ಚಾಮರಾಜನಗರ: ‘ಕಳೆದ ಬಾರಿ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ನನ್ನ ಮೇಲೆ ವಿಪರೀತ ಒತ್ತಡ ಹಾಕಿದ್ದರಿಂದ ಸ್ಪರ್ಧಿಸಿದ್ದೆ. ಕ್ಷೇತ್ರದ ಜನರ ಪ್ರೀತಿಯಿಂದಾಗಿ ಗೆಲುವು ಸಿಕ್ಕಿತ್ತು. ಸಂಸದನಾಗಿ ಐದು ವರ್ಷಗಳಲ್ಲಿ ತೃಪ್ತಿಕರವಾಗಿ ಕೆಲಸ ಮಾಡಿದ್ದೇನೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಸೋಮವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನಾರೋಗ್ಯದ ಕಾರಣಕ್ಕೆ ಸಂಸತ್ ಅಧಿವೇಶನದಲ್ಲಿ ಹೆಚ್ಚು ಭಾಗವಹಿಸಲು ಆಗಿಲ್ಲ. ಪ್ರಶ್ನೆಗಳನ್ನು ಕೇಳಲು ಆಗಿಲ್ಲ. ಆದರೆ, ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಜನರ ಕಷ್ಟಗಳನ್ನು ಆಲಿಸಿದ್ದೇನೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿ ವರ್ಷಕ್ಕೆ ₹5 ಕೋಟಿಯಂತೆ ಐದು ವರ್ಷಗಳಿಗೆ ₹25 ಕೋಟಿ ಬರಬೇಕಿತ್ತು. ಕೋವಿಡ್ ಕಾರಣಕ್ಕೆ ಒಂದು ವರ್ಷ ಬಂದಿರಲಿಲ್ಲ. ಇಲ್ಲಿವರೆಗೆ ₹17.5 ಕೋಟಿ ಬಂದಿದೆ’ ಎಂದು ಹೇಳಿದರು.
‘ಈ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗಿದೆ. ಕೋವಿಡ್ ನಿರ್ವಹಣೆಗಾಗಿ ₹ 50 ಲಕ್ಷ ಕೊಟ್ಟಿದ್ದೇನೆ. ರಸ್ತೆ, ಸಮುದಾಯ ಭವನಗಳು, ಶಾಲೆ, ಕಾಲೇಜುಗಳಿಗೆ ಅನುದಾನ ಕೊಟ್ಟಿದ್ದೇನೆ. ಈಗ ಸಂವಿಧಾನ ಜಾಗೃತಿ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಸಂವಿಧಾನ ಓದು ಪುಸ್ತಕವನ್ನು ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪದವಿಪೂರ್ವ ಕಾಲೇಜು ಮಕ್ಕಳಿಗೆ ಹಂಚಿದ್ದೇನೆ. ಒಂಬತ್ತು ಅಂಬುಲೆನ್ಸ್‌ಗಳನ್ನು ನೀಡಿದ್ದೇನೆ’ ಎಂದರು.
‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ಅಲಿಂಕೊ ಸಹಕಾರದಲ್ಲಿ ಕ್ಷೇತ್ರದ ಅಂಗವಿಕಲರು, ಹಿರಿಯ ನಾಗರಿಕರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ಚಾಮರಾಜನಗರ ಮತ್ತು ನಂಜನಗೂಡುಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈಗ ರೈಲು ನಿಲ್ದಾಣ ನವೀಕರಣದ ಕೆಲಸ ಆರಂಭವಾಗಿದೆ. ರೈಲು ಮಾರ್ಗದ ವಿದ್ಯುದೀಕರಣ ನಡೆಯುತ್ತಿದೆ. ಮೈಸೂರು ವಿಮಾನ ನಿಲ್ದಾಣದ ಬಳಿ ಮಾತ್ರ ಕೆಲಸ ಬಾಕಿ ಇದೆ’ ಎಂದು ವಿವರಿಸಿದರು.
‘ಸಂಸದರು ಏನೂ ಕೆಲಸ ಮಾಡಿಲ್ಲ’ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆಯಲ್ಲಾ ಎಂದು ಕೇಳಿದ್ದಕ್ಕೆ, ‘ಅವರು ಆರೋಪ ಮಾಡಲಿ. ಅದಕ್ಕಾಗಿ ನಾನು ಮಾಡಿದ್ದನ್ನು ಹೇಳುತ್ತಿದ್ದಿದ್ದೇನೆ’ ಎಂದರು.
ಎಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು: ಮುಂದಿನ ಚುನಾವಣೆಯಲ್ಲಿ ಸ್ಥಳೀಯರಿಗೇ ಟಿಕೆಟ್ ನೀಡಬೇಕು ಎಂಬ ಕೂಗು ಪಕ್ಷದ ಮುಖಂಡರಿಂದ ಕೇಳಿಬರುತ್ತಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ ಪ್ರಸಾದ್, ‘ಆ ರೀತಿ ಹೇಳುತ್ತಿರುವವರಿಗೆ ಜನ ಪ್ರಾತಿನಿಧ್ಯ ಕಾಯ್ದೆ ಗೊತ್ತಿದೆಯೇ? ಈ ದೇಶದ ಪ್ರಜೆಯಾಗಿರುವ, 25 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಅಮೇಠಿಯಲ್ಲಿ ಸ್ಪರ್ಧಿಸುತ್ತಿದ್ದ ರಾಹುಲ್ ಗಾಂಧಿ ವಯನಾಡಿನಲ್ಲಿ ಸ್ಪರ್ಧೆ ಮಾಡಬಹುದು. ಗೋವಿಂದರಾಜನಗರ ಕ್ಷೇತ್ರದ ವಿ.ಸೋಮಣ್ಣ, ವರುಣ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಿಲ್ಲವೇ? ಸೋಮಣ್ಣ ಸ್ಪರ್ಧಿಸಿದಾಗ ಈಗ ಮಾತನಾಡುವವರು ಎಲ್ಲಿದ್ದರು? ಅವರಿಗೆ ಬೆಂಬಲ ಕೊಡಲಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.
ಶ್ರೀನಿವಾಸ್ ಪ್ರಸಾದ್ ಅಳಿಯ, ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಎನ್.ಎಸ್.ಮೋಹನ್, ಮುಖಂಡರಾದ ಲೋಕೇಶ್, ಅಯ್ಯನಪುರ ಶಿವಕುಮಾರ್, ಬಸವರಾಜಪ್ಪ, ಸರೋಜಾ ಇದ್ದರು.
Quote - ನೂರಾರು ಜನರ ಸಮಸ್ಯೆಗಳನ್ನು ಕೇಳಿದ್ದೇನೆ. ತೃಪ್ತಿಕರ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಸೋಮಾರಿಯಾಗಿ ಕುಳಿತಿಲ್ಲ ವಿ.ಶ್ರೀನಿವಾಸ ಪ್ರಸಾದ್ ಸಂಸದ
ಮಾರ್ಚ್ 17ಕ್ಕೆ ಸುವರ್ಣ ಮಹೋತ್ಸವ
‘ಮಾರ್ಚ್ 17ಕ್ಕೆ ನಾನು ಚುನಾವಣಾ ರಾಜಕೀಯಕ್ಕೆ ಬಂದು 50 ವರ್ಷಗಳಾಗುತ್ತವೆ. 1974ರಲ್ಲಿ ಮೈಸೂರಿನಲ್ಲಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದೆ. 1977ರಿಂದ ಚಾಮರಾಜನಗರದಿಂದ ಸ್ಪರ್ಧಿಸಲು ಆರಂಭಿಸಿದೆ. ನನ್ನ ಅಭಿಮಾನಿಗಳು ಸೇರಿ ಮೈಸೂರಿನ ಮುಕ್ತ ವಿವಿಯ ಘಟಿಕೋತ್ಸವ ಸಭಾಂಗಣದಲ್ಲಿ ಚುನಾವಣಾ ರಾಜಕೀಯ ಸುವರ್ಣಮಹೋತ್ಸವ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ’ ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು. ‘ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಮಾರಂಭ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಹಿತಿ ಚಂದ್ರಶೇಖರ ಕಂಬಾರ ಅವರು ‘ಸ್ವಾಭಿಮಾನಿ ನೆನಪುಗಳು’ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು. ‘ಸ್ವಾಭಿಮಾನಿ ನೆನಪುಗಳು ಕೃತಿಯಲ್ಲಿ ನನ್ನ ರಾಜಕೀಯ ಜೀವನ ನಾನು ಮಾಡಿರುವ ಕೆಲಸಗಳ ಬಗ್ಗೆ ಹೇಳಿದ್ದೇನೆ’ ಎಂದು ಸಂಸದರು ಹೇಳಿದರು.
‘ತನಿಖೆ ನಡೆದು ವರದಿ ಬರಲಿ’
ಚಾಮರಾಜನಗರ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹಾಸ್ಟೆಲ್ ಆಸ್ತಿ ಪರಭಾರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು ‘ಪ್ರಕರಣ ನನ್ನ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿಯವರು ತನಿಖೆಗಾಗಿ ಸಮಿತಿ ರಚಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ತನಿಖೆ ಚೆನ್ನಾಗಿ ನಡೆಯುತ್ತಿದೆ. ವರದಿ ಬರಲಿ’ ಎಂದು ಹೇಳಿದರು. ಸಂಸದರ ಪ್ರದೇಶಾಭಿವೃದ್ಧಿ ