ADVERTISEMENT

ಯಳಂದೂರು | ಆದರ್ಶ ವಿದ್ಯಾಲಯದ ಮಕ್ಕಳಿಗೆ ಶಾಲೆ ದೂರ: ಬಸ್ ಹಿಡಿಯಲು ಪರದಾಟ

ಆದರ್ಶ ವಿದ್ಯಾಲಯದ ಮಕ್ಕಳಿಗೆ ಶಾಲೆ ದೂರ: ಬಸ್ ಹಿಡಿಯಲು ಪರದಾಟ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 13:42 IST
Last Updated 11 ಆಗಸ್ಟ್ 2024, 13:42 IST
ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಕ್ಕಳನ್ನು ಬಸ್ ಹತ್ತಿಸಲು ನೆರವಾದ ನಿರ್ವಾಹಕ
ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಕ್ಕಳನ್ನು ಬಸ್ ಹತ್ತಿಸಲು ನೆರವಾದ ನಿರ್ವಾಹಕ    

ಯಳಂದೂರು: ತಾಲ್ಲೂಕಿನ ಮೆಲ್ಲಹಳ್ಳಿ ಗೇಟ್ ಬಳಿಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ ಹತ್ತಿಕೊಂಡು ಶಾಲೆಗೆ ತೆರಳಲು ಪ್ರಯಾಸಪಡಬೇಕಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಳಿದು ನಂತರ ಗ್ರಾಮೀಣ ರಸ್ತೆಯಲ್ಲಿ ನಡೆದು ಶಾಲೆಗೆ ತೆರಳಬೇಕಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲೆ ಇಲ್ಲವೇ ಮನೆ ಮುಟ್ಟುವುದು ತಡವಾಗುತ್ತಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಶಾಲೆಯಲ್ಲಿ 1ರಿಂದ 10ನೇ ತರಗತಿ ತನಕ 480 ಮಕ್ಕಳು ಕಲಿಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇದ್ದಾರೆ. ಮುಖ್ಯ ರಸ್ತೆಯಿಂದ 1 ಕಿ.ಮೀ. ದೂರದಲ್ಲಿ ಶಾಲೆ ಇದೆ. ಕೆಲವು ಮಕ್ಕಳು ಆಟೊ ಇಲ್ಲವೆ ಪೋಷಕರ ಜೊತೆ ಬರುತ್ತಾರೆ. ಉಳಿದವರು ಬಸ್ ನೆಚ್ಚಿಕೊಂಡಿದ್ದಾರೆ. ಆದರೆ, ಜನ ದಟ್ಟಣೆ ಇರುವ ಬಸ್ ನಿಲುಗಡೆ ಮಾಡದೆ ತೆರಳುವುದರಿಂದ ಮಕ್ಕಳು ಸಮಸ್ಯೆ ಎದುರಿಸುವಂತೆ ಆಗಿದೆ.

ಮೆಲ್ಲಹಳ್ಳಿ ಗೇಟ್ ರಾಷ್ಟ್ರೀಯ ಹೆದ್ದಾರಿ ಸಮೀಪ ಇದೆ. ಕೆಲವು ಬಸ್ ಗೇಟ್ ಬಳಿ ನಿಲ್ಲಿಸುವುದಿಲ್ಲ. ಇದರಿಂದ ಬಿಸಿಲು ಮಳೆ ಎನ್ನದೆ ಮಕ್ಕಳು ಕಾಯಬೇಕು. ಬಸ್ ಖಾಲಿ ಇದ್ದರೆ ಬಸ್ ಒಮ್ಮೊಮ್ಮೆ ನಿಂತು ಹೊರಡುತ್ತದೆ. ಈ ಮಾರ್ಗದಲ್ಲಿ ಪ್ರಾಯಣಿಕರ ದಟ್ಟಣೆ ಇರುವುದರಿಂದ ಮಕ್ಕಳನ್ನು ಹತ್ತಿಸಿಕೊಳ್ಳುವ ಸವಾಲು ನಿರ್ವಾಹಕರಿಗೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ಫುಟ್‌ಬೋರ್ಡ್‌ನಲ್ಲಿ ನಿಂತು, ಅಪಾಯ ಲೆಕ್ಕಿಸದೆ ತೆರಳಬೇಕಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ ಎಂದು ಪೋಷಕ ರೇವಣ್ಣ ಹೇಳಿದರು.

ADVERTISEMENT

ಕೋವಿಡ್‌ಗೂ ಮೊದಲು ಶಾಲೆ ತನಕ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಂತರ ಸ್ಥಗಿತವಾಯಿತು. ಗ್ರಾಮಗಳಿಂದ ಹೆಚ್ಚು ಮಕ್ಕಳು ದಾಖಲಾಗಿದ್ದು, ಶಾಲೆ ತನಕ ಬಸ್ ಓಡಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ. ಇದರಿಂದ ಶಿಕ್ಷಕರು ಮಕ್ಕಳನ್ನು ಮನೆಗೆ ಕಳಿಸುವ ಜವಬ್ದಾರಿಯನ್ನು ಹೊರಬೇಕಿದೆ ಎಂದು ಮುಖ್ಯ ಶಿಕ್ಷಕ ಗುರುಮೂರ್ತಿ ಹೇಳಿದರು.

ಮಳೆ ಬಂದರೆ ಶಾಲೆ ರಸ್ತೆ ಆಯೋಮಯ ಆಗುತ್ತದೆ. ಕೆಸರು ದಾರಿಯಲ್ಲಿ ನಡೆದು ಹೋಗಬೇಕು. ಸಂಜೆ ಮತ್ತು ಮುಂಜಾನೆ ಬಸ್ ಏರಲು ಸಾಹಸ ಮಾಡಬೇಕಾದ ಸ್ಥಿತಿ ಇಲ್ಲಿದೆ. ಈ ಬಗ್ಗೆ ಶೀಘ್ರ ಕ್ರಮವಹಿಸಬೇಕು. ಶಾಲಾ ಅವಧಿಯಲ್ಲಿ ಮಕ್ಕಳಿಗೆ ವಿಶೇಷ ಬಸ್ ಬಿಡಬೇಕು ಎಂದು ವಿದ್ಯಾರ್ಥಿಗಳಾದ ಸಾಧನಗೌಡ ಹಾಗೂ ಹರ್ಷಿತರಾವ್ ಒತ್ತಾಯಿಸಿದರು.

ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲೆ ಸಮೀಪದ ಗ್ರಾಮಿಣ ರಸ್ತೆಯಲ್ಲಿ ಬಸ್ ಏರಲು ಕಾಯುತ್ತಿದ್ದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.