ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ)/ ರಾಯಚೂರು: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ 34 ದಿನಗಳಲ್ಲಿ ₹3.04 ಕೋಟಿ ಸಂಗ್ರಹವಾಗಿದೆ. ಇ–ಹುಂಡಿಗೆ ಭಕ್ತರು ₹3,53,441 ಕಾಣಿಕೆ ಜಮೆ ಮಾಡಿದ್ದಾರೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾರ್ಚ್‌ನಿಂದ ಏಪ್ರಿಲ್ 28ರವರೆಗಿನ 33 ದಿನಗಳಲ್ಲಿ ಹುಂಡಿಯಲ್ಲಿ ₹5.43 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಮಂತ್ರಾಲಯದ ಮಠದ ಸಿಬ್ಬಂದಿ ಕಾಣಿಕೆ ಪೆಟ್ಟಿಗೆ ತೆರೆದು ಎಣಿಕೆ ಮಾಡಿದಾಗ ₹2.64 ಕೋಟಿ ನಗದು, ₹6.97 ಲಕ್ಷ ನಾಣ್ಯ, ₹2.71 ಕೋಟಿ ಮೌಲ್ಯದ 41 ಗ್ರಾಂ ಚಿನ್ನ, 1290 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಎಣಿಕೆ ಕಾರ್ಯ ನಡೆಯಿತು. ನೋಟುಗಳ ರೂಪದಲ್ಲಿ ₹2.88 ಕೋಟಿ ಹಾಗೂ ನಾಣ್ಯಗಳ ರೂಪದಲ್ಲಿ ₹6.53 ಲಕ್ಷ ಮೊತ್ತ ಹುಂಡಿಗಳಲ್ಲಿ ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗದು ಜತೆಗೆ 115 ಗ್ರಾಂ ಚಿನ್ನ, 2.964 ಕೆಜಿ ಬೆಳ್ಳಿಯನ್ನೂ ಭಕ್ತರು ಕಾಣಿಕೆಯಾಗಿ ಹುಂಡಿಗಳಿಗೆ ಹಾಕಿದ್ದಾರೆ. ₹2 ಸಾವಿರ ಮುಖಬೆಲೆಯ 22 ನೋಟುಗಳು ಸಂಗ್ರಹವಾಗಿದ್ದು, ಸಿಂಗಪುರದ 52 ಡಾಲರ್, 27 ದಿರಮ್ (ಯುಎಇ ಕರೆನ್ಸಿ) ನೋಟುಗಳು ಕೂಡ ಸಿಕ್ಕಿವೆ.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎ. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಹಣಕಾಸು ಮತ್ತು ಲೆಕ್ಕಪತ್ರ ಸಲಹೆಗಾರ, ಚಾಮರಾಜನಗರ ಜಿಲ್ಲಾಡಳಿತ ಕಚೇರಿ ಮುಜರಾಯಿ ಶಾಖೆ ಸೇರಿದಂತೆ ಪ್ರಾಧಿಕಾರ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.