ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ದಾಖಲೆಯ ಮತದಾನವಾಗಿರುವುದು ಅಧಿಕಾರಿಗಳಿಗೆ ಸಮಾಧಾನ ತಂದಿದೆ.
ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಡೆದ ಮತದಾನದ ಪ್ರಮಾಣಕ್ಕೆ ಹೋಲಿಸಿದರೆ (ಶೇ 81.70), ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ (ಶೇ 76.81) ಕಡಿಮೆಯಾಗಿದ್ದರೂ, 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ (ಶೇ 76.22) ಈ ಬಾರಿ ಹೆಚ್ಚು ಮತದಾರರು ಹಕ್ಕು ಚಲಾಯಿಸಿದ್ದಾರೆ.
ಚುನಾವಣೆಯಿಂದ ಚುನಾವಣೆಗೆ ಮತದಾನದ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡುತ್ತಾರೆ.
ಹಲವು ಜಾಗೃತಿ ಕಾರ್ಯಕ್ರಮ: ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿತ್ತು.
ಜಾಥಾ, ಬೀದಿ ನಾಟಕ, ಪಂಜಿನ ಮೆರವಣಿಗೆ, ಉಪನ್ಯಾಸ, ಕಾರ್ಯಾಗಾರಗಳಂತಹ ಸಾಮಾನ್ಯ ಕಾರ್ಯಕ್ರಮಗಳು ಮಾತ್ರವಲ್ಲದೇ ಪ್ರತಿ ಮತಗಟ್ಟೆಗೆ ವಾಕಥಾನ್, ಮತದಾನದ ದಿನ ವಿಶೇಷ ಮತಗಟ್ಟೆಗಳ ಸ್ಥಾಪನೆಯಂತಹ ವಿನೂತನ ಕಾರ್ಯಕ್ರಮಗಳನ್ನೂ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
‘ಗರಿಷ್ಠ ಪ್ರಮಾಣದಲ್ಲಿ ಮತದಾನ ಆಗಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಹಲವು ನಿರ್ದೇಶನಗಳನ್ನು ನೀಡಿತ್ತು. ಬಿಎಲ್‌ಇಒಗಳು ಪ್ರತಿ ಮತದಾರರ ಮನೆಗೆ ಹೋಗಿ, ಮತಗಟ್ಟೆಯ ವಿವರ, ಸೀರಿಯಲ್ ನಂಬರ್ ವಿವರಗಳಿರುವ ಚೀಟಿಗಳನ್ನು ವಿತರಿಸಲು ಸೂಚಿಸಿತ್ತು. ‘ನಮ್ಮ ನಡಿಗೆ ಮತಗಟ್ಟೆ ಕಡೆಗೆ’ ಎಂಬ ನಡಿಗೆ ಕಾರ್ಯಕ್ರಮ ಕೂಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿತ್ತು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಆನಂದ್ ಪ್ರಕಾಶ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.
ದೋಷಮುಕ್ತ ಮತದಾರರ ಪಟ್ಟಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಯಶಸ್ವಿಯಾಗಿ ನಡೆದಿತ್ತು. ಹೊಸ ಮತದಾರರ ಸೇರ್ಪಡೆ, ನಿಧನರಾದವರು ಅಥವಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸ ಇಲ್ಲದವರ ಹೆಸರುಗನ್ನು ಪಟ್ಟಿಯಿಂದ ತೆಗೆಯುವುದು ಸೇರಿದಂತೆ ಪರಿಷ್ಕರಣೆ ಕಾರ್ಯ ವ್ಯವಸ್ಥಿತವಾಗಿ ನಡೆದಿತ್ತು.
‘ಮತದಾರರ ಪಟ್ಟಿಯಲ್ಲಿ ದೋಷಗಳಿದ್ದಷ್ಟೂ ಮತದಾರರ ಪ್ರಮಾಣ ಕಡಿಮೆಯಾಗುತ್ತದೆ. ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಮತದಾರರ ಹೆಸರು ಸೇರ್ಪಡೆ, ತೆಗೆಯುವುದು ಸೇರಿದಂತೆ ಪಟ್ಟಿ ಪರಿಷ್ಕರಣೆ ಚೆನ್ನಾಗಿ ನಡೆಯುತ್ತಿದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.
ರಾಜಕೀಯ ಪಕ್ಷಗಳ ಪಾತ್ರ: ಮತದಾನ ಹೆಚ್ಚಾಗುವಲ್ಲಿ ರಾಜಕೀಯ ಪಕ್ಷಗಳ ಪಾತ್ರವೂ ಮಹತ್ವಾಗಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.
