾರಿಗಿಂತ ಹೆಚ್ಚು ಮಾರಾಟವಾಗಿತ್ತು. 2022ರ ವರ್ಷದ ಕೊನೆಯ ದಿನದಂದು 4,092 ಪೆಟ್ಟಿಗೆ ಬಿಯರ್‌
ಬಿಕರಿಯಾಗಿತ್ತು. 

ಕೊನೆ ತಿಂಗಳ ಮಾರಾಟವೂ ಹೆಚ್ಚು

2022ರ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ 2023ರ ಡಿಸೆಂಬರ್‌ನಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ. ‘2022ರ ಡಿಸೆಂಬರ್‌ನಲ್ಲಿ 86,150 ಪೆಟ್ಟಿಗೆ ಮದ್ಯ ಮತ್ತು 28,172 ಪೆಟ್ಟಿಗೆ ಬಿಯರ್‌ ಮಾರಾಟವಾಗಿತ್ತು. 2023ರ ಕೊನೆಯ ತಿಂಗಳಲ್ಲಿ 88,075 ಪೆಟ್ಟಿಗೆ ಮದ್ಯ, 37,829 ಪೆಟ್ಟಿಗೆ ಬಿಯರ್‌ ಮಾರಾಟವಾಗಿದೆ’ ಎಂದು ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ‘ಪ್ರಜಾವಾಣಿ’ಗೆ
ತಿಳಿಸಿದರು. 

ಬಿಯರ್‌ ಸೇವನೆ ಹೆಚ್ಚಳ

ಜಿಲ್ಲೆಯಲ್ಲಿ ಕೆಲವು ತಿಂಗಳುಗಳಿಗಳಿಂದೀಚೆಗೆ ಬಿಯರ್‌ ಮಾರಾಟದಲ್ಲಿ ಗಣನೀಯ ಹೆಚ್ಚಳ ಕಂಡು ಬರುತ್ತಿದೆ. 

ಡಿಸೆಂಬರ್‌ ಒಂದೇ ತಿಂಗಳಲ್ಲಿ 37,829 ಪೆಟ್ಟಿಗೆಗಳಷ್ಟು ಬಿಯರ್‌ ಮಾರಾಟವಾಗಿದೆ. 2022ರ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ, 9,657 ಪೆಟ್ಟಿಗೆಗಳಷ್ಟು ಹೆಚ್ಚು ಬಿಯರ್‌ ಈ ಬಾರಿ ಮಾರಾಟವಾಗಿದೆ. 

‘ಬುಲೆಟ್‌, ಆರ್‌ಸಿ, ಪವರ್‌ ಕೂಲ್‌ ಎಂಬ ಮೂರು ಬಿಯರ್‌ ಬ್ರ್ಯಾಂಡ್‌ಗಳು ಮಾರುಕಟ್ಟೆಗೆ ಬಂದಿದ್ದು, ಇವುಗಳ ಬೆಲೆ ಕಡಿಮೆ ಇದೆ. ಹಾಗಾಗಿ, ಜಿಲ್ಲೆಯ ಮದ್ಯ ಪ್ರಿಯರು ಇವುಗಳನ್ನು ಜಾಸ್ತಿ ಖರೀದಿಸುತ್ತಿದ್ದಾರೆ’ ಎಂದು ಅಬಕಾರಿ ಅಧಿಕಾರಿಗಳು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.