ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಮಲೆ ಮಹದೇಶ್ವರ ಸ್ವಾಮಿಗೆ ಅರ್ಪಿಸಿರುವ ಮುಡಿಯ ಕೂದಲಿನ ಮಾರಾಟದಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ₹1.49 ಕೋಟಿ ಆದಾಯ ಬಂದಿದೆ.
2020ರ ನವೆಂಬರ್ 2ರಿಂದ ಸೆ.2ರವರೆಗೆ 184 ದಿನಗಳ ಪೈಕಿ ಲಾಕ್‌ಡೌನ್ ಅವಧಿಯ 85 ದಿನಗಳನ್ನು ಬಿಟ್ಟು, 99 ದಿನಗಳಲ್ಲಿ ಸಂಗ್ರಹವಾದ ಕೂದಲನ್ನು ಪ್ರಾಧಿಕಾರವು ಇ–ಟೆಂಡರ್ ಮೂಲಕ ಹರಾಜು ಹಾಕಿತ್ತು.
ಈ ಅವಧಿಯಲ್ಲಿ ತುಂಡು ಕೂದಲು 4,595 ಕೆಜಿಗಳಷ್ಟು ಸಂಗ್ರಹವಾಗಿದ್ದರೆ, ಉದ್ದನೆಯ ಕೂದಲು 951.5 ಕೆಜಿ ಸಂಗ್ರಹವಾಗಿದೆ.
ದಾಖಲೆಯ ಬೆಲೆ: ಉದ್ದನೆಯ ಕೂದಲಿಗೆ ಈ ಬಾರಿ ಟೆಂಡರ್‌ನಲ್ಲಿ ದಾಖಲೆಯ ಬೆಲೆ ನಿಗದಿಯಾಗಿದೆ. ಕೆಜಿಗೆ ₹15,535ರಂತೆ ಮಾರಾಟವಾಗಿದೆ. ಇದರಿಂದ ಪ್ರಾಧಿಕಾರಕ್ಕೆ ₹1,47,81,863 ಆದಾಯ ಬಂದಿದೆ. ಕಳೆದ ವರ್ಷ ಉದ್ದ ಕೂದಲು ಕೆಜಿಗೆ ₹7,400ರಂತೆ ಮಾರಾಟವಾಗಿತ್ತು.
ಇ–ಹರಾಜಿನಲ್ಲಿ 14 ಮಂದಿ ಭಾಗವಹಿಸಿದ್ದರು. ಈ ಪೈಕಿ ಮೈಸೂರಿನ ಶ್ರೀನಿವಾಸ ಮಹಾದೇವನ್ ಅವರು ಅತಿಹೆಚ್ಚು (₹15,535) ಬಿಡ್ ಮಾಡಿದ್ದರು.
‘ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆಜಿಗೆ ₹8,135 ಹೆಚ್ಚು ಸಿಕ್ಕಿದೆ. ಬೆಟ್ಟದಲ್ಲಿ ಇದುವರೆಗೆ ಇದೇ ದಾಖಲೆಯ ಮಾರಾಟವಾಗಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ತಿಳಿಸಿದ್ದಾರೆ.
‘ತುಂಡು ಕೂದಲು ಪ್ರತಿ ಕೆಜಿಗೆ ₹34.50ರಂತೆ ಮಾರಾಟವಾಗಿದ್ದು, ಇದರಿಂದ ₹1,58,528 ಸಂಗ್ರಹವಾಗಿದೆ. ಒಟ್ಟಾರೆಯಾಗಿ ಪ್ರಾಧಿಕಾರಕ್ಕೆ ₹1,49,40,391 ಆದಾಯ ಬಂದಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.