ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಆಡಿನ ಕಣಿವೆ ಕಾಲೊನಿ ಸಮೀಪದ ಅರಣ್ಯದಲ್ಲಿ ವನ್ಯಪ್ರಾಣಿಯ ದಾಳಿಗೆ ಸಿಲುಕಿ ಗ್ರಾಮಸ್ಥ ಬಸವ (54) ಸಾವಿಗೀಡಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ ಅವರ ಎದೆಯ ಮೇಲ್ಭಾಗವಷ್ಟೇ ಪತ್ತೆಯಾಗಿದ್ದು, ಉಳಿದದ್ದನ್ನು ಪ್ರಾಣಿ ತಿಂದಿರುವ ಸಾಧ್ಯತೆ ಇದೆ. ದಾಳಿ ಮಾಡಿರುವುದು ಹುಲಿ ಅಥವಾ ಚಿರತೆಯೇ ಎಂಬುದು ದೃಢಪಟ್ಟಿಲ್ಲ. ಸ್ಥಳೀಯರು, ‘ಹುಲಿ’ ಎಂದು ಹೇಳುತ್ತಿದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಬಸವ, ಸೋಮವಾರ ಬೆಳಿಗ್ಗೆ ಕುರಿಗಳಿಗೆ ಮೇವು ತರಲು ಕಾಲೊನಿ ಸಮೀಪದಲ್ಲಿರುವ ಕಾಡಿಗೆ ತೆರಳಿದ್ದರು. ವಾಪಸು ಬಂದಿರಲಿಲ್ಲ. ಕುಟುಂಬಸ್ಥರು ಸಂಜೆಯಿಂದ ಹುಡುಕಾಟ ನಡೆಸಿದ್ದರು. ದೇಹ ಪತ್ತೆಯಾಗುತ್ತಿದ್ದಂತೆಯೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್, ‘ಕಾಡಿನೊಳಗೆ ಘಟನೆ ನಡೆದಿದ್ದು, ಕೊಂದಿರುವುದು ಹುಲಿಯೋ ಅಥವಾ ಚಿರತೆಯೋ ಎಂದು ಸ್ಪಷ್ಟವಾಗಿಲ್ಲ. ದೇಹದ ಅಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದರು.
‘ಕಾಡಿನೊಳಗೆ ದಾಳಿ ಮಾಡಿರುವುದರಿಂದ ಕುಟುಂಬಕ್ಕೆ ಪರಿಹಾರ ನೀಡಲು ಅವಕಾಶವಿಲ್ಲ. ಆದರೆ ಮಾನವೀಯ ದೃಷ್ಟಿಯಿಂದ ಏನಾದರೂ ಮಾಡಬೇಕಿದೆ’ ಎಂದು ಹೇಳಿದರು.
ಚಲನವಲನದ ಮೇಲೆ ನಿಗಾ: ‘ದಾಳಿ ನಡೆದ ಮತ್ತು ದೇಹ ಪತ್ತೆಯಾದ ಜಾಗವನ್ನು ಗುರುತಿಸಲಾಗಿದೆ. ಕಾಡಿನೊಳಗೆ ಒಂದು ಕಿ.ಮೀ ದೂರದಲ್ಲಿ ದಾಳಿ ಮಾಡಿ, ದೇಹವನ್ನು ಮತ್ತೆ ಒಂದೂವರೆ ಕಿ.ಮೀ ದೂರ ಎಳೆದೊಯ್ದಿದೆ. ಕಾಡಿನೊಳಗೆ ಘಟನೆ ನಡೆದಿರುವುದರಿಂದ ಸೆರೆ ಹಿಡಿಯುವುದಿಲ್ಲ. ಆದರೆ, ಕ್ಯಾಮೆರಾ ಟ್ರ್ಯಾಪ್ ಮೂಲಕ ಅದು ಹುಲಿಯೇ ಅಥವಾ ಚಿರತೆಯೇ ಎಂಬುದನ್ನು ದೃಢಪಡಿಸಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.