ಮಹದೇಶ್ವರಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರದಿಂದ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಆರಂಭವಾಗಲಿದೆ.
ನಾಲ್ಕು ದಿನಗಳಿಂದ ಪ್ರತಿ ದಿನ ಸಾವಿರಾರು ಭಕ್ತರು ಕಾಲ್ನಡಿಗೆ, ವಾಹನಗಳಲ್ಲಿ ಕ್ಷೇತ್ರಕ್ಕೆ ಬಂದು ಮಹದೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಬಂದಿರುವ ಭಕ್ತರು ಕ್ಷೇತ್ರದಲ್ಲಿ ತಂಗಿದ್ದು, ವಿವಿಧ ಸೇವೆಗಳಲ್ಲಿ ತೊಡಗಿಕೊಂಡಿದ್ದಾರೆ.
ಗುರುವಾರ (ಮಾರ್ಚ್ 7) ಪವಾಡ ಪುರುಷ ಮಾದಪ್ಪನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುವ ಮೂಲಕ ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ.
ಶುಕ್ರವಾರ (ಮಾರ್ಚ್ 8) ಜಾತ್ರೆಯ ಎರಡನೇ ದಿನ, ಶಿವರಾತ್ರಿಯಂದು ಮಹದೇಶ್ವರ ಸ್ವಾಮಿಗೆ ಎಣ್ಣೆ,ಮಜ್ಜನ ಸೇವೆ, ಉತ್ಸವಾದಿಗಳು, ಜಾಗರಣೆ ಉತ್ಸವ ಜರುಗಲಿದ್ದು, 9ರಂದು ವಿಶೇಷ ಸೇವೆ ಉತ್ಸವಗಳು ನಡೆಯಲಿವೆ. 10 ರಂದು ಅಮಾವಾಸ್ಯೆ ಪ್ರಯುಕ್ತ ವಿಶೇಷಪೂಜೆ, ಸೇವಾ ಉತ್ಸವಾಧಿಗಳು ಜರುಗಲಿವೆ. ಮಾರ್ಚ್ 11ರ ಬೆಳಗ್ಗೆ ಶಿವರಾತ್ರಿ ಜಾತ್ರೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಅಭಿಷೇಕ ಪೂಜೆ ಬಳಿಕ ಕೊಂಡೋತ್ಸವ ನಡೆಯಲಿದ್ದು, ಜಾತ್ರೆಗೆ ತೆರೆ ಬೀಳಲಿದೆ.
ರಥ ಸಿದ್ಧ: ಮಹದೇಶ್ವರಬೆಟ್ಟದ ಬೇಡಗಂಪಣ ಅರ್ಚಕರು ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ರಥ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಈಗಾಗಲೇ ಮಹಾ ರಥ ಸಿದ್ಧಗೊಂಡಿದೆ. ಬಿದಿರು ಹಾಗೂ ಹುರಿ ಹಗ್ಗಗಳಿಂದ ರಥ ಕಟ್ಟಲಾಗಿದ್ದು, ವಸ್ತ್ರಧಾರಣೆಯೂ ನಡೆದಿದೆ. ದೇವಾಲಯದ ಆವರಣದಲ್ಲಿ ತೇರನ್ನು ನಿಲ್ಲಿಸಲಾಗಿದ್ದು, ಬಣ್ಣ ಬಣ್ಣದ ವಸ್ತ್ರಗಳಿಂದ ಕಂಗೊಳಿಸುತ್ತಿದೆ. 11 ರ ಸೋಮವಾರ ಬೆಳಗ್ಗೆ 9.40 ರ ಬಳಿಕ ಮಹಾರಥೋತ್ಸವ ನಡೆಯಲಿದೆ.
ಪ್ರಾಧಿಕಾರದಿಂದ ಸಿದ್ಧತೆ: ಐದು ದಿನ ವಿಜೃಂಭಣೆಯ ಜಾತ್ರೆಗೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ಮಾಡಿದೆ.
ವಿಶೇಷ ದಾಸೋಹ ವ್ಯವಸ್ಥೆ, ರಾಜಗೋಪುರದ ಮುಂಭಾಗ ಹಾಗೂ ಸರತಿ ಸಾಲಿನಲ್ಲಿ ಸಾಗುವ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ದರ್ಶನ ಮಾಡುವ ವೇಳೆ ಭಕ್ತರ ನೂಕು ನುಗ್ಗಲು ನಿವಾರಿಸಲು ಸರತಿ ಸಾಲು ನಿರ್ಮಾಣ ಮಾಡಲಾಗಿದ್ದು, ಹೆಚ್ಚುವರಿ ಲಾಡು ಕೌಂಟರ್ ತೆರೆಯಲಾಗಿದೆ. ವಿವಿಧ ಕಡೆಗಳಲ್ಲಿ ಕುಡಿಯುವ ನೀರು, ಶೌಚಗೃಹ ಮತ್ತು ಇನ್ನಿತರ ಅಗತ್ಯ ಸೌಕರ್ಯ ಒದಗಿಸಲಾಗಿದೆ.
