ADVERTISEMENT

ಆಧಾರ್‌ ನವೀಕರಣ | 3.20 ಲಕ್ಷ ಜನ ಬಾಕಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 6:50 IST
Last Updated 6 ಜನವರಿ 2024, 6:50 IST
<div class="paragraphs"><p>ಶಿಲ್ಪಾ ನಾಗ್‌</p></div>

ಶಿಲ್ಪಾ ನಾಗ್‌

   

ಚಾಮರಾಜನಗರ: ಜಿಲ್ಲೆಯಲ್ಲಿ 10,96,117 ಮಂದಿ ಆಧಾರ್‌ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3,20,656 ಜನರು ನವೀಕರಣ ಮತ್ತು  4,72,147 ಮಂದಿ ಮೊಬೈಲ್ ಸಂಖ್ಯೆಗೆ ಆಧಾರ್ ಸೀಡಿಂಗ್ ಮಾಡಿಸಿಕೊಂಡಿಲ್ಲ. 

‘10 ವರ್ಷಗಳಿಂದ ಒಂದೇ ವಿಳಾಸದಲ್ಲಿರುವವರು ಆಧಾರ್‌ ನವೀಕರಣ ಮಾಡಿಸಿಕೊಳ್ಳಬೇಕು. ಅದೇ ರೀತಿ ಮೊಬೈಲ್‌ ಸಂಖ್ಯೆಗೆ ಸೀಡಿಂಗ್‌ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಜನರು ಸೌಲಭ್ಯಗಳಿಂದ ವಂಚಿತರಾಗುವ ಸಂಭವವಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಎಚ್ಚರಿಸಿದರು. 

ADVERTISEMENT

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಆಧಾರ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು, ಸಕಾಲ ಸೇವೆಗಳು ಸೇರಿದಂತೆ ಇತರೆ ಕಾರ್ಯಗಳಿಗೂ ಆಧಾರ್ ಸಂಖ್ಯೆ ಪ್ರತಿಯೊಬ್ಬರಿಗೂ ಅಗತ್ಯ. ನಾಗರಿಕರ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದೂ ಕಡ್ಡಾಯ. ಜನರಿಗೆ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ನವೀಕರಣಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲಾಧಿಕಾರಿ ಕಚೇರಿಯ ಸ್ಪಂದನಾ ಕೇಂದ್ರ, ತಾಲ್ಲೂಕು ಕಚೇರಿ, ನಾಡಕಚೇರಿ, ಗ್ರಾಮ ಒನ್ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ಸಾಮಾನ್ಯ ಸೇವಾ ಕೇಂದ್ರ, ಬಿ.ಎಸ್.ಎನ್.ಎಲ್ ಕಚೇರಿ, ಅಂಚೆ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್ ಮತ್ತು ಇತರೆ ಬ್ಯಾಂಕ್‍ಗಳಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ನವೀಕರಣ ಕಾರ್ಯ ನಿರ್ವಹಿಸಲಾಗುತ್ತಿದೆ. ಆಧಾರ್ ನೋಂದಣಿಯಿಂದ ಯಾರು ಕೂಡ ವಂಚಿತರಾಗದಂತೆ ಎಚ್ಚರ ವಹಿಸಬೇಕು’ ಎಂದರು. 

‘ಆಧಾರ್ ಸೇವಾ ಕೇಂದ್ರಗಳ ನಿರ್ವಹಣೆಗಾಗಿ ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯಲಾಗಿದ್ದು, ಗಣಕಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ, ಆಪರೇಟರ್ ಕೊರತೆ ಸೇರಿದಂತೆ ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸಬೇಕು’ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.

‘ತಾಲ್ಲೂಕು ಮಟ್ಟದಲ್ಲಿ ನೋಂದಣಿ, ತಿದ್ದುಪಡಿ, ಪ್ರಗತಿ ಕಾರ್ಯಗಳ ಬಗ್ಗೆ ಪರಿಶೀಲಿಸಲು ತಾಲ್ಲೂಕು ಕಚೇರಿಯ ಶಿರಸ್ತೇದಾರರನ್ನು ತಾಲ್ಲೂಕು ಆಧಾರ್ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು. ಅವರು ಪ್ರತಿ 15 ದಿನಗಳಿಗೊಮ್ಮೆ ತಾಲ್ಲೂಕು ವ್ಯಾಪ್ತಿಯ ಎಲ್ಲ ನಾಡಕಚೇರಿಗಳಿಗೂ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿ ಉಪ ತಹಶೀಲ್ದಾರರ ಸಭೆ ಕರೆದು ಪ್ರಗತಿ ಕುರಿತು ಚರ್ಚಿಸಿ ವರದಿ ಸಲ್ಲಿಸಬೇಕು’ ಎಂದು ಅವರು ಸೂಚಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಬೆಂಗಳೂರಿನ ಅಧಾರ್ ಯುಐಡಿಐಎಐ ಉಪನಿರ್ದೇಶಕ ರಾಘವೇಂದ್ರ, ಜಿಲ್ಲಾ ಅಧಾರ್ ಸಮಾಲೋಚಕ ಪ್ರಭುಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಅಂಚೆ ಕಚೇರಿ ಸೂಪರಿಂಟೆಂಡೆಂಟ್‌ ಇದ್ದರು. 

72 ಸೇವಾ ಕೇಂದ್ರಗಳು
‘ಚಾಮರಾಜನಗರ ತಾಲ್ಲೂಕಿನಲ್ಲಿ 24 ಗುಂಡ್ಲುಪೇಟೆ 12 ಕೊಳ್ಳೇಗಾಲ 17 ಹನೂರು 12 ಹಾಗೂ ಯಳಂದೂರು ತಾಲ್ಲೂಕಿನ 7 ಸೇರಿದಂತೆ ಜಿಲ್ಲೆಯಲ್ಲಿ 72 ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. 5 ವರ್ಷದೊಳಗಿನ 27815 ಮಕ್ಕಳು 5 ರಿಂದ 18 ವರ್ಷದೊಳಗಿನ 178789 ಹಾಗೂ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ 889513 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1096117 ಜನರನ್ನು ಈಗಾಗಲೇ ನೊಂದಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಡಂಚಿನ ಜನರು ಸೇರಿದಂತೆ ಆಧಾರ್ ನೋಂದಣಿಯಾಗದಿರುವವರನ್ನು ಗುರುತಿಸಿ ನೋಂದಾಯಿಸುವ ಕೆಲಸವಾಗಬೇಕು’ ಎಂದು ಶಿಲ್ಪಾ ನಾಗ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.