ಚಾಮರಾಜನಗರ: ‘ಮಲೆ ಮಹದೇಶ್ವರ, ಮಂಟೇಸ್ವಾಮಿ ಅವರು ಕ್ರಾಂತಿಕಾರರು, ಬಂಡಾಯಗಾರರು. ಹಲವು ಶತಮಾನಗಳ ಹಿಂದೆಯೇ ವರ್ಗ, ವರ್ಣ ರಹಿತ ಕಟ್ಟಲು ಶ್ರಮಿಸಿದವರು. ಅಹಿಂದ ಸಮಾಜದ ಉದ್ಧಾರ ಮಾಡಿ ತೋರಿಸಿದವರು’ ಎಂದು ಕವಿ ಡಾ.ಸಿದ್ದಲಿಂಗಯ್ಯ ಅವರು ಬುಧವಾರ ಪ್ರತಿಪಾದಿಸಿದರು.
ಅಖಿಲ ಕರ್ನಾಟಕ ಜಾನಪದ ಕಲಾವಿದ ಒಕ್ಕೂಟ, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ‘ಕತ್ತಲ ರಾಜ್ಯದ ಜ್ಯೋತಿಗಳು ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಸಂಸ್ಕೃತಿ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ಇಬ್ಬರು ಶತಮಾನಗಳ ಹಿಂದೆಯೇ ಧಾರ್ಮಿಕ ಚೌಕಟ್ಟಿನಲ್ಲಿ ಕ್ರಾಂತಿ ಮಾಡಿದವರು. ಜಾತ್ಯತೀತ ಸಮಾಜವನ್ನು ಕಟ್ಟಲು ಇಬ್ಬರೂ ಶ್ರಮಿಸಿದರು. ಸಮಾಜದಲ್ಲಿರುವ ಅನೇಕ ವಿಷಯಗಳನ್ನು ಹೇಳಲು ನಾವು ಈಗಲೂ ಹಿಂಜರಿಯುತ್ತೇವೆ. ಆದರೆ, ಇವರಿಬ್ಬರೂ ಹಿಂದೆಯೇ ಅದನ್ನು ಹೇಳಿದ್ದರು’ ಎಂದರು.
‘ಇಬ್ಬರನ್ನು ಬುದ್ಧನೊಂದಿಗೆ ಹೋಲಿಸಬಹುದು. ಬುದ್ಧನ ರೀತಿಯಲ್ಲೇ ಇವರಲ್ಲೂ ಸೌಮ್ಯತೆ ಇದೆ. ಮೂವರೂ ನಿಂದನೆಯನ್ನೇ ಪ್ರಶಂಸೆಯಾಗಿ ಪರಿಗಣಿಸಿದವರು. ನಿಂದನೆಯಿಂದ ನೊಂದುಕೊಳ್ಳಲಿಲ್ಲ. ಜಾತ್ಯತೀತ ವಿಚಾರದಲ್ಲೂ ಹೋಲಿಕೆ ಇದೆ. ಮೂವರೂ ಜಾತಿಯನ್ನು ಪರಿಗಣಿಸಿರಲಿಲ್ಲ’ ಎಂದು ಸಿದ್ದಲಿಂಗಯ್ಯ ಅವರು ಅಭಿಪ್ರಾಯಪಟ್ಟರು.
ನಿಜವಾಗುತ್ತಿದೆ ಕಾಲಜ್ಞಾನ: ‘ಮಂಟೇಸ್ವಾಮಿ ಅವರು ಅಂದಿನ ಕಾಲದಲ್ಲಿ ನುಡಿದ ಕಾಲಜ್ಞಾನ ಈಗ ನಿಜವಾಗುತ್ತಿದೆ. ಮೇಲು ಕೀಳಾಗುವುದು, ಕೀಳು ಮೇಲಾಗುವುದು ಎಂದು ಅವರು ಹೇಳಿದ್ದರು. ಈಗ ನೋಡಿ, ದೊಡ್ಡವರೆಲ್ಲ ಮೀಸಲಾತಿಗಾಗಿ ಹೋರಾಟುತ್ತಿದ್ದಾರೆ. ಕೆಳ ಸಮುದಾಯದವರು ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ’ ಎಂದರು.
