ADVERTISEMENT

ಚಾಮರಾಜನಗರ ಜಿಲ್ಲೆಯಾದ್ಯಂತ ಶಿವರಾತ್ರಿ ಸಂಭ್ರಮ

ಈಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ, ಬಿಳಿಗಿರಿಬೆಟ್ಟದಲ್ಲಿ ಗಂಗಾಧರೇಶ್ವರ ತೇರು ನಾಳೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 5:58 IST
Last Updated 8 ಮಾರ್ಚ್ 2024, 5:58 IST
ಯಳಂದೂರು ಪಟ್ಟಣದ ಪ್ರಸಿದ್ಧ ಗೌರೀಶ್ವರ ದೇಗುಲದಲ್ಲಿ ಶಿವರಾತ್ರಿಯ ಮುನ್ನಾದಿನ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು
ಯಳಂದೂರು ಪಟ್ಟಣದ ಪ್ರಸಿದ್ಧ ಗೌರೀಶ್ವರ ದೇಗುಲದಲ್ಲಿ ಶಿವರಾತ್ರಿಯ ಮುನ್ನಾದಿನ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು   

ಚಾಮರಾಜನಗರ/ಯಳಂದೂರು: ಸಡಗರ ಸಂಭ್ರಮಗಳ ನಡುವೆ ಶುಕ್ರವಾರ ಶಿವರಾತ್ರಿ ಹಬ್ಬ ಆಚರಿಸಲು ಜಿಲ್ಲೆಯಾದ್ಯಂತ ಶಿವನ ಭಕ್ತರು ಸಜ್ಜಾಗಿದ್ದಾರೆ.

ಶಿವನ ಆಲಯಗಳಲ್ಲಿ ಮುಂಜಾನೆಯಿಂದ ಪ್ರಾರ್ಥನೆ, ಜಪ, ಧ್ಯಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಭಕ್ತರು ಉಪವಾಸದಿಂದ ಇದ್ದು ಈಶ್ವರನನ್ನು ಅರ್ಚಿಸಲು, ರಾತ್ರಿ ಜಾಗರಣೆ ಮಾಡಲು ಮುಂದಾಗಿದ್ದಾರೆ. 

ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ದೇವಾಲಯ, ಯಳಂದೂರು ತಾಲ್ಲೂಕಿನ ಮಾಂಬಳ್ಳಿ ವೈದ್ಯನಾಥೇಶ್ವರ, ಆಮೆಕೆರೆ ಗಜಾರಣ್ಯ ಕ್ಷೇತ್ರದ ಶಿವ ಮಂಟಪ ಶಿವ ಪಾರ್ವತಿ ದೇವಳ, ಯಳಂದೂರಿನ ಪಂಚಲಿಂಗೇಶ್ವರ ಹಾಗೂ ಗೌರೀಶ್ವರ ದೇವಳ, ಗಣಿಗನೂರು ನೀಲಕಂಠೇಶ್ವರ ಹಾಗೂ ಕೆಸ್ತೂರು ತ್ರಿನೇತ್ರೇಶ್ವರ ದೇವಾಲಯಗಳು, ಜಿಲ್ಲೆಯಾದ್ಯಂತ ಇರುವ ಮಲೆ ಮಹದೇಶ್ವರ ದೇಗುಲಗಳು ಸೇರಿದಂತೆ ಶಿವನ ಆಲಯದಲ್ಲಿ ವಿಶೇಷ ವ್ರತಾಚರಣೆ ನಡೆಯಲಿವೆ.

ADVERTISEMENT

ಭಕ್ತರು ಹಬ್ಬದಂದು ಮಿಂದು ಮಡಿಯುಟ್ಟು ಶಿವ ಕ್ಷೇತ್ರಗಳಿಗೆ ತೆರಳಿ ಶಿವನಾಮ ಸ್ಮರಣೆ ಮಾಡುತ್ತಾರೆ. ಸ್ತ್ರೀಯರು ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಭಗವಂತನಿಗೆ ಭಕ್ತಿ ಸಮರ್ಪಿಸುತ್ತಾರೆ.

‘ಸಿಹಿಯೂಟ ಸಿದ್ಧಗೊಳಿಸಿ, ದೇವರಿಗೆ ನೈವೇದ್ಯ ಮಾಡಿ, ಉಪವಾಸ ನಿರತರಿಗೆ ನೀಡಲಾಗುತ್ತದೆ. ರಾತ್ರಿ ಪೂರ ಶಿವಾಲಯಗಳಿಗೆ ತೆರಳುವ ಭಕ್ತರು ಜಾಗರಣೆ ಮಾಡುತ್ತ, ಗಂಗಾಧರನನ್ನು ಆರಾಧಿಸುವ ಮೂಲಕ ಧನ್ಯತೆ ಮೆರೆಯುತ್ತಾರೆ’ ಎಂದು ಗೌರೀಶ್ವರ ದೇಗುಲದ ಅರ್ಚಕ ಚಂದ್ರಮೌಳಿ ಹೇಳುತ್ತಾರೆ.

