ADVERTISEMENT

ಚಾಮರಾಜನಗರ | ನರೇಗಾ: ಗುರಿ ಮೀರಿದ ಸಾಧನೆ

ಎರಡು ತಿಂಗಳಿಗೆ 4.19 ಲಕ್ಷ ಮಾನವ ದಿನಗಳ ಗುರಿ, 4.99 ಲಕ್ಷ ಮಾನವ ದಿನಗಳ ಸಾಧನೆ

ಸೂರ್ಯನಾರಾಯಣ ವಿ.
Published 2 ಜೂನ್ 2024, 5:43 IST
Last Updated 2 ಜೂನ್ 2024, 5:43 IST
ಹನೂರು ತಾಲ್ಲೂಕಿನ ಗೋಪಿನಾಥಂನಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು
ಹನೂರು ತಾಲ್ಲೂಕಿನ ಗೋಪಿನಾಥಂನಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು   

ಚಾಮರಾಜನಗರ: ಬರಗಾಲದ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ನೀಡಲು ಶ್ರಮಿಸಿದೆ. ಇದರಿಂದಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಖಾತ್ರಿ ಯೋಜನೆಯಡಿ ನಿಗದಿತ ಗುರಿಗಿಂತಲೂ ಹೆಚ್ಚು ಮಾನವ ದಿನಗಳ ಸೃಷ್ಟಿಯಾಗಿದೆ.

ಎರಡು ತಿಂಗಳ ಅವಧಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲೆಗೆ ನರೇಗಾ ಅಡಿ 4.19 ಲಕ್ಷ ಮಾನವ ದಿನಗಳ ಗುರಿ ನೀಡಿತ್ತು. ಮೇ 31ರ ಹೊತ್ತಿಗೆ 4.99 ಲಕ್ಷ ಮಾನವ ದಿನಗಳಷ್ಟು ಕೆಲಸ ಮಾಡಲಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ 119.29ರಷ್ಟು ಸಾಧನೆಯಾಗಿದೆ.

ಜಿಲ್ಲೆಯಲ್ಲಿ 2.22 ಲಕ್ಷ ಕುಟುಂಬಗಳು ಉದ್ಯೋಗ ಕಾರ್ಡ್ ಹೊಂದಿವೆ. ಎರಡು ತಿಂಗಳ ಅವಧಿಯಲ್ಲಿ 29,197 ಕುಟುಂಬಗಳ 43,585 ಕಾರ್ಮಿಕರಿಗೆ ಖಾತ್ರಿ ಉದ್ಯೋಗ ಸಿಕ್ಕಿದೆ.

ADVERTISEMENT

ಕೂಲಿ ಹೆಚ್ಚಳ: ಕಳೆದ ವರ್ಷ ನರೇಗಾ ಅಡಿಯಲ್ಲಿ ಪ್ರತಿ ದಿನ ₹316 ಕೂಲಿ ಸಿಗುತ್ತಿತ್ತು. ಈ ವರ್ಷ ಅದು ₹349ಕ್ಕೆ ಏರಿಕೆಯಾಗಿದೆ. ಹಾಗಾಗಿ, ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಸಂರಕ್ಷಣೆ ಕಾಮಗಾರಿಗೆ ಒತ್ತು: ಈ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಜಲಸಂರಕ್ಷಣೆ ಕಾಮಗಾರಿಗೆ ಒತ್ತು ನೀಡಲಾಗಿದೆ.