‘ಮಹದೇಶ್ವರ, ಮಂಟೇಸ್ವಾಮಿ ಅವರು ದೇವರಂತೆ ಬದುಕಲಿಲ್ಲ. ಮನುಷ್ಯರಂತೆ ಬಾಳಿದರು. ಬೇರೆಯವರನ್ನು ಮನುಷ್ಯರನ್ನಾಗಿ ಮಾಡಿದರು’ ಎಂದು ಸಿದ್ದಲಿಂಗಯ್ಯ ಹೇಳಿದರು.
ಜೀವಂತ ಸಂಸ್ಕೃತಿ: ಆಶಯ ನುಡಿಗಳನ್ನು ಆಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಮಲೆ ಮಹದೇಶ್ವರರು ಹಾಗೂ ಮಂಟೇಸ್ವಾಮಿ ಅವರು ನಮ್ಮ ಜೀವನದ ವ್ಯಕ್ತಿತ್ವದ ಭಾಗವಾಗಿದ್ದಾರೆ. ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಈ ಜಿಲ್ಲೆಯ ಮಣ್ಣಿನಲ್ಲಿ ಹಲವಾರು ದಾರ್ಶನಿಕರು ಜನಿಸಿದ್ದಾರೆ. ಇದು ಕೇವಲ ಕಾವ್ಯ, ಸಂಸ್ಕೃತಿಗೆ ಮಾತ್ರ ಮೀಸಲಾಗಿರಬಾರದು. ವಾರಸುದಾರರಾಗಿ ಮುಂದಿನ ಪೀಳಿಗೆಯವರಿಗೆ ತೆಗೆದುಕೊಂಡು ಹೋಗಬೇಕಿದೆ’ ಎಂದರು.
‘ಇದೊಂದು ವಿಸ್ಮಯಕಾರಿ ಜಿಲ್ಲೆ. 25 ವರ್ಷಗಳಿಂದ ನಡೆಯುತ್ತಿರುವ ಸಾಂಸ್ಕೃತಿಕ ತಲ್ಲಣಗಳ ನಡುವೆಯೂ ಸಂಸ್ಕೃತಿ ಜೀವಂತವಾಗಿದೆ ಎಂದರೆ ಇಲ್ಲಿನ ಪರಂಪರೆ ಎಷ್ಟು ಬಲಿಷ್ಠವಾಗಿದೆ ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.
ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಅವರು ಮಾತನಾಡಿ, ‘ಜನಪದೀಯರಿಗೆ ಅಕ್ಷರ ಜ್ಞಾನ ಇಲ್ಲದಿದ್ದರೂ, ಮಹಾಕಾವ್ಯಗಳನ್ನು ಸೃಷ್ಟಿಸುತ್ತಾರೆ ಎಂದರೆ ಅವರಲ್ಲಿ ಅದೇನು ಶಕ್ತಿ ಅಡಗಿದೆ’ ಎಂದು ಅಚ್ಚರಿ ಪಟ್ಟರು.
ಸಾಹಿತಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರು ಮಾತನಾಡಿ, ‘ಮಹದೇಶ್ವರ ಕಾವ್ಯ ಶಿಷ್ಟ ಕಾವ್ಯ ಅಲ್ಲ. ವಿವಿಧ ರಾಮಾಯಣಗಳ ರೀತಿಯಲ್ಲಿ ಅನೇಕ ಮಹದೇಶ್ವರ ಕಾವ್ಯಗಳಿವೆ. ಈ ಕಾವ್ಯವು ಸಾಹಿತ್ಯ, ಜಾನಪದ, ಸಾಂಸ್ಕೃತಿಕ, ಪುರಾಣ, ಚರಿತ್ರೆಯ ಆಯಾಮಗಳನ್ನು ಹೊಂದಿವೆ’ ಎಂದು ಹೇಳಿದರು.
‘ದೇವರು ಆಗುವುದು ಸುಲಭ. ಆದರೆ ಮನುಷ್ಯರು ಆಗುವುದು ಕಷ್ಟ.ಯಾರು ಮನುಷ್ಯರಾಗಲು ಹೋಗುತ್ತಾರೋ ಅವರೆಲ್ಲ ದೇವರಾಗುತ್ತಾರೆ. ಮಹದೇಶ್ವರರು ಹಾಗೂ ಮಂಟೇಸ್ವಾಮಿ ಅವರು ಮನುಷ್ಯರಾದರು’ ಎಂದರು.
