ADVERTISEMENT

ಗ್ರಾಮೀಣ ಭಾಗಗಳಲ್ಲಿ ಹೆಚ್ಚುವರಿ ಮದ್ಯದಂಗಡಿ: ಸರ್ಕಾರದ ವಿರುದ್ದ ಎಸ್‌ಡಿಪಿಐ ಕಿಡಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 12:36 IST
Last Updated 2 ಅಕ್ಟೋಬರ್ 2023, 12:36 IST
   

ಚಾಮರಾಜನಗರ: ಗ್ರಾಮೀಣ ಭಾಗಗಳಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. 

ಹೊಸ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಮದ್ಯಭಾಗ್ಯ ಕೊಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು. 

ನಗರದ ಭುವನೇಶ್ವರಿ ವೃತ್ತದಲ್ಲಿ ವಿವಿಧ ಭಿತ್ತಿ ಪತ್ರಗಳನ್ನು ಹಿಡಿದು ನಿಂತಿದ್ದ ಪ್ರತಿಭಟನಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. 

ADVERTISEMENT

‘ಮದ್ಯಪಾನ ವಿರೋಧಿಯಾಗಿದ್ದ ಮಹಾತ್ಮ ಗಾಂಧೀಜಿಯವರ ಜಯಂತಿ ಆಚರಿಸಲು ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ, ಸಿದ್ದರಾಮಯ್ಯ ಗಾಂಧೀಜಿಯವರಿಗೆ ಮಾಲಾರ್ಪಣೆ ಮಾಡಬಾರದು. ಕಾಂಗ್ರೆಸ್  ಕಚೇರಿಗಳಲ್ಲಿ ಗಾಂಧಿ ಜಯಂತಿ ಆಚರಿಸಿ ಮಹಾತ್ಮನಿಗೆ ಅಗೌರವ ಸಲ್ಲಿಸಬಾರದು’ ಎಂದು ಆಗ್ರಹಿಸಿದರು. 

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್ ಅಹಮದ್ ಮಾತನಾಡಿ, ‘ರಾಜ್ಯ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚುವರಿ ಮದ್ಗದಂಗಡಿಗಳನ್ನು ತೆರೆಯಲು ಮುಂದಾಗಿರುವುದು ಖಂಡನೀಯ. ಮದ್ಯಪಾನಕ್ಕೆ ಉತ್ತೇಜನ ನೀಡುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ’ ಎಂದು ಕಿಡಿ ಕಾರಿದರು. 

‘ಗೃಹಲಕ್ಷ್ಮಿ ಮೂಲಕ ಮಹಿಳೆಯರಿಗೆ ₹2,000 ಕೊಡುತ್ತೇವೆಂದು ಹೇಳುತ್ತಾರೆ.  ಮತ್ತೊಂದೆಡೆ ಹೆಚ್ಚುವರಿಯಾಗಿ ಸಾವಿರ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ, ಮದ್ಯಪಾನವನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ನಿಷೇಧಿಸಲು ಮೂಲಕ ಗಾಂದೀಜೀಯವರ ಅವರ ಕನಸನ್ನು ಸರ್ಕಾರ ನನಸು ಮಾಡಬೇಕು’ ಎಂದರು. 

ನಗರಸಭಾ ಸದಸ್ಯ ಖಲೀಲ್ ಉಲ್ಲಾ, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಿ.ಎಸ್.ಸೈಯದ್ ಆರೀಫ್‌, ಜಿಲ್ಲಾ ಖಜಾಂಚಿ ನಯಾಜ್ ಉಲ್ಲಾ, ಜಿಲ್ಲಾ ಸಮಿತಿ ಸದಸ್ಯ ನಸ್ರುಲ್ಲಾ,  ಮುಖಂಡರಾದ ಬಂಗಾರಸ್ವಾಮಿ, ರಾಮಸಮುದ್ರ ಸುರೇಶ್, ನಿಜಧ್ವನಿಗೋವಿಂದರಾಜು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.