ಹನೂರು: ಬಂಡೀಪುರ ಸಫಾರಿ, ಬಿಆರ್‌ಟಿಯ ಕೆ.ಗುಡಿ ಸಫಾರಿ ರೀತಿಯಲ್ಲೇ ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯದ ಸಫಾರಿ ಕೂಡ ಜನಪ್ರಿಯವಾಗುತ್ತಿದ್ದು, ಮಾದಪ್ಪನ ಕಾಡಿನ ಸೌಂದರ್ಯ ಸವಿಯಲು ಪ್ರವಾಸಿಗರು ಒಲವು ತೋರುತ್ತಿದ್ದಾರೆ.
ಬಂಡೀಪುರ, ಕೆ.ಗುಡಿಯಂತೆ ಇಲ್ಲಿ ಈಗ ಪ್ರತಿ ದಿನ ಸಫಾರಿ ನಡೆಯುತ್ತಿಲ್ಲ. ಪ್ರತಿ ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಮಾತ್ರ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲು ಆರಂಭಿಸಿದ ನಂತರ ಪ್ರತಿ ದಿನವೂ ಸಫಾರಿ ಸೌಲಭ್ಯ ಕಲ್ಪಿಸುವ ಚಿಂತನೆಯಲ್ಲಿ ಅರಣ್ಯ ಅಧಿಕಾರಿಗಳಿದ್ದಾರೆ.
2023ರ ಡಿ.2 ರಂದು ಸಫಾರಿ ಆರಂಭವಾಗಿದೆ. ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಿಂದಲೂ ಜನರು ಸಫಾರಿಗೆ ಬರುತ್ತಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರದಂದು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ನಾಲ್ಕು ಬಾರಿ ಸಫಾರಿ ಮಾಡಲಾಗುತ್ತಿದೆ. ಐದು ತಿಂಗಳ ಅವಧಿಯಲ್ಲಿ 1,542 ಜನರು ಮಹದೇಶ್ವರ ವನ್ಯಧಾಮವನ್ನು ಸುತ್ತಾಡಿದ್ದಾರೆ. ಆರಂಭದಲ್ಲಿ ಸಫಾರಿಗೆ ಒಂದು ವಾಹನ ಬಿಡಲಾಗಿತ್ತು. ಈಗ ಎರಡು ವಾಹನಗಳಿವೆ.
ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಿಸಿಲು ಜಾಸ್ತಿ ಇದ್ದಿದ್ದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ಮೂರು ದಿನಗಳಿಂದ ಮಳೆಯಾಗುತ್ತಿರುವುದರಿಂದ ಶನಿವಾರದಿಂದ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಪ‍್ರಾಣಿಗಳ ದರ್ಶನ: ಸಫಾರಿ ಹೋದವರಿಗೆ ಹುಲಿ, ಆನೆಗಳು, ಕರಡಿ, ಕಾಡೆಮ್ಮೆ, ಕಡವೆ, ಜಿಂಕೆ, ಕೆನ್ನಾಯಿಗಳು ಸೇರಿದಂತೆ ವಿವಿಧ ಪ್ರಾಣಿಗಳು ಕಾಣಸಿಗುತ್ತಿವೆ.
ಸಂಜೆ ವೇಳೆಯಲ್ಲೇ ಅಧಿಕವಾಗಿ ಕಾಣಿಸಿಕೊಳ್ಳುವ ಮೂಲಕ ಹುಲಿಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.
ಕೆಲವು ವಾರಗಳಿಂದ ಹೆಚ್ಚೆಚ್ಚು ಪ್ರಾಣಿಗಳು ಕಾಣಸಿಗುತ್ತಿವೆ. ಇತ್ತೀಚೆಗೆ ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ಕಂಡು ಬಂದಿತ್ತು. ಹೀಗಾಗಿ ಅಲ್ಲಿಂದಲೂ ಮಲೆ ಮಹದೇಶ್ವರ ವನ್ಯಧಾಮಕ್ಕೆ ಪ್ರಾಣಿಗಳು ಬಂದಿರಬಹುದು ಎಂದು ಹೇಳುತ್ತಾರೆ ಸಿಬ್ಬಂದಿ. ಜೊತೆಗೆ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಿಂದಲೂ ಪ್ರಾಣಿಗಳು ಬರುತ್ತವೆ.
‘ಬೆಳಗಿನ ವೇಳೆಗಿಂತ ಸಂಜೆಯ ಸಫಾರಿ ಪ್ರಾಣಿ, ಪರಿಸರ ಪ್ರಿಯರಿಗೆ ಹೆಚ್ಚಿನ ಮುದ ನೀಡುತ್ತಿದೆ. ಸಂಜೆ ವೇಳೆ ತಂಪಾದ ವಾತಾವರಣವಿರುವುದರಿಂದ ವನ್ಯಪ್ರಾಣಿಗಳು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುತ್ತವೆ. ಹೀಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಜೆ ವೇಳೆ ಸಫಾರಿಗೆ ಆಗಮಿಸುತ್ತಾರೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಎರಡು ವಾಹನಗಳು ಸಾಲದೆ ಸಾಕಷ್ಟು ಸಲ ಜನರು ನಿರಾಸೆಯಿಂದ ಹಿಂದಿರುಗಿ ಮಾರನೇ ದಿನ ಬಂದು ಸಫಾರಿ ಮಾಡಿದ್ದಾರೆ’ ಎಂದು ಹೇಳುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.
ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ಮಲೆ ಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ‘ಪಿ.ಜಿ.ಪಾಳ್ಯ ಸಫಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದುವರೆಗೆ ₹6 ಲಕ್ಷ ಆದಾಯ ಬಂದಿದೆ. ಇದರಿಂದ ಪ್ರವಾಸಿಗರಿ ಸಫಾರಿ ಕೇಂದ್ರದಲ್ಲಿ ಮೂಲಸೌಕರ್ಯ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗಿದೆ’ ಎಂದರು. ‘ಸಫಾರಿ ಸೆಂಟರ್ ಟಿಕೆಟ್ ಕೌಂಟರ್ ಮಾಹಿತಿ ಕೇಂದ್ರ ಹಾಗೂ ಪಾರ್ಕಿಂಗ್ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.