ADVERTISEMENT

ಮೈಸೂರನ್ನು ಸುಂದರಗೊಳಿಸಿದ ಮಿರ್ಜಾ ಇಸ್ಮಾಯಿಲ್‌: ಸುರೇಶ್. ಎನ್ ಋಗ್ವೇದಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:36 IST
Last Updated 25 ಅಕ್ಟೋಬರ್ 2024, 15:36 IST
ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜನ್ಮ ದಿನಾಚರಣೆಯಲ್ಲಿ ಸುರೇಶ್. ಎನ್ ಋಗ್ವೇದಿ, ನಾಗರಾಜು ಪಾಲ್ಗೊಂಡಿದ್ದರು
ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜನ್ಮ ದಿನಾಚರಣೆಯಲ್ಲಿ ಸುರೇಶ್. ಎನ್ ಋಗ್ವೇದಿ, ನಾಗರಾಜು ಪಾಲ್ಗೊಂಡಿದ್ದರು    

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಕೊಡುಗೆ ಅಪಾರ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್. ಎನ್ ಋಗ್ವೇದಿ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ನಡೆದ ಸರ್ ಮಿರ್ಜಾ ಇಸ್ಮಾಯಿಲ್ ಅವರ 141ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ ಎಂದರು.

ಬೆಂಗಳೂರಿನಲ್ಲಿ ‌ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಹರಡಲು ಶ್ರಮಿಸಿದ ಮಹಾನ್ ವ್ಯಕ್ತಿ ಸರ್ ಮಿರ್ಜಾ ಇಸ್ಮಾಯಿಲ್‌. ಉತ್ತಮ ಆಡಳಿತಗಾರರಾಗಿದ್ದ ಅವರು ಕೃಷ್ಣರಾಜಸಾಗರದಲ್ಲಿ ವಿಶ್ವಪ್ರಸಿದ್ಧ ಉದ್ಯಾನ ನಿರ್ಮಿಸಿದ ಹೆಗ್ಗಳಿಕೆ ಹೊಂದಿದ್ದಾರೆ ಎಂದರು.

ADVERTISEMENT

ಕೈಗಾರಿಕೆ, ನೀರಾವರಿ, ಶಿಕ್ಷಣ, ವಸತಿ ನಿಲಯಗಳು, ರಸ್ತೆ, ಸೇತುವೆ ನಿರ್ಮಾಣ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ದಶಕಗಳ ಹಿಂದೆಯೇ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ನೀಡಿದ ದೂರದೃಷ್ಟಿಯ ಆಡಳಿತಗಾರ ಎಂದರು.

ಕೊಳ್ಳೇಗಾಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜು ಮಾತನಾಡಿ, ಕಸಾಪ ಹಾಗೂ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸಿದವರನ್ನು ಸ್ಮರಿಸುವ ಕಾರ್ಯ ಅಭಿನಂದನೀಯ. ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕೆಗಳನ್ನು ಬೆಳೆಸಿದವರು, ವಿಶಾಲ ರಸ್ತೆಗಳ ನಿರ್ಮಾಣ ಹಾಗೂ ಸುಂದರ ಕಟ್ಟಡಗಳ ನಿರ್ಮಾಣದ ಮೈಸೂರು ನಗರವನ್ನು ಸುಂದರಗೊಳಿಸಿದವರು ಸರ್ ಮಿರ್ಜಾ ಇಸ್ಮಾಯಿಲ್ ಎಂದರು.

ಬಿ.ಕೆ.ಆರಾಧ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಗೌರವಯುತವಾದ ಸಂಸ್ಥೆಯಾಗಿದ್ದು ಶತಮಾನಗಳಿಂದಲೂ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿವಿಗೆ ಶ್ರಮಿಸುತ್ತಿದೆ. ಪ್ರತಿ ಮಂಗಳವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಾಗೂ ಮಹನೀಯರನ್ನು ಸ್ಮರಿಸುವ ಕಾರ್ಯ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಪದ್ಮಾ ಪುರುಷೋತ್ತಮ್, ಪರಮೇಶ್ವರಪ್ಪ, ಗೋವಿಂದರಾಜು, ಲೋಕೇಶ್, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.