ADVERTISEMENT

ಒಳ ಮೀಸಲಾತಿ; ಕೆಲವರಿಂದ ಅಪಪ್ರಚಾರ– ಅರಕಲವಾಡಿ ನಾಗೇಂದ್ರ ಆರೋಪ

ಮಾದಿಗ ಮುನ್ನಡೆ ಆತ್ಮ ಗೌರವ ಸಮಾವೇಶ ನಾಳೆ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 14:30 IST
Last Updated 19 ಡಿಸೆಂಬರ್ 2023, 14:30 IST
<div class="paragraphs"><p>ಅರಕಲವಾಡಿ ನಾಗೇಂದ್ರ</p></div>

ಅರಕಲವಾಡಿ ನಾಗೇಂದ್ರ

   

ಚಾಮರಾಜನಗರ: ‘ಒಳಮೀಸಲಾತಿ ಹಾಗೂ ಅದರ ಬಗ್ಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗುತ್ತಿರುವ ಸಮಾವೇಶದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಒಳ ಮೀಸಲಾತಿ ಪರಿಕಲ್ಪನೆಯ ಬಗ್ಗೆ ಅಪವ್ಯಾಖ್ಯಾನ ಮಾಡಲಾಗುತ್ತಿದೆ’  ಎಂದು ಸಮುದಾಯದ ಮುಖಂಡ ಅರಕಲವಾಡಿ ನಾಗೇಂದ್ರ ಮಂಗಳವಾರ ದೂರಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳಮೀಸಲಾತಿಗಾಗಿ ರಾಜ್ಯದಲ್ಲಿ ಮೂರು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ 1976ರಿಂದಲೂ ಒಳಮೀಸಲಾತಿ ಬಗ್ಗೆ ಚಳವಳಿ ಶುರುವಾಗಿತ್ತು. ಒಳ ಮೀಸಲಾತಿ ಬಗ್ಗೆ ಹಾಗೂ ಹೋರಾಟದ ಸದ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ನ.28ರಂದು ಮಾದಿಗ ಸಮಾವೇಶ್ ಆಯೋಜಿಸಲಾಗಿತ್ತು. ಅಲ್ಲಿ ಚರ್ಚೆ ನಡೆದು ಪ್ರತಿ ಜಿಲ್ಲೆಗಳಲ್ಲೂ ಮಾದಿಗ ಮುನ್ನಡೆ ಅತ್ಮಗೌರವ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು. 

ADVERTISEMENT

‘ಜಿಲ್ಲೆಯಲ್ಲಿ ಗುರುವಾರ (ಡಿ.21) ಸಮಾವೇಶ ಆಯೋಜಿಸಲಾಗಿದೆ. ಈಗಾಗಲೇ ಕೋಟೆ ಎಂ.ಶಿವಣ್ಣ ಹಾಗೂ ಇತರ ಮುಖಂಡರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾದಿಗ ಸಮುದಾಯದ ಎಲ್ಲ ಸಂಘಟನೆಗಳು ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಸಮುದಾಯದವರು ಮಾತ್ರವಲ್ಲದೆ, ಪ್ರಜ್ಞಾವಂತನಾಗರಿಕರೆಲ್ಲರೂ ಒಳಮೀಸಲಾತಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸಮಾವೇಶದ ಜಿಲ್ಲಾ ಉಸ್ತುವಾರಿಯೂ ಆಗಿರುವ ನಾಗೇಂದ್ರ ಹೇಳಿದರು. 

‘ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ  ಬೆಳಿಗ್ಗೆ 10:30ಕ್ಕೆ ಆರಂಭವಾಗುವ ಸಮಾವೇಶದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ,  ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರು, ಮಾಜಿ ಉಪಮುಖ್ಯಮಂತ್ರಿ ಗೋವಿಂದಕಾರಜೋಳ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿ. ರಮೇಶ್, ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಚ್. ಅನಿಲ್‌ಕುಮಾರ್‌ ಇತರರು ಪಾಲ್ಗೊಳ್ಳಲಿದ್ದಾರೆ’ ಎಂದರು. 

‘ಸಮುದಾಯದ ಜನರಿಗೆ ಒಳ ಮೀಸಲಾತಿ ಅರಿವು ಮೂಡಿಸುವುದು ಈ ಸಮಾವೇಶ ಉದ್ದೇಶವಾಗಿದೆ. ಈ ಸಮಾವೇಶವು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಮಾದಿಗರ ಆತ್ಮಗೌರವದ ಸಮಾವೇಶವಾಗಿರುತ್ತದೆ. ಈ ಯಶಸ್ಸು ಕಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಮುದಾಯದ ಮುಖಂಡರು ಇದಕ್ಕೆ ಕಿವಿಗೊಡಬೇಡಿ,  ಸಮಾವೇಶಕ್ಕೆ ಜಿಲ್ಲೆಯ 5 ತಾಲೂಕಿನ ಹಳ್ಳಿಗಳು, ನಗರ ಪ್ರದೇಶ ವ್ಯಾಪ್ತಿಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದರು.

‘ಮೂರು ದಶಕಗಳ  ಹೋರಾಟದ ಫಲವಾಗಿ  ಪ್ರಧಾನಿ ನರೇಂದ್ರ ಮೋದಿ ಅವರು ಒಳ ಮೀಸಲಾತಿ ನೀಡಲು ಕೇಂದ್ರ ಮಟ್ಟದಲ್ಲಿ  ಸಮಿತಿ ರಚನೆ ಮಾಡಿದ್ದಾರೆ ಎಂದರು. 

ವಕೀಲ ಬೂದಿತಿಟ್ಟು ರಾಜೇಂದ್ರ, ಚಾ.ಗು.ನಾಗರಾಜು, ಮುಖಂಡ ಮೂಡಹಳ್ಳಿ ಎಚ್. ಮೂರ್ತಿ, ಮಾದಿಗ ಯುವ ಜಾಗೃತಿ ವೇದಿಕೆಯ ಮನುದೇಮಹಳ್ಳಿ, ಮಾದಿಗ ಮಹಾಸಭಾದ ಗೌರವ ಅಧ್ಯಕ್ಷ ಲಿಂಗರಾಜು, ಮಾತಂಗ ಟ್ರಸ್ಟ್ ಕಾರ್ಯದರ್ಶಿ ಶಿವಣ್ಣ ರಾಮಸಮುದ್ರ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.