ADVERTISEMENT

ಮಹದೇಶ್ವರ ಬೆಟ್ಟ: ನಾಗಮಲೆ ಪ್ರವೇಶಕ್ಕೆ ಆನ್‌ಲೈನ್ ಟಿಕೆಟ್‌ ಆರಂಭ

ಜಿ.ಪ್ರದೀಪ್ ಕುಮಾರ್
Published 16 ಅಕ್ಟೋಬರ್ 2024, 15:43 IST
Last Updated 16 ಅಕ್ಟೋಬರ್ 2024, 15:43 IST
<div class="paragraphs"><p>ನಾಗಮಲೆಗೆ ತೆರಳುವ ಕಾಲ್ನಡಿಗೆ ದಾರಿ (ಸಂಗ್ರಹ ಚಿತ್ರ)</p></div>

ನಾಗಮಲೆಗೆ ತೆರಳುವ ಕಾಲ್ನಡಿಗೆ ದಾರಿ (ಸಂಗ್ರಹ ಚಿತ್ರ)

   

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಹಾಗೂ ಚಾರಣ ಸ್ಥಳವಾಗಿರುವ ನಾಗಮಲೆ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಸಡಿಸಲಾಗಿದೆ. ಚಾರಣಿಗರು ಆನ್‌ಲೈನ್‌ನಲ್ಲಿ ಟಿಕೆಟ್‌ ಪಡೆದು ನಾಗಮಲೆ ಪ್ರವೇಶಿಸಬಹುದು.

ಅರಣ್ಯ ಹಾಗೂ ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಫೆ.10ರಿಂದ ನಾಗಮಲೆ ಪ್ರವೇಶಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿತ್ತು. 8 ತಿಂಗಳ ಬಳಿಕ ಮತ್ತೆ ನಾಗಮಲೆ ಚಾರಣಕ್ಕೆ ಅನುಮತಿ ದೊರೆತಿದ್ದು ಚಾರಣಪ್ರಿಯರ ಸಂತಸಕ್ಕೆ ಕಾರಣವಾಗಿದೆ.

ADVERTISEMENT

ನಾಗಮಲೆ ಚಾರಣಕ್ಕೆ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತೆರಳುವವರು ಅರಣ್ಯ ಇಲಾಖೆಯ ‘ಅರಣ್ಯ ವಿಹಾರ’ ಜಾಲತಾಣದಲ್ಲಿ ನೋಂದಣಿ ಮಾಡಿಕೊಂಡು ಟಿಕೆಟ್‌ ಖರೀದಿಸಬೇಕು. ವೆಬ್‌ಸೈಟ್‌ಗೆ ಭೇಟಿನೀಡಿ ಜಿಲ್ಲೆ ಹಾಗೂ ಚಾರಣ ಮಾಡುವ ಸ್ಥಳ ಆಯ್ಕೆ ಮಾಡಿಕೊಂಡು ಹೊರಡುವ ದಿನಾಂಕ ನಮೂದಿಸಬೇಕು. ಪ್ರತಿದಿನ 200 ಮಂದಿಗೆ ಚಾರಣಕ್ಕೆ ಅವಕಾಶ ಇರುತ್ತದೆ. ಅ.19ರಿಂದ ಟಿಕೆಟ್‌ ಬುಕ್ಕಿಂಗ್ ಮಾಡಲು ಅನುಮತಿಸಲಾಗಿದೆ.

ನಿರ್ಧಿಷ್ಟ ದಿನದಂದು ಚಾರಣಕ್ಕೆ ಟಿಕೆಟ್‌ ಲಭ್ಯವಿದ್ದರೆ ಹೆಸರು, ಮೊಬೈಲ್ ಸಂಖ್ಯೆ, ಸ್ವವಿವರಗಳ್ನು ನಮೂದಿಸಿ ಖಾತೆ ಸೃಜಿಸಿಕೊಳ್ಳಬಹುದು. ಚಾರಣ ಮಾಡುವವರ ಹೆಸರು, ವಯಸ್ಸು, ಮೊಬೈಲ್ ನಂಬರ್ ವಿವರ ದಾಖಲಿಸಿ ಆನ್‌ಲೈನ್ ಪಾವತಿ ಮೂಲಕ ಟಿಕೆಟ್ ಖರೀದಿಸಬಹುದು.

