ಮಾದೇಶ್ವರ ಬೆಟ್ಟ: ರಾಜ್ಯದ ಗಡಿಯಂಚಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಮಲೆ ಮಹದೇಶ್ವರ ದೇಗುಲದಲ್ಲಿ ಪ್ರತಿವರ್ಷ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಅ.29ರಿಂದ ನ.2ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ.
ಮಹದೇಶ್ವರ ಬೆಟ್ಟದಲ್ಲಿ ಪ್ರಮುಖವಾಗಿ ದೀಪಾವಳಿ, ಮಹಾ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಸಂದರ್ಭ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನೆರವೇರುತ್ತವೆ. ಉಳಿದಂತೆ ಮಹಾಲಯ ಅಮಾವಾಸ್ಯೆ, ಭೀಮನ ಅಮಾವಾಸ್ಯೆ, ಕಾರ್ತಿಕ ಅಮಾವಾಸ್ಯೆಯ ಸಂದರ್ಭವೂ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬಂದು ಮಾದಪ್ಪನ ದರ್ಶನ ಪಡೆಯುತ್ತಾರೆ.
ಮಹದೇಶ್ವರ ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವ ವಿಶೇಷ ಮಹತ್ವ ಪಡೆದುಕೊಂಡಿದೆ. ಕಾರಣ, ಈ ಸಂದರ್ಭ ಬೆಟ್ಟಕ್ಕೆ ಬರುವ ಭಕ್ತರು ಊರು ಕೇರಿಗಳನ್ನು ಶುಚಿಗೊಳಿಸಿ ಮಾಂಸಹಾರ ಸೇವನೆ ತ್ಯಜಿಸುತ್ತಾರೆ.(ಬೆಟ್ಟಕ್ಕೆ ಹೋಗಿ ಬರುವವರೆಗೆ). ಕೆಲ ಗ್ರಾಮಗಳಲ್ಲಿ ಚಂದಾ ಎತ್ತಿ ಬೆಟ್ಟಕ್ಕೆ ಯಾತ್ರೆ ಮಾಡಲಾಗುತ್ತದೆ.
ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬಂದರೆ ಉಳಿದವರು ವಿವಿಧ ಸಾರಿಗೆಗಳ ಮೂಲಕ ಬರುತ್ತಾರೆ. ದೇವಾಲಯಕ್ಕೆ ಬರುವ ಭಕ್ತರು ಮನೆಗಳಲ್ಲಿ ಮಾದಪ್ಪನಿಗೆ ಮೀಸಲು ಬುತ್ತಿ ಸಿದ್ಧಪಡಿಸಿ ಅರ್ಪಿಸುವುದು ಸಂಪ್ರದಾಯ. ಇಡೀ ಗ್ರಾಮವೇ ಒಟ್ಟಾಗಿ ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡಿ ಮೀಸಲಿರಿಸಿದ ಬುತ್ತಿಯನ್ನು ಒಂದೆಡೆ ಪ್ರಸಾದವನ್ನು ಸ್ವೀಕರಿಸಿ ಧಾರ್ಮಿಕ ಉತ್ಸವಗಳಲ್ಲಿ ಪಾಲ್ಗೊಳ್ಳುವುದು ಕೂಡ ವಾಡಿಕೆ.
ಪರು ಸೇವೆ: ದೀಪಾವಳಿ ಜಾತ್ರೆಗೆ ಬರುವ ಭಕ್ತರು ಗ್ರಾಮಗಳಿಂದ ಸಂಗ್ರಹಿಸಿದ ಹಣದಲ್ಲಿ ದಿನಸಿ ಖರೀದಿಸಿ ಅಡುಗೆ ಸಿದ್ಧಪಡಿಸಿ ಗ್ರಾಮಸ್ಥರಿಗೆ ಉಣಬಡಿಸುವ ವಾಡಿಕೆ ದಶಕಗಳಿಂದ ನಡೆದು ಬಂದಿದೆ. ಕ್ಷೇತ್ರದಲ್ಲಿ ನಡೆಯುವ ‘ಪರು’ ಸೇವೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುವುದು ವಿಶೇಷ. ಪರಶೆ ಸೇವೆ ಮಾಡಿದರೆ ಗ್ರಾಮ ಹಾಗೂ ಕುಟುಂಬಕ್ಕೆ ದವಸ ಧಾನ್ಯಗಳ ಕೊರತೆ ಉಂಟಾಗುವುದಿಲ್ಲ ಎಂಬುದು ಭಕ್ತರ ನಂಬಿಕೆ.
