ADVERTISEMENT

ಚಾಮರಾಜನಗರ | ಮಹದೇಶ್ವರ ಬೆಟ್ಟದಲ್ಲಿ ವೈಭವದ ಶಿವರಾತ್ರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 5:04 IST
Last Updated 21 ಫೆಬ್ರುವರಿ 2023, 5:04 IST
   

ಮಹದೇಶ್ವರಬೆಟ್ಟ (ಚಾಮರಾಜನಗರ): ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ 8.34ರ ಶುಭಮುಹೂರ್ತದಲ್ಲಿ ಆರಂಭಗೊಂಡ ರಥೋತ್ಸವ, ದೇವಾಲಯದಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿತು. 9 ಗಂಟೆಯ ಹೊತ್ತಿಗೆ ರಥ ಸ್ವಸ್ಥಾನ ಸೇರಿತು.

ದೇವಾಲಯದ ಆವರಣದ ಸುತ್ತ ಕಿಕ್ಕಿರಿದು ತುಂಬಿದ್ದ ಭಕ್ತ ಸಮೂಹ ‘ಉಘೇ ಉಘೇ ಮಾದಪ್ಪ’, ‘ಮುದ್ದು ಮಾದಪ್ಪನಿಗೆ ಉಘೇ’, ‘ಉಘೇ ಮಾಯ್ಕಾರ’ ಎಂಬ ಉದ್ಘೋಷಗಳನ್ನು ಹಾಕುತ್ತ ಮಾದಪ್ಪನ ವೈಭವದ ತೇರನ್ನು ಕಣ್ಣುಂಬಿಕೊಂಡರು.

ADVERTISEMENT

ಸಾಲೂರು ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಹಾರಥೋತ್ಸವದ ವಿಧಿ ವಿಧಾನಗಳು ನಡೆದವು. ರಥೋತ್ಸವಕ್ಕೂ ಮುನ್ನ ದೇವಾಲಯದ ಒಳಾಂಗಣದಲ್ಲಿ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ದೇವಾಲಯಕ್ಕೆ ಉತ್ಸವ ಮೂರ್ತಿಯನ್ನು ಪ್ರದಕ್ಷಿಣೆ ಮಾಡಿ ನಂತರ ತೇರಿನ ಬಳಿಗೆ ತೇರಲಾಯಿತು. ತೇರಿನ ಸುತ್ತವೂ ಉತ್ಸವ ಮೂರ್ತಿಯ ಪ್ರದಕ್ಷಿಣೆ ಹಾಕಿಸಿ, ನಂತರ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು.

ಆ ಬಳಿಕ ತೇರಿಗೆ ಪೂಜೆ ಸಲ್ಲಿಸಲಾಯಿತು. 101 ಹೆಣ್ಣು ಮಕ್ಕಳು ಮಹದೇಶ್ವರ ಸ್ವಾಮಿಗೆ ಬೆಲ್ಲದ ಆರತಿ ಬೆಳಗಿದರು. ನಂತರ ರಥೋತ್ಸವಕ್ಕೆ ಚಾಲನೆ ದೊರಕಿತು. ತೇರಿನ ಹಗ್ಗವನ್ನು ಹಿಡಿದ ಅರ್ಚಕರು, ಪ್ರಾಧಿಕಾರದ ಸಿಬ್ಬಂದಿ, ಸೇವಾದಾರರು ಹಾಗೂ ನೂರಾರು ಭಕ್ತರು ತೇರು ಎಳೆದರು.

ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ, ನೆರೆಯ ತಮಿಳುನಾಡಿನಿಂದಲೂ ಬಂದಿದ್ದ ಭಕ್ತರು, ತೇರಿಗೆ ಹಣ್ಣು ಜವನ, ನಾಣ್ಯ, ದವಸ-ಧಾನ್ಯಗಳನ್ನು ಎಸೆದು ಹರಕೆ ಸಲ್ಲಿಸಿದರು.

ಬ್ರಹ್ಮ ರಥದ ಮುಂಭಾಗ ದೇವಾಲಯದ ಆನೆ, ಪಲ್ಲಕ್ಕಿ ಉತ್ಸವ, ಬಿಳಿ ಆನೆ ದೇವರ ಉತ್ಸವ, ಬಸವ ಹಾಗೂ ಹುಲಿವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳು ಸಾಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.