ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಕರಗದ ಭಕ್ತಸಾಗರ

ಶಿವರಾತ್ರಿ ದಿನ ರಾತ್ರಿ ಮಾದಪ್ಪನಿಗೆ ಚಿನ್ನದ ಕಿರೀಟ ಧಾರಣೆ, ಸಾವಿರಾರು ಭಕ್ತರಿಂದ ಜಾಗರಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 16:11 IST
Last Updated 9 ಮಾರ್ಚ್ 2024, 16:11 IST
ಮಹದೇಶ್ವರ ಬೆಟ್ಟದಲ್ಲಿ ಶನಿವಾರ ನಡೆದ ಕಂಡಾಯಗಳ ಮೆರವಣಿಗೆ ನಡೆದ ಸಂದರ್ಭದಲ್ಲಿ ಮಹಿಳಾ ಭಕ್ತರು ಕುಣಿದು ಕುಪ್ಪಳಿಸಿದರು 
ಮಹದೇಶ್ವರ ಬೆಟ್ಟದಲ್ಲಿ ಶನಿವಾರ ನಡೆದ ಕಂಡಾಯಗಳ ಮೆರವಣಿಗೆ ನಡೆದ ಸಂದರ್ಭದಲ್ಲಿ ಮಹಿಳಾ ಭಕ್ತರು ಕುಣಿದು ಕುಪ್ಪಳಿಸಿದರು    

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಶನಿವಾರವೂ ಸ್ವಾಮಿಗೆ ವಿವಿಧ ಉತ್ಸವಾದಿಗಳು ಜರುಗಿದವು. ಸಾವಿರಾರು ಭಕ್ತರು ವಿವಿಧ ಸೇವೆಗಳನ್ನು ಮಾಡಿ ಮಾದಪ್ಪನ ದರ್ಶನ ಪಡೆದರು.

ಶುಕ್ರವಾರ ರಾತ್ರಿ ಶಿವರಾತ್ರಿ ಜಾಗರಣೆ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಜಾಗರಣೆಗೂ ಮುನ್ನ ಸಾಲೂರು ಮಠದ ಶಾಂತಮಲ್ಲಿಕಾರ್ಜುನಸ್ವಾಮೀಜಿಯವರ ನೇತೃತ್ವದಲ್ಲಿ ಮಹದೇಶ್ವರ ಸ್ವಾಮಿಗೆ ವಿವಿದ ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ಕಾಣಿಕೆಯಾಗಿ ನೀಡಿರುವ 1.369 ಕೆಜಿ ತೂಗುವ ಚಿನ್ನದ ಕಿರೀಟವನ್ನು ಮಹದೇಶ್ವರ ಸ್ವಾಮಿಗೆ ಧಾರಣೆ ಮಾಡಿ, ಬೆಡಗಂಪಣ ವಿಧಿ ವಿಧಾನಗಳಲ್ಲಿ ಪೂಜೆ ಸಲ್ಲಿಸಲಾಯಿತು. 

ಶಿವರಾತ್ರಿಯ ದಿನ ರಾತ್ರಿ ಮಹದೇಶ್ವರಸ್ವಾಮಿಗೆ ಚಿನ್ನದ ಕಿರೀಟ ಧಾರಣೆ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು 

ಮಧ್ಯರಾತ್ರಿ 12 ಗಂಟೆಗೆ ಯಾಮಪೂಜೆಯು ನಡೆಯಿ/,ಶ್ರೀಗಳು ಸ್ವಾಮಿಗೆ ಅಭಿಷೇಕ ನೆರವೇರಿಸಿದರು. ಬೆಟ್ಟದ ತಾವರೆ, ಕಾಡು ಮಲ್ಲಿಗೆ, ಮುತ್ತುಗ, ಬನ್ನಿ, ಬಿಲ್ವ, ಅವ್ರಿಕೆ, ಹೀಗೆ ವಿವಿವಿಧ ಹೂವುಗಳಿಂದ ಸ್ವಾಮಿಯನ್ನು ಅರ್ಚಿಸಲಾಯಿತು.

ADVERTISEMENT

ಶನಿವಾರ ಮುಂಜಾನೆ ವೇಳೆ ಸ್ವಾಮಿಗೆ ಮಂಗಳಾರತಿ ಸೇವೆ, ಗಂಧಾಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ ನೆರವೇರಿಸಿದ ಬಳಿಕ ಭಕ್ತರ ದರ್ಶಕ್ಕೆ ಅನುವು ಮಾಡಿಕೊಡಲಾಯಿತು.

