ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯಲ್ಲಿ ಇತ್ತೀಚೆಗೆ ಮುಕ್ತಾಯಕಂಡ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಲಾಡು ಮಾರಾಟ, ಚಿನ್ನದ ತೇರು, ಪ್ರವೇಶ ಶುಲ್ಕ ಸೇರಿದಂತೆ ವಿವಿಧ ಸೇವೆ, ಉತ್ಸವಗಳಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ₹2.08 ಕೋಟಿ ಆದಾಯ ಬಂದಿದೆ.
ಇದೇ 10ರಿಂದ 14ರವರೆಗೆ ಜಾತ್ರೆ ನಡೆದಿತ್ತು. ಕೊನೆಯ ದಿನ ಬ್ರಹ್ಮ ರಥೋತ್ಸವದೊಂದಿಗೆ ಜಾತ್ರೆಗೆ ತೆರೆ ಬಿದ್ದಿತ್ತು. ಹುಂಡಿ ಕಾಣಿಕೆ ಎಣಿಕೆ, ವಸತಿಗೃಹಗಳಿಂದ ಮತ್ತು ಪ್ರಾಧಿಕಾರದ ಬಸ್ ಸಂಚಾರದಿಂದ ಬಂದಿರುವ ಆದಾಯದ ಲೆಕ್ಕಚಾರ ಇನ್ನಷ್ಟೇ ನಡೆಯಬೇಕಾಗಿದೆ.
ಐದು ದಿನಗಳ ಜಾತ್ರೆಯಲ್ಲಿ ಜಿಲ್ಲೆಯಿಂದ ಮಾತ್ರವಲ್ಲದೇ, ಹೊರ ಜಿಲ್ಲೆಗಳು, ನೆರೆ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡು, ಮಾದಪ್ಪನ ದರ್ಶನ ಮಾಡಿ, ವಿವಿಧ ಸೇವೆಗಳನ್ನು ಸಲ್ಲಿಸಿದ್ದರು.
2,18,740 ಲಾಡು ಪ್ರಸಾದ ಮಾರಾಟವಾಗಿದ್ದು, ಇದರಿಂದ ₹54,68,500 ಸಂಗ್ರಹವಾಗಿದೆ. ಚಿನ್ನದ ತೇರು ಸೇರಿದಂತೆ ವಿವಿಧ ಉತ್ಸವಗಳಿಂದ ₹86,88,036 ಆದಾಯ ಬಂದಿದೆ. 1,786 ಭಕ್ತರು ಚಿನ್ನದ ರಥೋತ್ಸವ ಸೇವೆ ಮಾಡಿಸಿದ್ದು, ಇದರಿಂದಲೇ ₹53,59,786 ಮೊತ್ತ ಸಂಗ್ರಹವಾಗಿದೆ. 50 ಭಕ್ತರು ಬೆಳ್ಳಿ ರಥೋತ್ಸವ ನೆರವೇರಿಸಿದ್ದು, ₹1,00,050 ಶುಲ್ಕ ಸಂಗ್ರಹವಾಗಿದೆ.
‘ವಿಶೇಷ ಪ್ರವೇಶ ಶುಲ್ಕದಿಂದ ₹38,78,100 ಸಂಗ್ರಹವಾಗಿದೆ. ಉಳಿದಂತೆ ಕಲ್ಲು ಸಕ್ಕರೆಯಿಂದ ₹57,980, ಬ್ಯಾಗ್‌ನಿಂದ ₹72,510, ತೀರ್ಥ ಪ್ರಸಾದದಿಂದ ₹1,85,690, ಮಿಶ್ರ ಪ್ರಸಾದದಿಂದ ₹8,96,125, ಮಾಹಿತಿ ಕೇಂದ್ರದಲ್ಲಿ 6,19,475, ಅಕ್ಕಿ ಸೇವೆಯಿಂದ ₹1,67,400, ಪುದುವಟ್ಟು ₹2,79,120, ದಾಸೋಹದ ಕಾಣಿಕೆ ₹8,604. ದೇವಸ್ಥಾನದ ಕಾಣಿಕೆ ₹5,700, ಪಾರ್ಕಿಂಗ್ ಶುಲ್ಕ ₹2,70,70 ಹಾಗೂ ವಿವಿಧ ಸೇವೆಗಳಿಂದ ₹5,27,800 ಎಲ್ಲಾ ಮೂಲಗಳಿಂದ ಸಂಗ್ರಹವಾಗಿದೆ’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.