ADVERTISEMENT

ಚಾಮರಾಜನಗರ | ತೊಗರಿ, ಅವರೆ ಸುಗ್ಗಿ: ಖರೀದಿ ಭರಾಟೆ; ಇಳಿಯದ ಬೆಳ್ಳುಳ್ಳಿ ದರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 12:40 IST
Last Updated 26 ನವೆಂಬರ್ 2024, 12:40 IST
ಚಾಮರಾಜನಗರದ ತರಕಾರಿ ಮಾರಾಟ ಮಳಿಗೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕ
ಚಾಮರಾಜನಗರದ ತರಕಾರಿ ಮಾರಾಟ ಮಳಿಗೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕ   

ಚಾಮರಾಜನಗರ: ಮಾರುಕಟ್ಟೆಗೆ ತೊಗರಿಕಾಯಿ ಹಾಗೂ ಅವರೆಕಾಯಿ ಲಗ್ಗೆ ಇಟ್ಟಿದ್ದು, ಖರೀದಿ  ಜೋರಾಗಿದೆ. ಚಳಿಗಾಲದಲ್ಲಿ ಮಾತ್ರ ವಿಶೇಷವಾಗಿ ದೊರೆಯುವ ಕಾರಣಕ್ಕೆ ತೊಗರಿ ಹಾಗೂ ಅವರೆ ಖರೀದಿಗೆ ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ. ಪರಿಣಾಮ ಇತರ ತರಕಾರಿಗಳ ಬೇಡಿಕೆ ಕುಗ್ಗಿದೆ ಎನ್ನುತ್ತಾರೆ ವ್ಯಾಪಾರಿಗಳು.

‘ಸಾಂಬಾರ್‌, ಪಲ್ಯ, ಸಾಗು ಸಹಿತ ವಿವಿಧ ಖಾದ್ಯಗಳಿಗೆ ತೊಗರಿ ಹಾಗೂ ಅವರೆಕಾಯಿ ವಿಶೇಷ ರುಚಿ ಕೊಡುತ್ತದೆ. ಬೆಳಗಿನ ಉಪಾಹಾರಕ್ಕೂ ಬಳಕೆ ಮಾಡುವುದರಿಂದ ಅಡುಗೆ ಮನೆಯಲ್ಲಿ ತೊಗರಿ ಹಾಗೂ ಅವರೆ ಘಮಲು ಹೆಚ್ಚು ಆವರಿಸಿಕೊಂಡಿದೆ’ ಎನ್ನುತ್ತಾರೆ ಗೃಹಿಣಿ ಲಾವಣ್ಯ.

‘ಬೀನ್ಸ್, ಕ್ಯಾರೆಟ್‌, ಬೆಂಡೆ, ಬದನೆ ಸಹಿತ ಇತರ ತರಕಾರಿಗಳು ವರ್ಷಪೂರ್ತಿ ಲಭ್ಯವಾಗುತ್ತವೆ. ಆದರೆ, ಹಸಿ ತೊಗರಿ ಹಾಗೂ ಅವರೆ ಸೀಸನ್‌ನಲ್ಲಿ ಮಾತ್ರ ಲಭ್ಯವಾಗುವುದರಿಂದ ಸಹಜವಾಗಿ ಬಳಕೆ ಹೆಚ್ಚಾಗುತ್ತದೆ. ತಾಜಾ ಹಾಗೂ ರುಚಿಕರವಾಗಿರುವುದರಿಂದ ಮನೆ ಮಂದಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ’ ಎನ್ನುತ್ತಾರೆ ಅವರು.

ADVERTISEMENT

ದರ ದುಬಾರಿ:

‘ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ತೊಗರಿ ಹಾಗೂ ಅವರೆ ದರ ದುಬಾರಿಯಾಗಿದ್ದು ಕೆ.ಜಿಗೆ ತಲಾ ₹60ಕ್ಕೆ ಮಾರಾಟವಾಗುತ್ತಿದೆ. ಸೀಸನ್ ಮುಗಿಯುತ್ತಾ ಬಂದರೆ ಸ್ವಲ್ಪ ಇಳಿಮುಖವಾಗಬಹುದು’ ಎನ್ನುತ್ತಾರೆ ವ್ಯಾಪಾರಿ ಚಂದ್ರಶೇಖರ್‌.

