ADVERTISEMENT

ಮಹದೇಶ್ವರ ಬೆಟ್ಟ: ಬ್ರಹ್ಮರಥಕ್ಕೆ ಹೊಸ ವಿಗ್ರಹ, ಸೇವೆಗೆ ಸಿಗದ ಬೆಳ್ಳಿತೇರು

ಮಹದೇಶ್ವರ ಬೆಟ್ಟ: ದೊಡ್ಡ ರಥ ದುರಸ್ತಿಗೆ ಭಕ್ತರ ಸಂತಸ, ಬೆಳ್ಳಿ ರಥದ ಸೇವೆ ಶೀಘ್ರ ಆರಂಭಕ್ಕೆ ಆಗ್ರಹ

ಜಿ ಪ್ರದೀಪ್ ಕುಮಾರ್
Published 14 ಜೂನ್ 2023, 23:30 IST
Last Updated 14 ಜೂನ್ 2023, 23:30 IST
ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥದ ನೋಟ
ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥದ ನೋಟ   

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥದಲ್ಲಿ ಅಳವಡಿಸಲಾಗಿದ್ದ, ಭಿನ್ನಬಂದಿದ್ದ ಶಿಲ್ಪಗಳನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬದಲಾಯಿಸಿದೆ. ಶಿಲ್ಪಿಗಳಿಂದ ಹೊಸ ವಿಗ್ರಹವನ್ನು ಕೆತ್ತಿಸಿ ರಥಕ್ಕೆ ಅಳವಡಿಸಿದೆ. 

ಲಕ್ಷಾಂತರ ಭಕ್ತರು ಭೇಟಿ ನೀಡುವ ಪವಾಡ ಪುರುಷ ಮಲೆ ಮಹದೇಶ್ವರನ ಸನ್ನಿಧಿಗೆ 1935ರ ಏ.4ರಂದು ಮೈಸೂರಿನ ರಾಜರಾಗಿದ್ದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್‌ ಅವರು ಯುಗಾದಿ ಹಬ್ಬದ ಜಾತ್ರೆಗೆ ರಥವನ್ನು ಕೊಡುಗೆ ನೀಡಿದ್ದರು. 2020ರಲ್ಲಿ ರಥದ ಸುತ್ತು ಮರಗಳನ್ನು ದುರಸ್ತಿ ಮಾಡಲಾಗಿತ್ತು. ರಥದಲ್ಲಿದ್ದ ವಿವಿಧ ದೇವರ ಶಿಲ್ಪಗಳಲ್ಲಿ ಬಿರುಕು ಆ ನಂತರ ಗಮನಕ್ಕೆ ಬಂದಿತ್ತು. 

ಮರ, ಶಿಲ್ಪಗಳು ಭಿನ್ನವಾಗಿದ್ದರೆ ಮಹಾರಥಕ್ಕೆ ಪೂಜೆ ಮಾಡುವುದು, ಮಹಾರಥೋತ್ಸವ ನೆರವೇರಿಸುವುದು ಸರಿಯಲ್ಲ. ಅದನ್ನು ದುರಸ್ತಿ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಥವನ್ನು ದುರಸ್ತಿ ಮಾಡಿದೆ.

ADVERTISEMENT

ಬಿರುಕು ಬಿಟ್ಟಿದ್ದ ವಿವಿಧ ದೇವತೆಗಳ 10 ವಿಗ್ರಹಗಳನ್ನು ತೆಗೆದು ಹೊಸದಾಗಿ ಶಿಲ್ಪಗಳನ್ನು ಅಳವಡಿಸಲಾಗಿದೆ. ನುರಿತ ಶಿಲ್ಪಿ ಬೆಂಗಳೂರಿನ ಶಿವಕುಮಾರ್ ಬಡಿಗೇರ್ ಅವರು ಶಿಲ್ಪಗಳನ್ನು ಕೆತ್ತಿ ರಥಕ್ಕೆ ಜೋಡಿಸಿದ್ದಾರೆ.  

ಮಹಾರಥೋತ್ಸವ ಮೆರಗು: ಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ಬಾರಿ ಮಹಾ ರಥೋತ್ಸವ ನಡೆಯುತ್ತದೆ. 88 ವರ್ಷಗಳಿಂದಲೂ ಇದೇ ರಥವನ್ನು ಬಳಸಲಾಗುತ್ತಿದೆ.