‘ಗರಿಷ್ಠ ಮತದಾರರು ತಮ್ಮನ್ನು ಬೆಂಬಲಿಸಬೇಕು ಎಂಬ ಉದ್ದೇಶದಿಂದ ರಾಜಕೀಯ ಪಕ್ಷಗಳ ಮುಖಂಡರು ಬೂತ್ ಮಟ್ಟದಲ್ಲಿ ಜನರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತಾರೆ. ಇದಲ್ಲದೇ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಹೊಸ ಮತದಾರರ ಹೆಸರು ಸೇರ್ಪಡೆ ಮಾಡುವ ಬಗ್ಗೆ ಊರುಗಳಲ್ಲಿ ಜಾಗೃತಿ ಮೂಡಿಸುತ್ತಾರೆ ಮತದಾನದ ದಿನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುವುದನ್ನು ಅವರು ಖಾತ್ರಿ ಪಡಿಸುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳು ನಡೆಸುವ ಅಬ್ಬರದ ಪ್ರಚಾರ ಕೂಡ ಜನರನ್ನು ಮತಗಟ್ಟೆಯತ್ತ ಸೆಳೆಯುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.
ಜಿಲ್ಲೆಯಲ್ಲಿ ಹೆಚ್ಚು ಮತದಾನವಾಗಿರುವುದು ಸಂತಸದ ಸಂಗತಿ. ಜಿಲ್ಲಾಡಳಿತವು ಮತದಾರರ ಪರಿಷ್ಕರಣೆ ಕಾರ್ಯ ಚೆನ್ನಾಗಿ ನಡೆದಿದ್ದರೆ ಜಾಗೃತಿ ಕಾರ್ಯಕ್ರಮಗಳೂ ಪರಿಣಾಮಕಾರಿಯಾಗಿದ್ದವುಆನಂದ್ ಪ್ರಕಾಶ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ
ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 431626 ಪುರುಷರು 444756 ಮಹಿಳೆಯರು ಹಾಗೂ 62 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 876444 ಮಂದಿ ಮತದಾರರಿದ್ದಾರೆ. ಈ ಪೈಕಿ 673535 ಮಂದಿ ಹಕ್ಕು ಚಲಾಯಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 112880 ಪುರುಷರು 111793 ಮಹಿಳೆಯರು 10 ಲಿಂಗತ್ವ ಅಲ್ಪಸಂಖ್ಯಾತರು ಸೆರಿದಂತೆ ಒಟ್ಟು 224683 ಮತದಾರರಿದ್ದಾರೆ. ಈ ಪೈಕಿ 80972 ಪುರುಷರು 80.669 ಮಹಿಳೆಯರು 3 ಲಿಂಗತ್ವ ಅಲ್ಪಸಂಖ್ಯಾತರು ಸೇರಿ 161644 ಮತದಾರರು ಮತ ಚಲಾಯಿಸಿದ್ದಾರೆ.
ಕೊಳ್ಳೇಗಾಲ ಕ್ಷೇತ್ರದಲ್ಲಿ 108056 ಪುರುಷರು 111988 ಮಹಿಳೆಯರು 21 ಲಿಂಗತ್ವ ಅಲ್ಪಸಂಖ್ಯಾತರು ಸೇರಿ 220065 ಮತದಾರರಿದ್ದು ಇವರಲ್ಲಿ 81512 ಪುರುಷರು 82279 ಮಹಿಳೆಯರು 8 ಲಿಂಗತ್ವ ಅಲ್ಪಸಂಖ್ಯಾತರು ಸೇರಿ 163799 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 104903 ಪುರುಷರು 110517 ಮಹಿಳೆಯರು 15 ಲಿಂಗತ್ವ ಅಲ್ಪಸಂಖ್ಯಾತರು ಸೇರಿ 215435 ಮತದಾರರಿದ್ದು ಈ ಪೈಕಿ 84293 ಪುರುಷರು 85701 ಮಹಿಳೆಯರು ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 169995 ಮತದಾರರು ಕರ್ತವ್ಯ ನಿಭಾಯಿಸಿದ್ದಾರೆ.
ಗುಂಡ್ಲುಪೇಟೆ ಕ್ಷೇತ್ರದಲ್ಲಿ 105787 ಪುರುಷರು 110458 ಮಹಿಳೆಯರು 16 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 216261 ಮತದಾರರಿದ್ದಾರೆ. ಇವರಲ್ಲಿ 88509 ಪುರುಷರು 89586 ಮಹಿಳೆಯರು ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ 178097 ಮತದಾರರು ಹಕ್ಕು ಚಲಾಯಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.