ತರಕಾರಿ ದರ ಸ್ಥಿರ:

ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ದರ ಸ್ಥಿರವಾಗಿದೆ. ಗಗನಕ್ಕೇರಿ ಕುಳಿತಿರುವ ಬೆಳ್ಳುಳ್ಳಿ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಗುಣಮಟ್ಟ ಹಾಗೂ ಗಾತ್ರದ ಮೇಲೆ ಕೆ.ಜಿಗೆ ₹320 ರಿಂದ ₹400ರವರೆಗೆ ಮಾರಾಟವಾಗುತ್ತಿದೆ. ಈರುಳ್ಳಿ ದರವೂ ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಿರವಾಗಿದ್ದು ಬೇಡಿಕೆ ಉಳಿಸಿಕೊಂಡಿದೆ. ದಪ್ಪ ಈರುಳ್ಳಿಗೆ ಕೆ.ಜಿಗೆ ₹60 ಇದ್ದರೆ, ಸಣ್ಣ ಈರುಳ್ಳಿ ಕೆ.ಜಿಗೆ ₹50  ದರ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಟೊಮೆಟೊ, ಕ್ಯಾರೆಟ್‌, ಬೀನ್ಸ್‌ ಬೆಂಡೆ, ಗೋರಿ ಕಾಯಿ, ಬೀಟ್‌ರೂಟ್‌ ದರ ಕೆ.ಜಿಗೆ ₹40 ಇದ್ದು ಗುಣಮಟ್ಟದಲ್ಲಿ ಕೊರತೆ ಕಾಣುತ್ತಿದೆ. ಶೀತದ ವಾತಾವರಣ ತರಕಾರಿ ಬೇಗ ಕೆಡಲು ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಹೂವಿನ ದರ ದುಬಾರಿ:

‘ಕಾರ್ತೀಕ ಮಾಸದ ಹಿನ್ನೆಲೆಯಲ್ಲಿ ಹೂವಿನ ದರವೂ ದುಬಾರಿಯಾಗಿದ್ದು ಚೆಂಡು ಹೂ ಕೆ.ಜಿಗೆ₹ 20 ರಿಂದ ₹30, ಗುಲಾಬಿ ₹240 ದರ ಇದೆ. ಕಾರ್ತೀಕ ಮಾಸ ಮುಗಿಯುತ್ತಾ ಬರುತ್ತಿರುವುದರಿಂದ ಮುಂದಿನ ವಾರ ದರ ಬಹುತೇಕ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ’ ಎನ್ನುತ್ತಾರೆ ವ್ಯಾಪಾರಿಗಳು.

ಹಣ್ಣಿನ ದರ:

ಮಾರುಕಟ್ಟೆಗೆ ಸೇಬಿನ ಪೂರೈಕೆ ಹೆಚ್ಚಿದ್ದು ಶಿಮ್ಲಾ ಸೇಬು ಕೆ.ಜಿಗೆ ₹120 ಇದ್ದರೆ, ಇರಾನ್ ಆ್ಯಪಲ್‌ ₹160ರವರೆಗೂ ಇದೆ. ದಾಳಿಂಬೆ ಕೆ.ಜಿಗೆ ₹120 ರಿಂದ ₹160, ಪಪ್ಪಾಯ ₹30 ರಿಂದ ₹40, ದ್ರಾಕ್ಷಿ ₹120 ರಿಂದ ₹140, ಕಿತ್ತಳೆ ₹50 ರಿಂದ ₹70, ಮೋಸಂಬಿ ₹90ರಿಂದ ₹100, ಸೀಬೆ ₹80 ರಿಂದ ₹100 ದರ ಇದೆ. ಏಲಕ್ಕಿ ಬಾಳೆ ಕೆ.ಜಿಗೆ 40, ಪಚ್ಚಬಾಳೆ ಕೆ.ಜಿಗೆ ₹30 ರಿಂದ₹ 40 ಇದೆ.

ಹೂವಿನ ದರ (ಕೆ.ಜಿಗಳಲ್ಲಿ)

ಸೇವಂತಿಗೆ;200 ಸಣ್ಣ ಮಲ್ಲಿಗೆ;600–800 ಮಲ್ಲಿಗೆ;1000 ಕನಕಾಂಬರ;1200 ಸುಗಂಧರಾಜ;120 ಸೇವಂತಿಗೆ;200

ತರಕಾರಿ ದರ (ಕೆ.ಜಿ.ಗೆ ₹ ಗಳಲ್ಲಿ)

ಈರುಳ್ಳಿ;60 ಟೊಮೆಟೊ;40 ಕ್ಯಾರೆಟ್;40 ಬೀನ್ಸ್;40 ಹಿರೇಕಾಯಿ;60 ಬೆಂಡೆಕಾಯಿ;40 ಬದನೆಕಾಯಿ;40 ಆಲೂಗಡ್ಡೆ;40–50 ತೊಗರಿಕಾಯಿ;60 ಅವರೆಕಾಯಿ;60 ಬೆಳ್ಳುಳ್ಳಿ;320 ಶುಂಠಿ;80 ಹಸಿಮೆಣಸಿನಕಾಯಿ;40 ಮೂಲಂಗಿ;40 ಕ್ಯಾಪ್ಸಿಕಂ;80 ಎಲೆಕೋಸು;25 ಬೀಟ್‌ರೂಟ್‌;30–40 ಹೂಕೋಸು;40 ತೊಂಡೆಕಾಯಿ;60 ಹಾಗಲಕಾಯಿ;40

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.