5 ವರ್ಷದಿಂದ 12 ವರ್ಷದವರೆಗೆ ₹ 100, 12 ವರ್ಷ ಮೇಲ್ಪಟ್ಟವರಿಗೆ ₹ 200 ಟಿಕೆಟ್‌ ದರ ನಿಗದಪಡಿಸಲಾಗಿದೆ. ಒಂದು ನೋಂದಾಯಿತ ಲಾಗಿನ್‌ನಲ್ಲಿ 10 ಮಂದಿಗೆ ಚಾರಣಕ್ಕೆ ತೆರಳಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

ನಾಗಮಲೆ ಚಾರಣದ ಪಥವು ಹಳೆಯೂರು ಕಳ್ಳಬೇಟೆ ತಡೆ ಶಿಬಿರದಿಂದ ಪ್ರಾರಂಭವಾಗಿ ಇಂಡಿಗನತ್ತ ಮತ್ತು ನಾಗಮಲೆ ಗ್ರಾಮಗಳ ಮೂಲಕ ಸಾಗುತ್ತದೆ. ಚಾರಣದ ಪಥವು 16 ಕಿ.ಮೀ ಹೊಂದಿದೆ. ಪ್ರಾರಂಭ ಮತ್ತು ಮುಕ್ತಾಯದ ಸ್ಥಳ ಒಂದೇ ಆಗಿರುತ್ತದೆ. ಚಾರಣದ ಅವಧಿಯು 8 ಗಂಟೆಗಳಾಗಿದ್ದು, ಪ್ರಾರಂಬಿಕ ಸಮಯ ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಮಾತ್ರ ಇರುತ್ತದೆ.

ಭಕ್ತರಿಗೂ ಸಂತಸ: ಮಲೆ ಮಹದೇಶ್ವರ ದೇವಾಲಯಕ್ಕೆ ಬರುವ ಸಾವಿರಾರು ಭಕ್ತರು ನಾಗಮಲೆ ಕ್ಷೇತ್ರಕ್ಕೆ ಹೋಗಿ ಪೂಜೆ, ಹರಕೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ನಾಗಮಲೆ ಚಾರಣ ನಿಷೇಧವಾದ ಬಳಿಕ ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿತ್ತು. ಇದೀಗ ನಾಗಮಲೆ ಪ್ರವೇಶಿಸಲು ಅನುಮತಿ ನೀಡಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.

ನಾಗಮಲೆ ವನ್ಯಜೀವಿ ವಲಯವಾಗಿದ್ದು ಅಪರೂಪದ ಜೀವ ವೈವಿಧ್ಯಗಳ ತಾಣವಾಗಿದೆ. ಇಲ್ಲಿಗೆ ವಾರಾಂತ್ಯದಲ್ಲಿ ಚಾರಣ ಮಾಡಲು ಹಾಗೂ ದೇವರ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚು. ಕ್ಷೇತ್ರಕ್ಕೆ ಬರುವವರು ಎಲ್ಲೆಂದರಲ್ಲ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುತ್ತಿದ್ದ ಪರಿಣಾಮ ವನ್ಯಜೀವಿಗಳ ಪ್ರಾಣಕ್ಕೆ ಕುತ್ತುಂಟಾಗುತ್ತಿತ್ತು. ಇದೀಗ ನಾಗಮಲೆ ಪ್ರವೇಶಕ್ಕೆ ಮತ್ತೆ ಅನುಮತಿ ಸಿಕ್ಕಿರುವುದರಿಂದ ಪರಿಸರಕ್ಕೆ ಹಾನಿಯಾಗದಂತೆ ಅರಣ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಸರ ಪ್ರಿಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.