ಗುಂಡ್ಲುಪೇಟೆ: ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ಹೆದ್ದಾರಿಯಲ್ಲಿ ಕಾರಿನಿಂದ ಕೆಳಗಿಳಿದ ಇಬ್ಬರು ಪ್ರಯಾಣಿಕರನ್ನು ಆನೆಯೊಂದು ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಂಡೀಪುರ– ವಯನಾಡು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಕರ್ನಾಟಕ ಅಥವಾ ಕೇರಳ ಭಾಗದಲ್ಲಿ ನಡೆದಿದಿಯೇ ಎಂಬುದು ಸ್ಪಷ್ಟವಾಗಿಲ್ಲ. ಬಂಡೀಪುರ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ.
ಕಾರೊಂದರಿಂದ ಇಳಿದ ಇಬ್ಬರನ್ನು ಹೆಣ್ಣಾನೆಯೊಂದು ಅಟ್ಟಿಸಿಕೊಂಡು ಬರುತ್ತದೆ. ಇಬ್ಬರ ಪೈಕಿ ಒಬ್ಬರು ಕೆಳಗೆ ಬೀಳುತ್ತಾರೆ. ಆನೆ, ಅವರನ್ನು ಕಾಲಿನಲ್ಲಿ ತುಳಿಯಲು ಯತ್ನಿಸುತ್ತದೆ. ಅದೃಷ್ಟವಶಾತ್ ಅದರ ಕಾಲು ಅವರ ದೇಹಕ್ಕೆ ತಾಗುವುದಿಲ್ಲ. ಅಷ್ಟರಲ್ಲಿ ಆನೆ ತಿರುಗಿ ಹೋಗುವ ದೃಶ್ಯ ವಿಡಿಯೊ ತುಣುಕಿನಲ್ಲಿದೆ.
ಎದುರು ಹೋಗುತ್ತಿದ್ದ ವಾಹನದಲ್ಲಿದ್ದವರು ವಿಡಿಯೊ ಚಿತ್ರೀಕರಿಸಿದ್ದಾರೆ. ಮಹಿಳೆಯರು ಮಲಯಾಳ ಭಾಷೆಯಲ್ಲಿ ಮಾತನಾಡುವುದು ವಿಡಿಯೊದಲ್ಲಿ ಕೇಳಿಸುತ್ತದೆ.
’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್, ‘ವಿಡಿಯೊವನ್ನು ನಾನೂ ಗಮನಿಸಿದ್ದೇನೆ. ನಮ್ಮ ಮದ್ದೂರು ವಲಯದಲ್ಲಿ ಆಗಿದೆ ಎಂದು ಕೆಲವರು ಹೇಳುತ್ತಿದ್ದು, ಇನ್ನೂ ಕೆಲವರು ಕೇರಳದ ವಯನಾಡು ಅರಣ್ಯದ ಮುತಂಗ ಪ್ರದೇಶದಲ್ಲಿ ನಡೆದಿದೆ ಎನ್ನುತ್ತಿದ್ದಾರೆ. ನಾವು ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದರು.
ಈ ಹೆದ್ದಾರಿಯಲ್ಲಿ ಸಂಚರಿಸುವಾಗ ಆನೆ ಸೇರಿದಂತೆ ಇತರ ಪ್ರಾಣಿಗಳು ರಸ್ತೆ ಬದಿಯಲ್ಲಿ ಕಾಣಸಿಗುತ್ತವೆ. ವಾಹನಗಳನ್ನು ನಿಲ್ಲಿಸಬಾರದು ಎಂಬ ಸೂಚನೆ ಇದ್ದರೂ, ವಾಹನಗಳಿಂದ ಇಳಿಯುವ ಪ್ರವಾಸಿಗರು ಪ್ರಾಣಿಗಳ ಫೋಟೊ ತೆಗೆಯಲು, ಸೆಲ್ಫಿ ತೆಗೆಯುವ ದುಸ್ಸಾಹಸ ಮಾಡುತ್ತಿದ್ದಾರೆ. ಈ ಹಿಂದೆಯೂ ಈ ಹೆದ್ದಾರಿಯಲ್ಲಿ ಇಂತಹ ಪ್ರಕರಣಗಳು ನಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.