ಬೆಟ್ಟದಲ್ಲಿ ಜಾತ್ರೆಯ ಮೊದಲ ದಿನ ಪ್ರಥಮ ಬಾರಿಗೆ ಮಡಕೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಕ್ಕಳಿಗೆ ಹಾಲುಣಿಸಲು ಅವಕಾಶ ನೀಡುವ ಮಾತೃ ಕುಟೀರಕ್ಕೆ ಚಾಲನೆ ದೊರೆಯಲಿದೆ. ಈ ಹಿಂದೆ ತಾಯಂದಿರುವ ಪುಟ್ಟ ಮಕ್ಕಳಿಗೆ ಎದೆ ಹಾಲಣಿಸಲು ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಇದೀಗ ಇಲ್ಲಿನ ದೇವಾಲಯದ ಪ್ರಾಂಗಣ ಸಮೀಪದಲ್ಲಿ ಮರ, ಬಿದಿರುಗಳಿಂದ ಮಾತೃ ಕುಟೀರವನ್ನು ನಿರ್ಮಾಣ ಮಾಡಲಾಗಿದ್ದು ತಾಯಂದಿರು ಮುಜುಗರವಿಲ್ಲದೆ ತಮ್ಮಮಕ್ಕಳಿಗೆ ಯಾವುದೆ ಹಾಲಣಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಬೇಸಿಗೆ ಕಾರಣದಿಂದ ಅಲ್ಲಲ್ಲಿ ಮಡಕೆಗಳನ್ನು ಇಟ್ಟು ಕುಡಿಯುವ ನೀರನ್ನು ಸಹ ಒದಗಿಸಲಾಗಿದೆ.
ಪ್ರಾಧಿಕಾರವು ಭಕ್ತರಿಗಾಗಿ ಈಗ 3 ಲಕ್ಷ ಲಾಡು ತಯಾರಿಸಿ ಸಂಗ್ರಹಿಸಿಟ್ಟಿದ್ದು, ನಿರಂತರವಾಗಿ ಲಾಡು ತಯಾರಿಕೆ ನಡೆಯುತ್ತಿದೆ.
ವಿಶೇಷ ಅಲಂಕಾರ: ಜಾತ್ರೆಯ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳು, ಹೂವು, ಫಲಗಳಿಂದ ವಿಶೇಷ ಅಲಂಕರಿಸಲಾಗಿದೆ.
ದೇವಾಲಯದ ಆವರಣ, ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ, ಆವರಣದ ಉದ್ಯಾನಗಳು ವೈವಿಧ್ಯಮಯ ದೀಪಗಳಿಂದ ಕಂಗೊಳಿಸುತ್ತಿದೆ. ದೇವಸ್ಥಾನದ ಒಳಾವರಣವನ್ನು ಹೂವುಗಳಿಂದ ಅಲಂಕರಿಸಲಾಗಿದೆ.
ಚಪ್ಪಲಿ, ತ್ಯಾಜ್ಯ ತೆರವು: ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಜಾತ್ರೆಗೆ ಮುನ್ನವೇ ಅಪಾರ ಸಂಖ್ಯೆಯಲ್ಲಿ ಮಹದೇಶ್ವರಬೆಟ್ಟಕ್ಕೆ ಕಾಲ್ನಡಿಗೆ ಹಾಗೂ ವಾಹನ ಮೂಲಕ ಆಗಮಿಸಿ ಭಕ್ತರು ಬಂದಿದ್ದು, ಎಲ್ಲೆಂದರಲ್ಲಿ ಎಸೆದಿರುವ ಪಾದರಕ್ಷೆ, ಕಸವನ್ನು ಪೌರಕಾರ್ಮಿಕರು ತೆರವುಗೊಳಿಸುತ್ತಿದ್ದಾರೆ.
ಕಾರ್ಯದರ್ಶಿ ಪರಿಶೀಲನೆ: ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರು ಬೆಟ್ಟ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದು, ಬುಧವಾರ ಮಧ್ಯಾಹ್ನ ದಾಸೋಹ ಭವನದಲ್ಲಿ ಭಕ್ತರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರು.
ಈ ಮಧ್ಯೆ ತಾಳಬೆಟ್ಟದಿಂದ ಬೆಟ್ಟದವರೆಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸುವ ಸಲುವಾಗಿ ಗುರುವಾರ (ಮಾರ್ಚ್ 7) ಬೆಳಿಗ್ಗೆ 6 ರಿಂದ 11ರ ಸಂಜೆ 7 ಗಂಟೆಯವರೆಗೆ ಬೆಟ್ಟಕ್ಕೆ ದ್ವಿಚಕ್ರ ವಾಹನ ಮತ್ತು ಆಟೊ ರಿಕ್ಷಾ ವಾಹನಗಳಲ್ಲಿ ತೆರಳುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ. ‘ಜಾತ್ರೆ ಅಂಗವಾಗಿ ಜಿಲ್ಲೆ ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತಾಧಿಗಳು ಬೆಟ್ಟಕ್ಕೆ ಬರುವ ನಿರೀಕ್ಷೆ ಇದ್ದು ವಾಹನ ದಟ್ಟಣೆ ಹೆಚ್ಚಾಗಲಿದೆ. ರಸ್ತೆಯು ಅರಣ್ಯ ಪ್ರದೇಶ ಹಾಗೂ ಕಡಿದಾದ ತಿರುವುಗಳಿಂದ ಕೂಡಿರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ’ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.
‘ಎಲ್ಲ ಸಿದ್ಧತೆಗಳು ಪೂರ್ಣ’ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಕಾರ್ಯದರ್ಶಿ ರಘು ‘ಜಾತ್ರೆ ಪ್ರಯುಕ್ತ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ದಾಸೋಹ ಕುಡಿಯುವ ನೀರು ಲಾಡು ಕೌಂಟರ್ ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಕ್ಕೆ ಕ್ರಮವಹಿಸಲಾಗಿದೆ. ಮಾತೃ ಕುಟೀರ ಮತ್ತು ಅಲ್ಲಲ್ಲಿ ಮಡಕೆ ನೀರಿನ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ’ ಎಂದರು. ‘ದೇವಸ್ಥಾನ ಆವರಣ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಪೌರ ಕಾರ್ಮಿಕರು ನೈರ್ಲಮ್ಯ ಕಾಪಾಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಭಕ್ತರೂ ನಮಗೆ ಸಹಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.