ಹಬ್ಬದ ದಿನ ಭಕ್ತರು ಶಿವ ಶಂಕರನ ದೇವಾಲಯಗಳಿಗೆ ತೆರಳಿ ಬಿಲ್ವಪತ್ರೆ, ಎಳನೀರು, ಹಣ್ಣುಕಾಯಿ ಅರ್ಪಿಸುತ್ತಾರೆ. ಮಳೆ ಬೆಳೆ ಸಮೃದ್ಧಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬದ ನಂತರ ಬಿಸಿಲು ಹೆಚ್ಚಾಗುವುದರಿಂದ ಹೊಲ, ಗದ್ದೆಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿ, ಉತ್ತಮ ಬೆಳೆ ಕೈಸೇರಲಿ ಎಂದು ಗ್ರಾಮೀಣ ಭಾಗಗಳಲ್ಲಿ ಪ್ರಾರ್ಥಿಸುವ ರೂಢಿ ಈಗಲೂ ಇದೆ. 

ಶಿವರಾತ್ರಿ ವಿಶೇಷತೆ: ಮಾಘ ಕೃಷ್ಣ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಿಸಲಾಗುತ್ತದೆ. ಸಮುದ್ರ ಮಂಥನ ಸಂದರ್ಭ ಉದ್ಭವಿಸಿದ ಹಾಲಾಹಲವನ್ನು ಪರಮೇಶ್ವರ ಸೇವಿಸಿದ. ಈ ದಿನದಂದು ಈತ ನೀಲಕಂಠನಾಗಿ ಜಗತ್ತನ್ನು ರಕ್ಷಿಸಿದ. ಶಿವ ಪಾರ್ವತಿಯರ ವಿವಾಹ ದಿನ ಹಾಗೂ ಈಶ್ವರ ತಾಂಡವ ನೃತ್ಯ ಮಾಡಿದ ದಿನವಾಗಿ ಗುರುತಿಸಲಾಗುತ್ತದೆ.   

ರಥೋತ್ಸವ ನಾಳೆ: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಗಂಗಾಧರೇಶ್ವರ ರಥೋತ್ಸವ ಶನಿವಾರ (ಮಾರ್ಚ್‌ 9)  ನಡೆಯಲಿದೆ. ಮಹಾ ಶಿವರಾತ್ರಿ ಹಬ್ಬದಂದು ರಥ ಸಿಂಗರಿಸುವ ಕಾರ್ಯಕ್ಕೆ ಸ್ಥಳೀಯರು ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಗಂಗಾಧೇರಶ್ವರ ತೇರಿಗೆ ಚಾಲನೆ ಸಿಗಲಿದೆ. ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

ವಸ್ತ್ರಬೆಲ್ಲದ ಆಚರಣೆ

ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಲಿಂಗಾಯತ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ತವರು ಮನೆಯವರು ವಸ್ತ್ರಬೆಲ್ಲ ಹಂಚುವ ಪದ್ಧತಿ ಇದೆ.  ‘ಈ ಆಚರಣೆ ಅಣ್ಣ ತಂಗಿ ಬಾಂಧವ್ಯದ ಸಂಕೇತ. ಹೆಣ್ಣು ಮಕ್ಕಳು ಹಬ್ಬದ ಸಂದರ್ಭದಲ್ಲಿ ತವರು ಮನೆಯಿಂದ ತಂದೆಯೋ ಅಥವಾ ಸಹೋದರರು ಬರುವುದನ್ನು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಬೆಲ್ಲ ವಸ್ತ್ರ ಪೂಜಾ ಸಾಮಗ್ರಿ ಅರಿಸಿನ ಕುಂಕುಮ ಧನ ಧಾನ್ಯ ಒಡವೆ ನೀಡುತ್ತಾರೆ. ಹಬ್ಬದ ದಿನ ಸುಮಂಗಲಿಯರು ಎಲ್ಲ ದೈವಿಕ ವಸ್ತುಗಳನ್ನು ಶಿವನ ಮುಂದೆ ಇಟ್ಟು ತವರು ಸುಭಿಕ್ಷವಾಗಲಿ ಎಂದು ಹಾರೈಸುತ್ತಾರೆ’ ಎಂದು ಗೌಡಹಳ್ಳಿ ದೊರೆಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.