ADVERTISEMENT

ಮಹದೇಶ್ವರ ಬೆಟ್ಟ: ದೀಪಾವಳಿ ಜಾತ್ರೆಗೆ ಮಾದಪ್ಪನ ಸನ್ನಿಧಿ ಸಿಂಗಾರ

ಜಿ.ಪ್ರದೀಪ್ ಕುಮಾರ್
Published 28 ಅಕ್ಟೋಬರ್ 2024, 6:23 IST
Last Updated 28 ಅಕ್ಟೋಬರ್ 2024, 6:23 IST
ದೀಪಾವಳಿ ಜಾತ್ರೆಗೆ ಮಲೆ ಮಹದೇಶ್ವರ ದೇವಸ್ಥಾನದ ರಾಜಗೋಪುರದ ಪ್ರವೇಶದ್ವಾರವನ್ನು ಅಲಂಕರಿಸಲಾಗಿದೆ
ದೀಪಾವಳಿ ಜಾತ್ರೆಗೆ ಮಲೆ ಮಹದೇಶ್ವರ ದೇವಸ್ಥಾನದ ರಾಜಗೋಪುರದ ಪ್ರವೇಶದ್ವಾರವನ್ನು ಅಲಂಕರಿಸಲಾಗಿದೆ   

ಮಹದೇಶ್ವರ ಬೆಟ್ಟ: ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಮಾದಪ್ಪನ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಹರಿದು ಬರಲಿದ್ದು, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಕ್ತರಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.

ದೀಪಾವಳಿಯ ಸಂದರ್ಭ ಮಲೆ ಮಹದೇಶ್ವರಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುವುದು ವಾಡಿಕೆಯಾಗಿದ್ದು, ಈ ಬಾರಿಯು ಭಾರಿ ಸಂಖ್ಯೆಯ್ಲಲಿ ಭಕ್ತರು ಬರುವ ನಿರೀಕ್ಷೆ ಇದೆ. ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಅ.29ರಿಂದ ದೀಪಾವಳಿ ಜಾತ್ರೆಯ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ನ.2ರವರೆಗೆ ನಡೆಯಲಿದೆ. ಕೊನೆಯ ದಿನ ಮಹಾರಥೋತ್ಸವ ನಡೆಯಲಿದ್ದು ಜಾತ್ರೆಗೆ ತೆರೆಬೀಳಲಿದೆ.

ಸಕಲ ಸಿದ್ಧತೆ: ಬೆಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜಾ ಕೈಂಕರ್ಯ, ಹಾಲರವಿ ಉತ್ಸವ ನಡೆಸುವ ಕುರಿತು ಪಾರುಪತ್ತೆಗಾರರು, ಪ್ರಧಾನ ಆಗಮಿಕರು, ಅರ್ಚಕರ ಜೊತೆ ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು.ಎ.ಈ ಚರ್ಚೆ ನಡೆಸಿದ್ದಾರೆ. ಹಾಲರುವೆ ಸೇವೆಗೆ ದಾನಿಗಳು ನೀಡಿರುವ 101 ಸೀರೆಗಳ ಪರಿಶೀಲನೆ ನಡೆಸಲಾಗಿದೆ. 

