ADVERTISEMENT

ನಮ್ಮ ರೈಲು ಓಡುತ್ತಿದೆ, ಬೀಳುವುದಿಲ್ಲ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 21 ಮೇ 2024, 0:20 IST
Last Updated 21 ಮೇ 2024, 0:20 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಚಾಮರಾಜನಗರ: ‘ನಮ್ಮ ರೈಲು ಓಡುತ್ತಿದೆ. ಗಢ ಗಢ ನಡುಗುತ್ತಿಲ್ಲ. ಬಿದ್ದೂ ಹೋಗುವುದಿಲ್ಲ. ಬಿಜೆಪಿಯವರಿಗೆ ಯಾವ ಲಾಭವೂ ಆಗುವುದಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸೋಮವಾರ ಪ್ರತಿಪಾದಿಸಿದರು. 

‘ಕಾಂಗ್ರೆಸ್‌ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು,  ‘ಒಂದು ವರ್ಷದ ಆಡಳಿತ ತೃಪ್ತಿ ತಂದಿದೆ. ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. 1.25 ಕೋಟಿ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ’ ಎಂದರು. 

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ಎಲ್‌.ಶಿವರಾಮೇಗೌಡರು ನೀಡಿದ್ದಾರೆನ್ನಲಾದ ಲಘು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ‘ಅದೊಂದು ಮೂರ್ಖತನದ ಯೋಚನೆ. ದೇವೇಗೌಡರು ಪ್ರಧಾನಿಯಾಗಿದ್ದವರು. ಪ್ರತಿಯೊಬ್ಬರೂ ಸಾರ್ಥಕ ಬದುಕು ಬದುಕಬೇಕು ಎಂದು ಆಶಿಸುವುದು ಮಾನವನ ಗುಣ. ಯಾವ ಮೂರ್ಖನೂ ಹಾಗೆ ಯೋಚಿಸುವುದಿಲ್ಲ’ ಎಂದರು. 

ADVERTISEMENT

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿ, ‘ಕೊಲೆಗಳು ಎಲ್ಲಿ ಆಗುತ್ತಿವೆ? ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಅಂತೆ ಕಂತೆಗಳನ್ನು ಮಾತನಾಡಲಾಗದು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ’ ಎಂದರು. 

‘ಸಂಪುಟ ಪುನರ್‌ರಚನೆ ನಮ್ಮ ಕೆಲಸವಲ್ಲ. ಹೈಕಮಾಂಡ್ ಗೆ ಬಿಟ್ಟ ವಿಚಾರ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.