ADVERTISEMENT

ಯುಗಾದಿ ಜಾತ್ರೆ; ಸಕಲ ಸಿದ್ಧತೆ

ಲಕ್ಷಾಂತರ ಭಕ್ತರು ಭೇಟಿ ನೀಡುವ ನಿರೀಕ್ಷೆ: ರಾತ್ರಿ ವೇಳೆ ಜಗಮಿಸುತ್ತಿರುವ ದೇವಾಲಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 5:25 IST
Last Updated 6 ಏಪ್ರಿಲ್ 2024, 5:25 IST
ಮಹದೇಶ್ವರ ಬೆಟ್ಟದ ರಂಗಮಂದಿರದಲ್ಲಿ ತಂಗಿರುವ ಭಕ್ತರು
ಮಹದೇಶ್ವರ ಬೆಟ್ಟದ ರಂಗಮಂದಿರದಲ್ಲಿ ತಂಗಿರುವ ಭಕ್ತರು   

ಮಹದೇಶ್ವರ ಬೆಟ್ಟ: ಪ್ರಸಿದ್ಧ ಧಾರ್ಮಿಕ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಶನಿವಾರ (ಏಪ್ರಿಲ್‌ 6) ಚಾಲನೆ ಸಿಗಲಿದ್ದು, 9ರವರೆಗೆ ನಡೆಯಲಿದೆ.

ಜಾತ್ರೆಗಾಗಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದೆ.  ಯುಗಾದಿ ಜಾತ್ರೆಯಲ್ಲಿ ಭಾಗಿಯಾಗಲು ಮಾದಪ್ಪನ ಸನ್ನಿಧಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ಬರುತ್ತಿದ್ದು, ಶುಕ್ರವಾರ ಸಂಜೆ ಬೆಟ್ಟಕ್ಕೆ ತಲುಪಿರುವವರು ರಂಗಮಂದಿರದ ಆವರಣ ಹಾಗೂ ಅಕ್ಕಪಕ್ಕದಲ್ಲಿ ನೆರಳಿಗಾಗಿ ವ್ಯವಸ್ಥೆಯನ್ನು ಕಲ್ಪಿಸಿರುವ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದಾರೆ.

ಕರ್ನಾಟಕ ರಾಜ್ಯವಲ್ಲದೇ ನೆರೆ ರಾಜ್ಯವಾದ ತಮಿಳುನಾಡಿನಿಂದಲೂ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಬರುತ್ತಿದ್ದಾರೆ. ಯುಗಾದಿ ಸಂದರ್ಭದಲ್ಲಿ ನೆರೆ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. 

ADVERTISEMENT

ಯುಗಾದಿಯಂದು ರಥೋತ್ಸವ: ಶನಿವಾರ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದೆ.  ಭಾನುವಾರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. ಸೋಮವಾರ ಯುಗಾದಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. 

ಮಂಗಳವಾರ ಚಂದ್ರಮಾನ ಯುಗಾದಿ ಪ್ರಯುಕ್ತವಾಗಿ ಬೆಳಿಗ್ಗೆ 7.30 ರಿಂದ 9 ಗಂಟೆಯವರೆಗೆ ನಡೆಯುವ ಶುಭ ಮುಹೂರ್ತದಲ್ಲಿ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ. 

ನೆತ್ತಿ ಸುಡುವ ಬಿಸಿಲಿನ ನಡುವೆಯೇ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ನಿರೀಕ್ಷೆ ಇರುವುದರಿಂದ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ನೆರೆಳಿನ ವ್ಯವಸ್ಥೆ, ನಿರಂತರ ಅನ್ನ ದಾಸೋಹ ವ್ಯವಸ್ಥೆ, ಮಡಿಕೆ ನೀರು ಸಂಗ್ರಹ ವ್ಯವಸ್ಥೆಯನ್ನು ಮಾಡಲಾಗಿದೆ. ರಂಗಮಂದಿರದ ಆವರಣವನ್ನು  ಸ್ವಚ್ಛಗೊಳಿಸಿ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗಹಿದೆ. 

ವಿದ್ಯುತ್‌ ಅಲಂಕಾರ: ಜಾತ್ರೆಯ ಅಂಗವಾಗಿ ದೇವಾಲಯ ಹಾಗೂ ಸುತ್ತಮುತ್ತ ವಿಶೇಷ ವಿದ್ಯುತ್‌ ಅಲಂಕಾರ ಮಾಡಲಾಗಿದೆ. 

ಕೊಳ್ಳೇಗಾಲ ರಸ್ತೆಯಲ್ಲಿರುವ ಚೆಕ್ ಪೋಸ್ಟ್‌ನಿಂದ ಪಾಲಾರ್‌ ರಸ್ತೆಯಲ್ಲಿರುವ ಚೆಕ್‌ಪೋಸ್ಟ್‌ವರೆಗೆ, ಆಡಳಿತ ಕಚೇರಿ, ರಂಗಮಂದಿರದ ಆವರಣ ದೇವಾಲಯದ ಮುಂಭಾಗದ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. 

ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ

ಇದೇ ಮೊದಲ ಬಾರಿಗೆ ದೇವಾಲಯಕ್ಕೆ ಭಕ್ತಾದಿಗಳಿಗೆ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಮಾಡಲಾಗಿದೆ. ದೇವಾಲಯಕ್ಕೆ ಬರುವ ಭಕ್ತರು ಎರಡರಿಂದ ಮೂರು ದಿನಗಳ ಕಾಲ ಬೆಟ್ಟದಲ್ಲೇ ತಂಗುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಮೊಬೈಲ್ ಚಾರ್ಜ್ ಮಾಡಲು ಹರ ಸಾಹಸ ಪಡಬೇಕಾದ ಸ್ಥಿತಿ ಇದೆ.  ಸ್ಥಳೀಯ ಅಂಗಡಿಗಳಲ್ಲಿ ₹20 ₹30 ₹50 ನೀಡಿ ಮೊಬೈಲ್ ಚಾರ್ಜ್ ಮಾಡಬೇಕಾಗಿತ್ತು. ಇದನ್ನು ಮನಗಂಡಿರುವ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಭಕ್ತಾದಿಗಳು ತಂಗುವ ರಂಗಮಂದಿರದ ಆವರಣ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಇನ್ನಿತರ ಕಡೆಗಳಲ್ಲಿ ಉಚಿತವಾಗಿ ಮೊಬೈಲ್ ಚಾರ್ಜ್ ಮಾಡುವ ವ್ಯವಸ್ಥೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.