ADVERTISEMENT

ಶಾಸಕ ಮಹೇಶ್‌ ಪಿ.ಎ ಸೋಗಿನಲ್ಲಿ ಕಾರವಾರ ಶಾಸಕಿಗೆ ವಂಚಸಿದ ವ್ಯಕ್ತಿ ಪೊಲೀಸರ ವಶಕ್ಕೆ

ರೂಪಾಲಿ ನಾಯ್ಕ ಅವರಿಂದ ₹ 50 ಸಾವಿರ ವಸೂಲು ಮಾಡಿದ್ದ ಆರೋಪಿ ಈಗ ಪೊಲೀಸರ ವಶದಲ್ಲಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 15:28 IST
Last Updated 19 ಜುಲೈ 2021, 15:28 IST
ಸಚಿನ್‌ ಗೌಡ
ಸಚಿನ್‌ ಗೌಡ   

ಕೊಳ್ಳೇಗಾಲ: ‘ನಾನು ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ (ಪಿ.ಎ) ಎಂದು ಸುಳ್ಳು ಹೇಳಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರ ಬಳಿ ₹ 50 ಸಾವಿರ ಹಣ ಪಡೆದ ವ್ಯಕ್ತಿಯೊಬ್ಬರನ್ನು ನಗರ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಗೌಡ (23) ಪೊಲೀಸರ ವಶದಲ್ಲಿರುವವರು. ಶಾಸಕ ಎನ್‌.ಮಹೇಶ್‌ ಅವರ ಆಪ್ತ ಸಹಾಯಕ ಮಹದೇವಸ್ವಾಮಿ ಅವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

‘ಸಚಿನ್ ಗೌಡ ಅವರು ಜುಲೈ 2ರಂದು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಕರೆ ಮಾಡಿ, ತಾನು ಎನ್‌.ಮಹೇಶ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡಿದ್ದರು. ಮರುದಿನ ಶಾಸಕಿಗೆ ಮತ್ತೆ ಕರೆ ಮಾಡಿ, ಶಾಸಕರಿಗೆ ₹50 ಸಾವಿರ ತುರ್ತು ಹಣ ಬೇಕಾಗಿದೆ ಎಂದು ಹೇಳಿದ್ದರು. ಇದನ್ನು ನಂಬಿದ್ದ ರೂಪಾಲಿ ನಾಯ್ಕ ಅವರು ಆನ್‌ಲೈನ್‌ ಮೂಲಕ ಹಣವನ್ನು ಸಚಿನ್‌ ಗೌಡ ಖಾತೆಗೆ ಜಮೆ ಮಾಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ವಾರದ ಹಿಂದೆ ಬೆಂಗಳೂರಿನಲ್ಲಿ ಎನ್‌.ಮಹೇಶ್‌ ಹಾಗೂ ರೂಪಾಲಿ ನಾಯ್ಕ ಅವರು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರೂಪಾಲಿ ನಾಯ್ಕ ಅವರು ₹50 ಸಾವಿರ ತಲುಪಿತೇ ಎಂದು ಕೇಳಿದ್ದರು. ತಾನು ಯಾಕೆ ಹಣ ಕೇಳಲಿ ಎಂದು ಮಹೇಶ್‌ ಅವರು ಮರು ಪ್ರಶ್ನೆ ಹಾಕಿದಾಗ, ‘ನಿಮ್ಮ ಆಪ್ತ ಸಹಾಯಕ ಸಚಿನ್‌ ಗೌಡ ಅವರ ಖಾತೆಗೆ ಹಣ ಹಾಕಿದ್ದೇನೆ’ ಎಂದು ರೂಪಾಲಿ ನಾಯ್ಕ ಹೇಳಿದ್ದಲ್ಲದೇ, ಸಚಿನ್‌ ಗೌಡ ಅವರ ಮೊಬೈಲ್‌ ನಂಬರ್‌ ಕೂಡ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಇದೇ ವ್ಯಕ್ತಿ ಈ ಹಿಂದೆಯೂ ಇತರ ಶಾಸಕರು ಹಾಗೂ ರಾಜಕೀಯ ಮುಖಂಡರ ಆಪ್ತ ಸಹಾಯಕ ಎಂದು ಹೇಳಿಕೊಂಡು ಬೇರೆಯವರಿಂದಲೂ ಹಣ ವಸೂಲಿ ಮಾಡಿರುವುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಬ್‌ ಇನ್‌ಸ್ಪೆಕ್ಟರ್‌ ಚೇತನ್‌ ಅವರು, ‘ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದಷ್ಟೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.