ಚಾಮರಾಜನಗರ/ಮಹದೇಶ್ವರ ಬೆಟ್ಟ: ಜಿಲ್ಲೆಯಾದ್ಯಂತ ಶುಕ್ರವಾರ ಭಕ್ತರು ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮನೆ, ದೇವಾಲಯಗಳಲ್ಲಿ ಶಿವ ಪೂಜೆ, ಈಶ್ವರ ಧ್ಯಾನದಲ್ಲಿ ತೊಡಗಿ ಜಾಗರಣೆ ಮಾಡಿದರು.
ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ಬೆಳಿಗ್ಗೆಯಿಂದಲೇ ಎಣ್ಣೆ ಮಜ್ಜನ ಸೇವೆ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಸಾವಿರಾರು ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ರಾತ್ರಿ ಹೊತ್ತು ಸಾವಿರಾರು ಭಕ್ತರು ಜಾಗರಣೆ ನಡೆಸಿದರು.
ಮಹಾಶಿವರಾತ್ರಿಯ ಅಂಗವಾಗಿ ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನ, ಶ್ರೀಕಂಠೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಯಡಬೆಟ್ಟ ಮಹದೇಶ್ವರ, ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಸ್ಥಾನ, ಯಳಂದೂರಿನ ಗೌರೀಶ್ವರ, ಕಾಳಿಕಾಂಬ ಕಮಠೇಶ್ವರ ದೇವಸ್ಥಾನ ಗಡಿಭಾಗದ ಕೊಂಗಳ್ಳಿ ಶ್ರೀಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ– ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಗ್ರಾಮೀಣ ಭಾಗದ ಮಠಗಳು ಹಾಗೂ ದೇವಸ್ಥಾನಗಳಲ್ಲೂ ಹಬ್ಬದ ಅಂಗವಾಗಿ ಪೂಜೆ,ಜಾಗರಣೆ ಮಾಡಲಾಯಿತು.
ವಿಶೇಷ ಪೂಜೆ, ಜಾತ್ರೆ: ಭಕ್ತರು ಶಿವನಿಗೆ ಬಿಲ್ವಪತ್ರೆಗಳಿಂದ ಅರ್ಚಿಸಿದರು. ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಮುಂಜಾನೆ ಶಿವನಿಗೆ ವಿಶೇಷ ಅಭಿಷೇಕ ನೆರವೇರಿತು. ಬಳಿಕ ರುದ್ರಾಭಿಷೇಕ, ಇನ್ನಿತರ ಅಭಿಷೇಕಗಳು ನಡೆದವು. ಶಿವಲಿಂಗಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಮಾದಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರ: ಮಹಾ ಶಿವರಾತ್ರಿ ಅಂಗವಾಗಿ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಜಾತ್ರೆಯ ಎರಡನೇ ದಿನ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು.
ಶುಕ್ರವಾರ ಮುಂಜಾನೆ ಬೇಡಗಂಪಣ ಸಮುದಾಯದ ವಿಧಿ ವಿಧಾನಗಳಂತೆ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆಯನ್ನು ಮಾಡಿ ಮಹಾಮಂಗಳಾರತಿ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ ಇನ್ನಿತರ ಸೇವೆಗಳನ್ನು ನೆರವೇರಿಸಲಾಯಿತು. ಆ ಬಳಿಕ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಧರ್ಮ ದರ್ಶನವಲ್ಲದೆ, ₹100, ₹200, ₹500 ಶುಲ್ಕದ ವಿಶೇಷ ದರ್ಶನದ ಸಾಲನ್ನು ಏರ್ಪಡಿಸಲಾಗಿತ್ತು.
ಎರಡನೇ ದಿನವೂ ಕ್ಷೇತ್ರದಲ್ಲಿ ಭಕ್ತ ಸಾಗರವೇ ನೆರೆದಿತ್ತು. ಸಾವಿರಾರು ಭಕ್ತರು ಸ್ವಾಮಿಗೆ ಉರುಳು ಸೇವೆ, ಪಂಜಿನ ಸೇವೆ, ದೂಪದ ಸೇವೆ, ರುದ್ರಾಕ್ಷಿ ಮಂಟಪ, ಬಸವ ವಾಹನ, ಹುಲಿವಾಹನ, ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ ಸೇವೆಗಳನ್ನು ನೆರವೇರಿಸಿದ ಬಳಿಕ ರಾತ್ರಿ ನಡೆದ ಜಾಗರಣೆ ಉತ್ಸವದಲ್ಲಿ ಪಾಲ್ಗೊಂಡರು.
5.967 ಕೆಜಿ ಬೆಳ್ಳಿ ಮೂರ್ತಿ ಕಾಣಿಕೆ: ಚಾಮರಾಜನಗರದ ಗಾಳಿಪುರದ ಮಹದೇವು ಮತ್ತು ಕುಟುಂಬದವರು ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ 5.967 ಕೆಜಿ ತೂಕದ ಬೆಳ್ಳಿ ಉತ್ಸವ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದರು.
ಮಹದೇವು ಅವರು ಹೊತ್ತಿರುವ ಹರಕೆಯಂತೆ ಉತ್ಸವ ಮೂರ್ತಿ ನೀಡಿದ್ದು, ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.