ಚಾಮರಾಜನಗರ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಮಕ್ಕಳ ಸ್ನೇಹಿ ಮತ್ತು ಜಿಲ್ಲಾ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಗ್ರಾಮವೊಂದರ ಬಸವರಾಜು ಅಲಿಯಾಸ್ ಬಸವಾಚಾರಿ (35) ಶಿಕ್ಷೆಗೆ ಗುರಿಯಾದ ವ್ಯಕ್ತಿ. 2019ರ ಡಿಸೆಂಬರ್ 12ರಂದು ಈ ಘಟನೆ ನಡೆದಿತ್ತು.
ಐದು ವರ್ಷದ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಾಗ, ಇಡ್ಲಿ ಕೊಡುವ ನೆಪದಲ್ಲಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಬಸವರಾಜು, ಅತ್ಯಾಚಾರ ಎಸಗಿದ್ದ. ಬಾಲಕಿ ಕಿರುಚಿಕೊಂಡ ನಂತರ ಓಡಿ ಹೋಗಿದ್ದ. ಪೋಷಕರು ಬಂದು ಬಾಲಕಿಯನ್ನು ವಿಚಾರಿಸಿದ ಬಳಿಕ ಬಸವರಾಜುವನ್ನು ಪ್ರಶ್ನಿಸಲು ಹೋದಾಗ, ಆತ ಮನೆಯೊಳಕ್ಕೆ ಹೋಗಿ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ಮನೋಜ್‌ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಬಸವರಾಜು ಎಸಗಿರುವ ಕೃತ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದ್ದು, ಬಸವರಾಜುಗೆ ಪೋಕ್ಸೊ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ ಮಕ್ಕಳ ಸ್ನೇಹಿ ಮತ್ತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ನಿಶಾರಾಣಿ ಸಿ.ಎ. ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. ಅಪರಾಧಿಯು ಶಿಕ್ಷೆಯನ್ನು ಏಕ ಕಾಲದಲ್ಲಿ ಅನುಭವಿಸಬೇಕು ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.
ಅಲ್ಲದೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತ ಬಾಲಕಿಗೆ ₹4 ಲಕ್ಷ ಪರಿಹಾರವನ್ನು 30 ದಿನಗಳ ಒಳಗಾಗಿ ನೀಡಬೇಕು ಎಂದೂ ಅವರು ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯೋಗೇಶ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.