ಭಕ್ತಿಯಲ್ಲಿ ಮಿಂದೆದ್ದ ಭಕ್ತರು: ಶನಿವಾರವೂ ರಾಜ್ಯದ ವಿವಿಧ ಕಡೆಗಳಿಂದ ಕ್ಷೇತ್ರಕ್ಕೆ ಭಕ್ತರು ಬಂದಿದ್ದರು. ಮಹದೇಶ್ವರ ಸ್ವಾಮಿಯ ಉಪ ದೇವಾಲಯಗಳಿಂದ ಹಲವಾರು ಕಂಡಾಯಗಳು ಬಂದಿದ್ದು, ದೇವಾಲಯದಲ್ಲಿ ಆವರಣದಲ್ಲಿ ಕಂಡಾಯಗಳ ಮೆರವಣಿಗೆ ನಡೆಯಿರು. ವಾದ್ಯ ಮೇಳ, ಟಮಟೆ ಸದ್ದಿಗೆ ಮಹಿಳೆಯರೂ ಸೇರಿದಂತೆ ಎಲ್ಲ ಭಕ್ತರು ಭಾವ ಪರವಶರಾಗಿ ಕುಣಿದು ಕುಪ್ಪಳಿಸಿದರು.

ತಮಿಳುನಾಡಿನಿಂದ ಬಂದಿದ್ದ ಭಕ್ತಾದಿಗಳು ತಮ್ಮ ಗ್ರಾಮಗಳಿಂದ ಸ್ವಾಮಿಗೆ ತಂದಿದ್ದ ಮೀಸಲು ಬುತ್ತಿಯನ್ನು ಮಾದಪ್ಪನಿಗೆ ಎಡೆಯಿಟ್ಟು ಇತರರಿಗೆ ಅನ್ನ ಸಂತರ್ಪಣೆ ಮಾಡಿದರು. 

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದ ವರೆಗಿನ ರಸ್ತೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಕಸ ತೆರವುಗೊಳಿಸಿದರು

ಶತಾಯುಷಿ ಅಜ್ಜಿಗೆ ಸನ್ಮಾನ

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ನಡೆಸಿ ಗಮನಸೆಳೆದಿದ್ದ ತಿಪಟೂರು ಮೂಲದ 102 ವರ್ಷದ ಪಾರ್ವತಮ್ಮ ಅವರನ್ನು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಸನ್ಮಾನಿಸಿದರು. ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ಬಂದಿದ್ದ ಪಾರ್ವತಮ್ಮ ಮಹದೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು. ನಂತರ ಸಾಲೂರು ಮಠಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾಲೂರು ಶ್ರೀಗಳು ಅವರನ್ನು ಗೌರವಿಸಿ ಸನ್ಮಾನಿಸಿದರು.

ರಸ್ತೆಯಲ್ಲಿ ಬಿದ್ದಿದ್ದ ತ್ಯಾಜ್ಯ ತೆರವು

ಈ ಮಧ್ಯೆ ಶಿವರಾತ್ರಿ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಕಾಲ್ನಡಿಗೆಯಲ್ಲಿ ಬಂದಿದ್ದ ಭಕ್ತರು ದಾರಿ ಮಧ್ಯೆ ಎಸೆದಿದ್ದ ಪ್ಲಾಸ್ಟಿಕ್‌ ಬಾಟಲಿ ಸೇರಿದಂತೆ ಇನ್ನಿತರ ಕಸವನ್ನು ತೆರವುಗೊಳಿಸುವ ಕಾರ್ಯ ಶನಿವಾರ ಆರಂಭವಾಯಿತು.

ತಾಳಬೆಟ್ಟ ಹಾಗೂ ಅಲ್ಲಿಂದ ಬೆಟ್ಟದವರೆಗೂ ಸ್ವಚ್ಛತಾ ಕಾರ್ಯ ನಡೆಯಿತು. ಪೌರಕಾರ್ಮಿಕರು ಮತ್ತು ಪ್ರಾಧಿಕಾರದ ಸಿಬ್ಬಂದಿ ರಸ್ತೆ ಬದಿ ತಿರುವುಗಳು ಪಾದಯಾತ್ರೆ ನಡೆಯುವ ದಾರಿಗಳಲ್ಲಿ ಹಾಕಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ಟ್ರ್ಯಾಕ್ಟರ್‌ಗೆ ತುಂಬಿದರು.  ಮೊದಲೆಲ್ಲ ಈ ಕಸವನ್ನು ಜಾತ್ರೆ ಮುಗಿದ ಬಳಿಕವೇ ತೆರವುಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ಜಾತ್ರೆಯ ನಡುವೆ ಸ್ವಚ್ಛಗೊಳಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.