ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಸಿಬ್ಬಂದಿ ಎಡವಟ್ಟಿನಿಂದಾಗಿ ಲಾಡು ಪ್ರಸಾದದ ಜೊತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ₹2.91 ಲಕ್ಷ ಹಣ ಭಕ್ತನ ಕೈ ಸೇರಿದೆ.
ಭೀಮನ ಅಮಾವಾಸ್ಯೆ ದಿನವಾದ ಗುರುವಾರ ಈ ಘಟನೆ ನಡೆದಿದೆ.ಮಹದೇಶ್ವರಬೆಟ್ಟದ ರಾಜಗೋಪುರ ಬಳಿ ವಿಶೇಷ ದರ್ಶನದ ₹500 ಟಿಕೆಟ್ ಕೌಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಭಕ್ತರಿಗೆ ವಿಶೇಷ ದರ ಟಿಕೆಟ್ ನೀಡಿ ಪ್ರಸಾದ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣ ಇದ್ದ ಚೀಲ ಇದ್ದುದರಿಂದ ಹಣ ಸಹಿತ ಬ್ಯಾಗ್ ಅನ್ನು ಭಕ್ತರೊಬ್ಬರಿಗೆ ಸಿಬ್ಬಂದಿ ನೀಡಿದ್ದಾರೆ.
ಮಧ್ಯಾಹ್ನ ಹಣ ಕಾಣಿಸದೇ ಇದ್ದುದರಿಂದ ಗಾಬರಿಗೊಂಡು ಬಳಿಕ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭಕ್ತರೊಬ್ಬರು ಲಾಡು ಪ್ರಸಾದದ ಜೊತೆ ಹಣವಿದ್ದ ಚೀಲವನ್ನು ನೀಡಿರುವುದು ಗೊತ್ತಾಗಿದೆ.
‘ಕಣ್ತಪ್ಪಿನಿಂದ ಈ ಘಟನೆ ಜರುಗಿದೆ ಎಂದು ಹೇಳಲಾಗುತ್ತಿದ್ದು, ಭಕ್ತನ ಕೈ ಸೇರಿದ ಹಣವನ್ನು ಕೌಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ವಸೂಲು ಮಾಡಲು ತಾಕೀತು ಮಾಡಲಾಗಿದೆ’ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮಹದೇಶ್ವರ ಬೆಟ್ಟ: 35 ದಿನಗಳಲ್ಲಿ ₹2 ಕೋಟಿ ಸಂಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.