ಯಳಂದೂರು: ಯುಗಾದಿಗೆ ಬೆರಳೆಣಿಕೆಯಷ್ಟೇ ದಿನಗಳಿವೆ. ಆದರೆ, ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವು ಮಾರುಕಟ್ಟೆಯಲ್ಲಿ ಹೆಚ್ಚು ಕಾಣಿಸುತ್ತಿಲ್ಲ. ಬಿಸಿಲಿನ ತಾಪಕ್ಕೆ ವೃಕ್ಷಗಳಲ್ಲಿ ಹೂ ಗೊಂಚಲು ಉದುರುತ್ತಿದ್ದು, ಕಾಯಿ ಭೂಮಿ ಪಾಲಾಗುತ್ತಿದೆ.
ಮಳೆ ಕೊರತೆ, ಹವಾಮಾನ ವೈಪರೀತ್ಯದಿಂದ ಬೆಳೆ ಕೈಕೊಟ್ಟಿದೆ. ಮಾವಿನ ಋತು ಬಂದರೂ, ಮಾರಾಟಕ್ಕೆ ಬಂದಿಲ್ಲ. ವೃಕ್ಷಗಳಲ್ಲೂ ಕಾಯಿ ಅಷ್ಟಾಗಿ ಕಾಣಸಿಗುತ್ತಿಲ್ಲ.
ಮಾವಿನ ಹೂ ಅರಳುವುದು ಹಾಗೂ ಕಾಯಿ ಕಟ್ಟುವುದು ತಡವಾಗಿದೆ. ಜೊತೆಗೆ, ಬಿಸಿಲಿನ ಅಬ್ಬರಕ್ಕೆ ಫಲ ಬಿಡುವ ಮರಗಳು ನಲುಗಿವೆ. ತಾಪಕ್ಕೆ ಸಿಲುಕಿದ ಕಾಯಿಗಳು ಉದುರುತ್ತಿದ್ದರೆ, ಮತ್ತೊಂದೆಡೆ ಕೀಟ ಹಾಗೂ ರೋಗ ಬಾಧೆಯೂ ಕಾಡುತ್ತಿದೆ. ನೀರಾವರಿ ಪ್ರದೇಶದಲ್ಲೂ ಫಲ ಮತ್ತು ಪುಷ್ಪ ಜೊತೆಯಾಗಿದೆ. ಮಳೆಯಾಶ್ರಿತ ತೋಟಗಳಲ್ಲಿ ಕಾಯಿ ಬಲಿಯುವ ನಂಬಿಕೆ ಇಲ್ಲದಂತಾಗಿದೆ.
‘ಯುಗಾದಿ ವೇಳೆ ಎಲ್ಲರೂ ಸುವಾಸಿತ ಮಾವಿಗೆ ಬೇಡಿಕೆ ಸಲ್ಲಿಸುತ್ತಿದ್ದರು. ಮಾರುಕಟ್ಟೆಗೆ ಮಾರ್ಚ್ ಅಂತ್ಯದಲ್ಲಿ ಹತ್ತಾರು ನಮೂನೆಯ ಮಾವು ಬರುತ್ತಿತ್ತು. ಕಿತ್ತಳೆ, ದ್ರಾಕ್ಷಿ, ಸೇಬು ಬಿಟ್ಟರೆ, ಈ ಸಲ ಮಾವು ಬರುವುದು ತಡವಾಗಿದೆ. ಸ್ಥಳೀಯ ಬೆಳೆಗಾರರ ತೋಟದಲ್ಲೂ ಫಸಲು ಕೈಸೇರುವ ಲಕ್ಷಣಗಳಿಲ್ಲ. ಹೊರ ಜಿಲ್ಲೆಗಳ ಮಾವಿನ ಹಣ್ಣು ಪೂರೈಕೆಯೂ ಕಂಡುಬಂದಿಲ್ಲ. ಒಟ್ಟಾರೆ ಈ ವರ್ಷ ಮಾವಿನ ಬೆಲೆ ಗಗನ ಮುಖಿಯಾಗಲಿದೆ. ಉತ್ತಮ ಮಾಲು ಸಿಗುವುದು ಕಷ್ಟ’ ಎಂದು ಮಾರಾಟಗಾರ ನಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೊಳವೆ ಬಾವಿ ಸೌಕರ್ಯ ಇದ್ದವರು ತೋತಾಪುರಿ, ಸಫೇಡ, ರಸಪುರಿ ಹಾಗೂ ಇನ್ನಿತರ ಕಸಿ ಮರಗಳ ರಕ್ಷಣೆಗೆ ಒತ್ತು ನೀಡಿದ್ದಾರೆ. ಎರಡು ವರ್ಷಗಳಿಗೆ ಹೋಲಿಸಿದರೆ ಈ ಸಲ ಅದರ ಅರ್ಧವೂ ಕಟಾವಿಗೆ ಬರದು. ಬೆಲೆ ಮತ್ತು ಬೇಡಿಕೆ ಇದ್ದರೂ, ನಿಗದಿತ ಸಮಯದಲ್ಲಿ ಕೊಯ್ಲಿಗೆ ಬಂದಿಲ್ಲ. ಕೆಲವು ಮರಗಳಲ್ಲಿ ಕಾಣಸಿಕೊಂಡಿದ್ದ ಜಿಗಿಹುಳು, ವೈಟ್ ಫೈಸ್, ಜೋನಿ, ನುಸಿ ಕೀಟಬಾಧೆ ಹಾಗೂ ಬೂದು ರೋಗವೂ ಇಳುವರಿ ಕುಸಿತಕ್ಕೆ ಕಾರಣವಾಗಿದೆ’ ಎಂದು ಕೆಸ್ತೂರಿನ ಸಾವಯವ ಕೃಷಿಕ ಲೋಕೇಶ್ ಅಭಿಪ್ರಾಯಪಟ್ಟರು.
ಸರ್ಕಾರ ನೆರವಾಗಲಿ: ‘ಈ ವರ್ಷ ಬರ ಮತ್ತು ಬಿಸಿಲಿನ ತಾಪ ಜನ ಜೀವನವನ್ನು ಕಾಡಿದೆ. ಇದರ ಪ್ರಭಾವ ಕೃಷಿ ಕ್ಷೇತ್ರದ ಮೇಲೆಯೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾವಿನ ಬೆಳೆ ಇಷ್ಟೊಂದು ಪ್ರಮಾಣದಲ್ಲಿ ಕುಸಿತ ಕಂಡಿರಲಿಲ್ಲ. ಮಳೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಬೆಳೆಯೂ ಕೈಸೇರಿಲ್ಲ. ಹೀಗಾಗಿ, ಮಾವು ನಂಬಿ ಕಂಗಾಲಾಗಿರುವ ಕೃಷಿಕರಿಗೆ ಸರ್ಕಾರ ನೆರವಿನ ಹಸ್ತ ನೀಡಬೇಕು’ ಎಂದು ಮಾವು ಬೆಳೆಗಾರರು ಒತ್ತಾಯಿಸುತ್ತಾರೆ.
ಇನ್ನೂ ಕಟಾವಿಗೆ ಬಾರದ ಬೆಳೆ ಈ ಬಾರಿ ಇಳುವರಿಯೂ ಕಡಿಮೆ ಹೊರಗಿಂದಲೂ ಬಂದಿಲ್ಲ ಮಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.