ಕಡಲೆ ಸೇವೆ: ದೀಪಾವಳಿ ಜಾತ್ರೆಯ ಸಂದರ್ಭ ಕಡಲೆ ಸೇವೆ ಕೂಡ ವಿಶೇಷ. ಗ್ರಾಮಸ್ಥರು ಗುಂಪುಗಳಲ್ಲಿ ದೇವಾಲಯದ ಆವರಣದಲ್ಲಿ ತಂಗಿ ಕಡಲೆ, ಬೆಲ್ಲ, ಕೊಬ್ಬರಿ, ಕಲ್ಲು ಸಕ್ಕರೆ ಬೆರೆಸಿ ಪೂಜೆ ನೆರವೇರಿಸಿ ಸ್ವಾಮಿಗೆ ಮೀಸಲು ಅರ್ಪಿಸಿ ಪ್ರಸಾದವನ್ನಾಗಿ ಮನೆಗೆ ಕೊಂಡೊಯ್ಯುತ್ತಾರೆ.
ರಜಾ ಹೊಡೆಯುವ ಸೇವೆ (ಕಸ ಗೂಡಿಸುವುದು): ಮಾದೇಶ್ವರನಿಗೆ ಸಲ್ಲಿಸುವ ಸೇವೆಗಳಲ್ಲಿ ರಜಾ ಹೊಡೆಯುವುದು ಅಂದರೆ ಕಸ ಗುಡಿಸುವುದು ಸಹ ಪ್ರಮುಖ ಸೇವೆ. ಮಕ್ಕಳಿಲ್ಲದ ದಂಪತಿ ಜಾತ್ರೆಯ ಸಂದರ್ಭ ರಜಾ ಹೊಡೆಯುವ ಸೇವೆ ಸಲ್ಲಿಸುತ್ತಾರೆ. ಇದಕ್ಕಾಗಿಯೇ ಜಾತ್ರೆ ಪ್ರಾರಂಭಕ್ಕೂ ಮುನ್ನವೇ ದೇವಾಲಯಕ್ಕೆ ಬರುತ್ತಾರೆ. 48 ದಿನ, 15 ದಿನ, 7 ದಿನ ಹೀಗೆ ಹಲವು ಪ್ರಕಾರಗಳಲ್ಲಿ ರಜಾ ಸೇವೆ ನಡೆಯುತ್ತದೆ.
ಬೆಟ್ಟದಲ್ಲಿ ಮೂಲಸೌಲಭ್ಯಗಳ ಕೊರತೆ
ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು ಆದಾಯವೂ ಹೆಚ್ಚಾಗಿದೆ. ಹುಂಡಿಗೆ ಕೋಟಿ ಕೋಟಿ ಕಾಣಿಕೆ ಬೀಳುತ್ತಿದ್ದು ಅಥಿತಿ ಗೃಹ ಅಂಗಡಿ ಮಳಿಗೆಗಳು ಸಾರಿಗೆ ವಲಯವೂ ಲಾಭದಾಯಕವಾಗಿದೆ. ಆದರೆ ಕ್ಷೇತ್ರದಲ್ಲಿ ಭಕ್ತರಿಗೆ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಜಾತ್ರೆಯ ಸಂದರ್ಭ ತಾತ್ಕಾಲಿಕ ನೆರಳಿನ ವ್ಯವಸ್ಥೆ ಸರತಿ ಸಾಲಿನ ವ್ಯವಸ್ಥೆ ಮಾಡಿದರೂ ನೂಕು ನುಗ್ಗಲು ತಪ್ಪುತ್ತಿಲ್ಲ. ಸಾಲಿನಲ್ಲಿ 5 ರಿಂದ 6 ತಾಸು ನಿಂತು ಮಾದಪ್ಪನ ದರ್ಶನ ಮಾಡಬೇಕಾಗಿದ್ದು ಮಹಿಳೆಯರು ಮಕ್ಕಳ ಸ್ಥಿತಿ ಹೇಳತೀರದು. ಅಶಕ್ತರಿಗೆ ಮಹಿಳೆಯರು ಮಕ್ಕಳು ಸಹಿತ ಭಕ್ತರಿಗೆ ಶೀಘ್ರ ದರ್ಶನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸುತ್ತಾರೆ ಭಕ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.