ಹನೂರು (ಚಾಮರಾಜನಗರ): ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಚುನಾವಣಾ ತರಬೇತಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾದ ಅಧಿಕಾರಿ ಜಗದೀಶ್ ಉಸಿರಾಡುತ್ತಿರುವುದು ಸಂಜೆ ಬೆಳಕಿಗೆ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಂಗಳವಾರ ಪಟ್ಟಣದಲ್ಲಿ ಎಆರ್‌ಒ ಹಾಗೂ ಪಿಆರ್‌ಒಗಳಿಗೆ ಚುನಾವಣಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಗೆ ಖಜಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್ ಅವರು ಬಂದಿದ್ದರು. ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮೆಟ್ಟಿಲು ಹತ್ತುತ್ತಿದ್ದಾಗ ಎಡವಿ ಬಿದ್ದಿದ್ದಾರೆ. ಅವರ ಗಲ್ಲ ಹಾಗೂ ತಲೆಯ ಹಿಂಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದ್ದರಿಂದ ಸಿಬ್ಬಂದಿ ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ನಿಸ್ತೇಜವಾಗಿ ಮಲಗಿದ್ದ ಜಗದೀಶ್ ಅವರನ್ನು ನೋಡಿದ್ದರಲ್ಲದೆ, ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಘಟನೆಯ ಬಗ್ಗೆ ಮಾಹಿತಿಯನ್ನೂ ಪಡೆದಿದ್ದರು.
ಮಧ್ಯಾಹ್ನ ಹೋಲಿಕ್ರಾಸ್ ಆಸ್ಪತ್ರೆಯಿಂದ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಶವಾಗಾರದಲ್ಲಿ ದೇಹವನ್ನು ಇರಿಸಲಾಗಿತ್ತು. ಜಗದೀಶ್ ಅವರ ತಾಯಿ ಕೈಯನ್ನು ಮುಟ್ಟಿದಾಗ, ಅವರು ಕೈಕಾಲು ಅಲ್ಲಾಡಿಸಿದರು. ತಕ್ಷಣ ಅವರು ವೈದ್ಯರ ಗಮನಕ್ಕೆ ತಂದರು. ತಾಲ್ಲೂಕಿನ ಪ್ರಭಾರ ವೈದ್ಯಾಧಿಕಾರಿ ಡಾ. ಪ್ರಕಾಶ್ ಅವರು ನಾಡಿಮಿಡಿತವನ್ನು ಪರಿಶೀಲಿಸಿದಾಗ ವ್ಯಕ್ತಿಯು ಬದುಕಿರುವುದು ಕಂಡು ಬಂದಿದೆ ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೊ ಆಸ್ಪತ್ರೆಗೆ ರವಾನಿಸಲಾಗಿದೆ.
‘ವ್ಯಕ್ತಿ ಮೆಟ್ಟಿಲು ಹತ್ತುವಾಗ ಕೆಳಗೆ ಬಿದ್ದಿದ್ದಾರೆ. ಗಲ್ಲ ಮತ್ತು ತಲೆಯಲ್ಲಿ ತೀವ್ರ ರಕ್ತ ಬಂದಿದ್ದರಿಂದ ಗಾಬರಿಯಾಗಿ ಕೋಮಾ ಸ್ಥಿತಿಗೆ ಮರಳಿರುವ ಸಾಧ್ಯತೆ ಇದೆ. ಮಧ್ಯಾಹ್ನದವರೆಗೂ ವ್ಯಕ್ತಿಗೆ ಪ್ರಜ್ಞೆ ಬಂದಿರಲಿಲ್ಲ. ನಾನು ಮರಣೋತ್ತರ ಪರೀಕ್ಷೆ ಮಾಡಲು ಹೋದಾಗ ನಾಡಿಮಿಡಿತ ಪರೀಕ್ಷಿಸಿದಾಗ ಬದುಕಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಬೇರೆ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದ್ದೇನೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗುರುಪ್ರಸಾದ್, ‘ಘಟನೆ ಬಗ್ಗೆ ಮಾಹಿತಿ ಬಂದಿದೆ. ವ್ಯಕ್ತಿ ಬದುಕಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ’ ಎಂದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ‘ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಲಾಗಿತ್ತು. ಅದು ಫ್ಲ್ಯಾಟ್ ಬಂದಿದೆ. ನಾಡಿ ಮಿಡಿತವೂ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆ ಬಳಿಕವೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಸಂಜೆ ಹೊತ್ತಿಗೆ ನಾಡಿಮಿಡಿತ ಇದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಹೇಳಿದ್ದು, ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾನೂ ಆಸ್ಪತ್ರೆಗೆ ಹೋಗುತ್ತಿದ್ದೇನೆ. ಅಲ್ಲಿನ ವೈದ್ಯರೊಂದಿಗೆ ಸಮಾಲೋಚಿಸಿ ಮಾಹಿತಿ ನೀಡುವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.