‘ಮಹಾರಥದಲ್ಲಿ ಭಿನ್ನವಾಗಿದ್ದ ವಿಗ್ರಹ ಸರಿಪಡಿಸುವಿಕೆ, ಬಿರುಕು ಬಿಟ್ಟಿದ್ದ ಮರಗಳು ಹಾಗೂ ಗೊಂಬೆಗಳ ದುರಸ್ತಿ ಮಾಡಬೇಕು ಇಲ್ಲವೇ ಹೊಸದಾಗಿ ಜೋಡಣೆ ಮಾಡಬೇಕು ಎಂಬ ಬೇಡಿಕೆ ಹಲವು ಸಮಯದಿಂದ ಇತ್ತು. ಮೊದಲ ಹಂತದಲ್ಲಿ ಮರ ಬದಲಾವಣೆ ಮಾಡಲಾಗಿತ್ತು. ಈಗ ಶಿಲ್ಪಗಳನ್ನು ಹೊಸದಾಗಿ ಜೋಡಣೆ ಮಾಡಿರುವುದು ಶ್ಲಾಘನೀಯ’ ಎಂದು ಬೆಟ್ಟದ ಬೇಡಗಂಪಣ ಅರ್ಚಕ ಕೆ.ವಿ.ಮಾದೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಸೇವೆಗೆ ಸಿಗದ ಬೆಳ್ಳಿ ರಥ: ಈ ಮಧ್ಯೆ, ಮಹದೇಶ್ವರ ಸ್ವಾಮಿಯ ಬೆಳ್ಳಿರಥದ ಉದ್ಘಾಟನೆಯಾಗಿ ಮೂರು ತಿಂಗಳಾಗುತ್ತ ಬಂದಿದ್ದರೂ, ರಥ ಇನ್ನೂ ಸೇವೆಗೆ ಲಭ್ಯವಾಗಿಲ್ಲ. ಇದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. 

ಮಾರ್ಚ್‌ 18ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸ ಬೆಳ್ಳಿ ರಥವನ್ನು ಲೋಕಾರ್ಪಣೆ ಮಾಡಿದ್ದರು. ಶೀಘ್ರದಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದು ಹೇಳಲಾಗಿತ್ತು. ಸೇವೆಗೆ ₹2001 ಶುಲ್ಕವನ್ನೂ ಪ್ರಾಧಿಕಾರ ನಿಗದಿ ಪಡಿಸಿದೆ. 

ರಥಕ್ಕೆ ಅಳವಡಿಸಿರುವ ಹೊಸ ವಿಗ್ರಹ

‘ಮುಂದಿನ ಅಮಾವಾಸ್ಯೆಗೆ ಮುಕ್ತ’

ಎರಡೂ ರಥಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ  ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ‘ಬ್ರಹ್ಮರಥದಲ್ಲಿ 10 ವಿಗ್ರಹಗಳು ಹಾಳಾಗಿದ್ದವು.  ಅದನ್ನು ತೆಗೆಸಿ ಹೊಸ ವಿಗ್ರಹಗಳನ್ನು ಅಳವಡಿಸಲಾಗಿದೆ. ಬೆಳ್ಳಿ ರಥದ ಸಂಪೂರ್ಣ ಕಾರ್ಯ ಮುಗಿದಿದೆ. ತೇರಿನ ಮೇಲೆ ಚಿನ್ನದ ಕಳಸವನ್ನು ಅಳವಡಿಸಬೇಕಾಗಿದೆ. ಕಳಸಕ್ಕೆ ಚಿನ್ನದ ಲೇಪನದ ಕಾರ್ಯ ನಡೆಯುತ್ತಿರುವುದರಿಂದ ಸ್ವಲ್ಪ ತಡವಾಗಿದೆ. ಮುಂಬರುವ ಅಮಾವಸ್ಯೆಯ ವೇಳೆಗೆ ಬೆಳ್ಳಿರಥ ಭಕ್ತರ ಸೇವೆಗೆ ಮುಕ್ತವಾಗಬಹುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.