ADVERTISEMENT

ಪರಿಸರ ಜಾಗೃತಿಗಾಗಿ ಸೈಕಲ್‌ನಲ್ಲಿ ದೇಶ ಸುತ್ತಾಟ

ಈಗಾಗಲೇ 22 ರಾಜ್ಯಗಳನ್ನು ಸುತ್ತಾಡಿರುವ ಚಾರ್ಲ್ಸ್‌, ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 3 ಮೇ 2024, 5:55 IST
Last Updated 3 ಮೇ 2024, 5:55 IST
ಸಂತೇಮರಹಳ್ಳಿಯ ಮೂಲಕ ಅನ್ಬು ಚಾರ್ಲ್ಸ್‌ ಅವರು ಸಾಗುತ್ತಿದ್ದಾಗ ಸ್ಥಳೀಯರು ಅವರನ್ನು ಸ್ವಾಗತಿಸಿದರು
ಸಂತೇಮರಹಳ್ಳಿಯ ಮೂಲಕ ಅನ್ಬು ಚಾರ್ಲ್ಸ್‌ ಅವರು ಸಾಗುತ್ತಿದ್ದಾಗ ಸ್ಥಳೀಯರು ಅವರನ್ನು ಸ್ವಾಗತಿಸಿದರು   

ಸಂತೇಮರಹಳ್ಳಿ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಪರಿಸರ ಸಂರಕ್ಷಣೆ ಹಾಗೂ ನೀರು ಉಳಿತಾಯವೊಂದೇ ದಾರಿ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ಸೈಕಲ್‌ನಲ್ಲಿ ದೇಶ ಸುತ್ತುತ್ತಿದ್ದಾರೆ. 

ಅವರ ಹೆಸರು ಅನ್ಬು ಚಾರ್ಲ್ಸ್. ತಮಿಳುನಾಡಿನ ನಮಕ್ಕಲ್‌ ಜಿಲ್ಲೆಯವರು. 65 ವರ್ಷ ವಯಸ್ಸಿನ ಚಾರ್ಲ್ಸ್‌ ಅವಿವಾಹಿತರು. ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. 19 ವರ್ಷಗಳ ಹಿಂದೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ವಿವಾದದಲ್ಲಿ ಘಾಸಿಗೊಂಡು ಶಿಕ್ಷಕ ವೃತ್ತಿ ತ್ಯಜಿಸಿ ಪ‍ರಿಸರ ಸಂರಕ್ಷಣೆಗೆ ತಮ್ಮ ಜೀವನ ಮುಡುಪಾಗಿಟ್ಟರು.  

ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಸೈಕಲ್‌ನಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ 22 ರಾಜ್ಯಗಳನ್ನು ಸುತ್ತಿದ್ದಾರೆ. ಹಿಂದಿ, ಇಂಗ್ಲಿಷ್‌ ಹಾಗೂ ತಮಿಳು ಭಾಷೆಗಳ ಮೂಲಕ ಜನರಿಗೆ ಪರಿಸರ, ಅರಣ್ಯ, ಜಲ ಸಂರಕ್ಷಣೆಯ ಪ್ರಾಮುಖ್ಯದ ಬಗ್ಗೆ ತಿಳಿ ಹೇಳುತ್ತಿದ್ದಾರೆ. 

ADVERTISEMENT

ಪ್ರತಿನಿತ್ಯ 20 ಕಿ.ಮೀ ಸೈಕಲ್‌ ತುಳಿಯುವ ಇವರು, ದಾರಿ ಮಧ್ಯೆ ಸಿಗುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ.

‘ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ಹಸಿರುಮಯವಾಗಿಸಿದಾಗ ವಾತಾವರಣ ತಂಪಾಗಿ ತಾಪಮಾನ ಕಡಿಮೆಯಾಗುತ್ತದೆ. ಮುಂಬರುವ ಭೀಕರ ಬರಗಾಲವನ್ನು ತಪ್ಪಿಸುವ ಜವಾಬ್ದಾರಿ ಇಂದಿನ ಶಾಲಾ ವಿದ್ಯಾರ್ಥಿಗಳ ಮೇಲಿದೆ. ಇರುವ ಮರ ಗಿಡಗಳನ್ನು ಕಟಾವು ಮಾಡದೇ ಇನ್ನು ಹೆಚ್ಚು ಮರಗಿಡಗಳನ್ನು ಬೆಳೆಸಲು ಮುಂದಾಗಬೇಕು’ ಎಂಬ ಅರಿವಿನ ಸಂದೇಶವನ್ನು ಅನ್ಬು ಚಾರ್ಲ್ಸ್‌ ನೀಡುತ್ತಿದ್ದಾರೆ. 

ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳ ಹಾಗೂ ಜನ ನಿಬಿಡ ಪ್ರದೇಶಗಳಿಗೆ ತೆರಳಿ ಸ್ವತಃ ತಮ್ಮ ಕೈಯಲ್ಲಿರುವ ಬಿತ್ತಿ ಪತ್ರಗಳನ್ನು ಪ್ರದರ್ಶಿಸುತ್ತಾರೆ.

‘ಈಗಾಗಲೇ ಅನೇಕ ನಗರಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಅದಕ್ಕಾಗಿ ಇಂತಹ ಸನ್ನಿವೇಶಗಳು ಮತ್ತೆ ಬರಬಾರದು. ಮಳೆ ನೀರು ಸಂಗ್ರಹ ಮನೆಗಳ ಸನಿಹದಲ್ಲಿಯೇ ಆಗಬೇಕು. ಮನೆಯ ಸುತ್ತಮುತ್ತ ಗಿಡಮರಗಳನ್ನು ಬೆಳೆಸುವ ಮೂಲಕ ವಾತಾವರಣವನ್ನು ಹಸಿರುಮಯವಾಗಿಸಬೇಕು. ಇದರಿಂದ ತಾಪಮಾನ ಕಡಿಮೆಯಾಗುತ್ತದೆ’ ಎಂದು ವಿವರಣೆ ನೀಡುತ್ತಾರೆ.

ಸೈಕಲ್‌ ಮೂಲಕ ಸಾಗುವಾಗ ಯುವಕರು ಹಾಗೂ ಗುಂಪುಗಳನ್ನು ಕಂಡಾಗ ಇವರೇ ಅವರನ್ನು ಮಾತಿಗೆಳೆಯುತ್ತಾರೆ. ತಮ್ಮ ಬ್ಯಾಗ್‌ನಲ್ಲಿರುವ ಪರಿಸರ ಜಾಗೃತಿ ಭಿತ್ತಿ ಪತ್ರಗಳು ಹಾಗೂ ಪುಸ್ತಕಗಳ ಮೂಲಕ ತಮ್ಮ ಪರಿಚಯ ಮಾಡಿಕೊಂಡು ಪರಿಸರ ಸಂರಕ್ಷಣೆ ಹಾಗೂ ನೀರು ಉಳಿಸುವ ಬಗ್ಗೆ ಮನದಟ್ಟು ಮಾಡುತ್ತಿದ್ದಾರೆ.

ಗುಂಪುಗಳಲ್ಲಿದ್ದವರು ಇವರಿಗೆ ₹10, ₹20 ನೀಡುತ್ತಾರೆ. ಊಟ ತಿಂಡಿ ಕೊಡಿಸುತ್ತಾರೆ. ಅಲ್ಲಿಂದ ಮತ್ತೆ ಬೇರೆ ಊರಿಗೆ ಸಾಗಿ, ಜಾಗೃತಿ ಕಾಯಕವನ್ನು ಚಾರ್ಲ್ಸ್‌ ಮುಂದುವರಿಸುತ್ತಾರೆ.

ನೀರಿಗಾಗಿ ಮೂರನೇ ಮಹಾಯುದ್ಧ

‘ಈ ಜಗತ್ತಿನಲ್ಲಿ ಈಗಾಗಲೇ ಎರಡು ಮಹಾಯುದ್ಧಗಳು ನಡೆದಿವೆ. ಮುಂದಿನ ದಿನಗಳಲ್ಲಿ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿ’ ಎಂದು ಹೇಳುತ್ತಾರೆ ಅನ್ಬು ಚಾರ್ಲ್ಸ್‌. ಸೈಕಲ್‌ ಸುತ್ತಾಟದ ನಡುವೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ನಮ್ಮ ಸುತ್ತಲಿನ ಪರಿಸರ ಸಂರಕ್ಷಿಸಿ ನೀರಿನ ರಕ್ಷಣೆಗೆ ಕ್ರಮ ಕೈಗೊಳ್ಳದೇ ಇದ್ದರೆ ಈ ಭೂಮಿಗೆ ಕೇಡು ತಪ್ಪಿದ್ದಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.  ‘ಈಗಲೂ ಕಾಲ ಮಿಂಚಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು. ನಮ್ಮ ಸುತ್ತಲಿನ ಪರಿಸರವನ್ನು ಗಿಡಮರಗಳನ್ನು ಉಳಿಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮ ಹಾಕಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.