‘ಕೆರೆಗಳ ಹೂಳು ತೆಗೆಯುವುದು, ಬದುಗಳ ನಿರ್ಮಾಣ, ಕಾಲುವೆಗಳ ಪುನಶ್ಚೇತನ, ಕೊಳವೆ ಬಾವಿ ಮರುಪೂರಣ ವ್ಯವಸ್ಥೆ, ಚೆಕ್ ಡ್ಯಾಂ ಹೂಳು ತೆಗೆಯುವಂತಹ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಶಾಲೆಗಳ ಅಭಿವೃದ್ಧಿ ಕೆಲಸಗಳನ್ನೂ ಕೈಗೆತ್ತಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ 104 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶಾಲಾ ಕಾಂಪೌಂಡ್ ನಿರ್ಮಾಣ, ಆಟದ ಮೈದಾನ, ಅಡುಗೆ ಮನೆ, ನಿರ್ಮಾಣಕ್ಕೂ ಒತ್ತು ನೀಡಿದ್ದೇವೆ’ ಎಂದು ಹೇಳಿದರು.

‘ತೋಟಗಾರಿಕೆ, ರೇಷ್ಮೆ ಪ್ರದೇಶ ವಿಸ್ತರಣೆ, ಕೃಷಿ ಅರಣ್ಯ ಆಧಾರಿತ ವೈಯಕ್ತಿಕ ಕಾಮಗಾರಿಗಳು, ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಲದಲ್ಲಿ ಸಸಿ ನೆಡುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತಿದೆ’ ಎಂದು ಮೀನಾ ವಿವರಿಸಿದರು.

ಎಸ್‌ಸಿ, ಎಸ್‌ಟಿ, ಮಹಿಳಾ ಭಾಗೀದಾರಿಕೆ ಹೆಚ್ಚಳ: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಈ ವರ್ಷ ಹೆಚ್ಚಾಗಿದೆ.

‘ಪರಿಶಿಷ್ಟ ಜಾತಿ ಭಾಗವಹಿಸುವಿಕೆ ಪ್ರಮಾಣ ಶೇ 31.71ರಷ್ಟಿದ್ದು, ಐದು ವರ್ಷಗಳ ಅವಧಿಯಲ್ಲಿಯೇ ಇದು ಅತಿ ಹೆಚ್ಚಿನ ಭಾಗವಹಿಸುವಿಕೆ. ಪರಿಶಿಷ್ಟ ಪಂಗಡದ ಕಾರ್ಮಿಕರ ಭಾಗವಹಿಸುವಿಕೆಯ ಶೇ 10.05ರಷ್ಟಿದ್ದು ಈ ಹಿಂದಿನ ವರ್ಷಗಳಿಗೆ ಹೋಲಿಸಿದ್ದಲ್ಲಿ ಇದು ಕೂಡ ಗಣನೀಯವಾಗಿ ಹೆಚ್ಚಿದೆ. ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಶೇ 58.63ರಷ್ಟಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರದಲ್ಲಿ ಕೊಳವೆಬಾವಿಗೆ ಜಲ ಮರುಪೂರಣ ವ್ಯವಸ್ಥೆ ಕಾಮಗಾರಿ ನಡೆಯುತ್ತಿರುವುದು

ಕಾರ್ಮಿಕರ ಆರೋಗ್ಯ ತಪಾಸಣೆ

ಈ ವರ್ಷದಿಂದ ನರೇಗಾ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲೇ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು ಅಪೌಷ್ಟಿಕತೆ ರಕ್ತದೊತ್ತಡ ರಕ್ತಹೀನತೆ ಮಧುಮೇಹ ಸೇರಿದಂತೆ ಇತರೆ ಕಾಯಿಲೆಗಳನ್ನು ಪರೀಕ್ಷಿಸಲಾಗುತ್ತಿದೆ. ರೋಗ ಲಕ್ಷಣಗಳು ಕಂಡುಬಂದರೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತಿದೆ.

ಈ ವರ್ಷ ನಮಗೆ 25 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಲಾಗಿದೆ. ಅನುದಾನವೂ ಲಭ್ಯವಿದ್ದು ಕೂಲಿಯನ್ನು ನಿಯಮಿತವಾಗಿ ನೀಡಲಾಗುತ್ತಿದೆ.
-ಆನಂದ್ ಪ್ರಕಾಶ್ ಮೀನಾ, ಜಿ.ಪಂ. ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.