ಸನ್ಮಾನ: ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಸಾಹಿತಿ ಸ್ವಾಮಿ ಪೊನ್ನಾಚಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಶಿವಬಸವಯ್ಯ ಅವರು ಮಾತನಾಡಿದರು.
ಎಂ.ಕೆ.ಸಿದ್ದರಾಜು, ದೊಡ್ಡಗವಿ ಬಸಪ್ಪ, ಸಣ್ಣ ಶೆಟ್ಟಿ, ನಿಂಗಶೆಟ್ಟಿ, ಬಿ.ಬಸವರಾಜು, ಅರುಣ್‌ಕುಮಾರ್, ಗೌರಮ್ಮ ಸೇರಿದಂತೆ ಹಲವು ಕಲಾವಿದರು ಜಾನಪದ ಗಾಯನ ಪ್ರಸ್ತುತ ಪಡಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಜೋಗಿಲ ಸಿದ್ದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.
ನೋಡುವವನ ದೃಷ್ಟಿಯಲ್ಲಿ ಬೆಳಕು –ಕತ್ತಲೆ: ಸುತ್ತೂರು ಶ್ರೀ
ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶೀ ಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ‘ನೋಡುವವರಲ್ಲಿ ಅಂತರಂಗ ದೃಷ್ಟಿ ಇದ್ದರೆ, ಜಗತ್ತಿನಲ್ಲಿ ಬೆಳಕು ಕಾಣುತ್ತದೆ. ಅಂತರಂಗದ ದೃಷ್ಟಿ ಸರಿ ಇಲ್ಲದಿದ್ದರೆ ಬೆಳಕು ಇದ್ದರೂ ಕತ್ತಲು ಕಾಣುತ್ತದೆ’ ಎಂದು ಹೇಳಿದರು.
ಸ್ನಾತಕೋತ್ತರ ಕೇಂದ್ರದ ಸುತ್ತಮುತ್ತಲಿನ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಚಾಮರಾಜನಗರದಲ್ಲಿರುವ ಗದ್ದಲ ಇಲ್ಲಿಲ್ಲ. ಪ್ರಶಾಂತ ವಾತಾವರಣ ಇದೆ. ಇಲ್ಲಿ ನೀಲಗಿರಿ ತೋಪು ಕಾಣಿಸುತ್ತಿದೆ. ಅದನ್ನು ತೆರವುಗೊಳಿಸಿ, ಉತ್ತಮ ಆಮ್ಲಜನಕ ಹೊರಸೂಸುವ ದೇಸಿ ಗಿಡಗಳನ್ನು ನೆಟ್ಟು ಪೋಷಿಸಬೇಕು’ ಎಂದು ಸಲಹೆ ನೀಡಿದರು.
ಸ್ನಾತಕೋತ್ತರ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದು, ಉತ್ತಮ ಸಾಧನೆ ಮಾಡುತ್ತಿರುವುದನ್ನು ಅವರು ಶ್ಲಾಘಿಸಿದರು.
ಸಂಶಯವಾದಿಯಾಗಿದ್ದೇನೆ: ಸಿದ್ದಲಿಂಗಯ್ಯ
‘ನಾಸ್ತಿಕನಾಗಿರುವ ನಾನು ಆರಂಭದಲ್ಲಿ ಮಂಟೇಸ್ವಾಮಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಅವರ ಬಗ್ಗೆ ತಿಳಿದುಕೊಂಡ ನಂತರ ಇಷ್ಟಪಡಲು ಆರಂಭಿಸಿದ್ದೇನೆ. ಈಗ ನಾನು ಸಂಶಯವಾದಿಯಾಗಿದ್ದೇನೆ. ಮೊದಲಿನ ರೋಷ ದ್ವೇಷ ಈಗ ಇಲ್ಲ’ ಎಂದು ಸಿದ್ದಲಿಂಗಯ್ಯ ಅವರು ಹೇಳಿದರು.
ಈ ಮಾತಿಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸುತ್ತೂರು ಶ್ರೀಗಳು, ‘ಮನುಷ್ಯ ಅನುಭವದಲ್ಲಿ ಶ್ರೀಮಂತನಾದಾಗ, ಅವನಲ್ಲಿನ ಅಭಿಪ್ರಾಯ ಬದಲಾಗುತ್ತಾ ಇರುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.