ADVERTISEMENT

ಮಲೆ ಮಹದೇಶ್ವರಸ್ವಾಮಿಯ ದರ್ಶನ ಮಾಡುವ ವೇಳೆ ಭಕ್ತರಿಗೆ ನೂಕು ನುಗ್ಗಲು ಉಂಟಾಗದಂತೆ ಸರತಿಸಾಲಿನ ವ್ಯವಸ್ಥೆ, ನೆರಳು, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ದಾಸೋಹ ವ್ಯವಸ್ಥೆಗೆ ವಿಶೇಷ ಒತ್ತು ನೀಡಲಾಗಿದೆ. ಭಕ್ತರ ಬಾಯಾರಿಕೆ ತಣಿಸಲು ಅಲ್ಲಲ್ಲಿ ತೊಂಬೆಗಳು ಹಾಗೂ ನಲ್ಲಿಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಶೌಚಾಲಯ ವ್ಯವಸ್ಥೆ, ಹೆಚ್ಚುವರಿಯಾಗಿ ಲಾಡು ಕೌಂಟರ್‌ಗಳನ್ನು ತೆರಯಲಾಗುತ್ತಿದ್ದು, ಉತ್ಸವಕ್ಕೆ ಪೂರ್ವಭಾವಿಯಾಗಿ ಭಕ್ತರ ಬೇಡಿಕೆಗೆ ತಕ್ಕಂತೆ ಲಾಡು ತಯಾರಿ ಕಾರ್ಯ ನಡೆಯಲಿದೆ. ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ನೂರಾರು ಕೆ.ಎಸ್.ಆರ್.ಟಿ.ಸಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಕ್ಷೇತ್ರದಲ್ಲಿ ವಾಹನ ದಟ್ಟಣೆ ತಪ್ಪಿಸಲು ಪಾರ್ಕಿಂಗ್ ಜಾಗ ಗುರುತಿಸಲಾಗಿದೆ. ದೇವಾಲಯಕ್ಕೆ ವರ್ಣರಂಜಿತ ವಿದ್ಯುತ್ ದೀಪಾಲಂಕಾರ, ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗುತ್ತಿದೆ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಮಹಾರಥ ನಿರ್ಮಾಣ: ‌ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಜರುಗುವ ರಥೋತ್ಸವಕ್ಕೆ ಮಹಾರಥ ನಿರ್ಮಾಣಕ್ಕೆ ಬೇಡಗಂಪಣ ಸಮುದಾಯದ ಸರದಿ ಅರ್ಚಕರ ತಂಡ ಸಿದ್ಧತೆ ಮಾಡಿಕೊಂಡಿದ್ದು ಬಿದಿರು, ಅಚ್ಚೆ, ವಸ್ತ್ರ ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿದೆ. ಇನ್ನೆರಡು ದಿನಗಳಲ್ಲಿ ಮಹಾರಥ ನಿರ್ಮಾಣ ಕಾರ್ಯ ಆರಂಭವಾಗಲಿದೆ.

ನೆರಳಿನ ವ್ಯವಸ್ಥೆಗಾಗಿ ದೇವಾಲಯದ ಮುಂಭಾಗ ಹಾಕಲಾಗಿರುವ ಶಾಮಿಯಾನ

ಧಾರ್ಮಿಕ ಕಾರ್ಯಕ್ರಮಗಳು

ಅ30 ರಂದು ಮಲೆ ಮಹದೇಶ್ವರಸ್ವಾಮಿಗೆ ಎಣ್ಣೆಮಜ್ಜನ ಸೇವೆ ಉತ್ಸವಾದಿ 31ರಂದು ನರಕ ಚತುರ್ದಶಿ ವಿಶೇಷ ಸೇವೆ ನ.1ರಂದು ದೀಪಾವಳಿ ಅಮಾವಾಸ್ಯೆ ಹಾಲರವಿ ಉತ್ಸವವು ಸಾಲೂರು ಬ್ರಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ನ.2ರಂದು ಬೆಳಿಗ್ಗೆ 7.50 ರಿಂದ 9 ಗಂಟೆಯವರೆಗೆ ದೀಪಾವಳಿ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಬಳಿಕ ಗುರುಬ್ರಹ್ಮೋತ್ಸವ ಮತ್ತು ಅನ್ನಬ್ರಹ್ಮೋತ್ಸವ  ನಡೆಯಲಿದೆ.

ನಡೆಯದ ತೆಪ್ಪೋತ್ಸವ; ಭಕ್ತರಲ್ಲಿ ಬೇಸರ

ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವ ಎಂದರೆ ತೆಪ್ಪೋತ್ಸವ. ವಿಜಯ ದಶಮಿ ದೀಪಾವಳಿ ಕಡೆ ಕಾರ್ತಿಕ ಸೋಮವಾರದಲ್ಲಿ ತೆಪ್ಪೋತ್ಸವ ನಡೆಯುವುದು ಸಂಪ್ರದಾಯ. ತೆಪ್ಪೋತ್ಸವದಲ್ಲಿ ಸಿಡಿಮದ್ದುಗಳ ಪ್ರದರ್ಶನ ಆಕಾಶಬುಟ್ಟಿಗಳ ಹಾರಾಟ ಭಕ್ತರ ಮನಸೂರೆಗೊಳ್ಳುತ್ತಿತ್ತು. ನಾಲ್ಕು ವರ್ಷದಿಂದ ದೊಡ್ಡಕಡರಡ ಕಾಮಗಾರಿ ನಡೆಯುತ್ತಿರುವುದರಿದ ತೆಪ್ಪೋತ್ಸವ ಸ್ಥಗಿತವಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕಾರ್ತಿಕ ಮಾಸದಲ್ಲಾದರೂ ತೆಪ್ಪೋತ್ಸವಕ್ಕೆ ಅನುವು ಮಾಡಿಕೊಡಬೇಕು ಎಂದು ಬೆಂಗಳೂರು ಮೂಲದ ನರೇಶ್ ಹಾಗೂ ಮಹಾದೇವ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.