ADVERTISEMENT

ಚಾಮರಾಜನಗರ | ₹ 100 ಕೋಟಿ ಪ್ಯಾಕೇಜ್‌ಗೆ ಸಿ.ಎಂಗೆ ಮನವಿ: ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 7:32 IST
Last Updated 20 ಸೆಪ್ಟೆಂಬರ್ 2023, 7:32 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಭೇಟಿ ನೀಡುವ ಅಂಗವಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ನಗರಸಭೆ ಸದಸ್ಯರೊಂದಿಗೆ ಸಭೆ ನಡೆಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಭೇಟಿ ನೀಡುವ ಅಂಗವಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ನಗರಸಭೆ ಸದಸ್ಯರೊಂದಿಗೆ ಸಭೆ ನಡೆಸಿದರು   

ಚಾಮರಾಜನಗರ: ನಗರದ ಅಭಿವೃದ್ದಿಗೆ ₹100 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ಹೇಳಿದರು.

ಮುಖ್ಯಮಂತ್ರಿಯವರು 27ರಂದು ನಗರಕ್ಕೆ ಭೇಟಿ ನೀಡುವ ಸಂಬಂಧ ನಗರಸಭೆಯ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ, ಅವರ ಸಲಹೆ ಅಭಿಪ್ರಾಯಗಳನ್ನು ಪಡೆದ ನಂತರ ಅವರು ಮಾತನಾಡಿದರು. 

‘2017ರಿಂದ ಅನುದಾನಗಳ ಸದ್ಬಳಕೆ, ನಗರದ ಸ್ವಚ್ಚತೆ, ಪಟ್ಟಣ ಅಭಿವೃದ್ದಿಗಾಗಿ ಈ ಸಭೆಯಲ್ಲಿ ಸದಸ್ಯರು, ಅಧಿಕಾರಿಗಳಿಂದ ಸಲಹೆ, ಸೂಚನೆ ಪಡೆಯಲಾಗಿದ್ದು, ಪಟ್ಟಣದ ಅಭಿವೃದ್ದಿಗಾಗಿ ಗಂಭೀರ ಚೆರ್ಚೆಯಾಗಿದೆ. ಸದಸ್ಯರು ಸರ್ವಾನುಮತದಿಂದ ಪಟ್ಟಣ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳಿಂದ ವಿಶೇಷ ಪ್ಯಾಕೇಜ್ ತರಬೇಕು ಎಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ₹100 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಅಂದು ಮನವಿ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಬಸ್ ನಿಲ್ದಾಣ ಆಗಬೇಕು. ಚಿಕ್ಕಹೊಳೆ, ಸುವರ್ಣಾವತಿಯಲ್ಲಿ ಪ್ರವಾಸಿತಾಣ, 3ನೇ ಹಂತ ಕುಡಿಯುವ ನೀರಿನ ಯೋಜನೆ,  ಒಳಚರಂಡಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಸಭೆಯಲ್ಲಿ ಸದಸ್ಯರು ನಗರದ ಸ್ವಚ್ಚತೆ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ವಾರ್ಡ್‌ಗಳಿಗೆ ನೇಮಕವಾಗಿರುವ ಆರೋಗ್ಯ ನಿರೀಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದಾಗ ಶಾಸಕರು ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಸುಷ್ಮಾ ಅವರನ್ನು ತರಾಟೆಗೆ ತೆಗೆದುಕೊಂಡರು. 

ನಗರದಲ್ಲಿ ವಿದ್ಯುತ್ ಶವಗಾರ ಮಾಡಬೇಕು ಎಂದು ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಗಮನಕ್ಕೆ ತಂದರು. ನಗರದಲ್ಲಿ ಈಜುಕೊಳ ನಿರ್ಮಾಣ ಮಾಡಬೇಕು ಎಂದು ಮಹೇಶ್‌, ಚಿಕ್ಕಹೊಳೆ, ಸುವರ್ಣಾವತಿಯಲ್ಲಿ ಉದ್ಯಾನ ನಿರ್ಮಾಣ ಮಾಡಬೇಕು, ನಗರಭಾ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಜಾರಿ ಮಾಡಿಸಬೇಕು ಎಂದು ಅಬ್ರಾರ್‌ ಅಹಮದ್‌ ಒತ್ತಾಯಿಸಿದರು. 

‘ದಸರಾ ಕಾರ್ಯಕ್ರಮದಲ್ಲಿ ನಗರದ ಎಲ್ಲ ಕಡೆಯಲ್ಲೂ ವಿದ್ಯುತ್ ದೀಪಾಲಂಕಾರ ಮಾಡಿಸಬೇಕು ಮತ್ತು ಸದಸ್ಯರ ಗೌರವ ಸಹಾಯಧನ ಹೆಚ್ಚಳ ಮಾಡಬೇಕು’ ಎಂದು ಸದಸ್ಯರು ಶಾಸಕರಲ್ಲಿ ಮನವಿ ಮಾಡಿದರು.

ಆಯುಕ್ತ ರಾಮದಾಸ್, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.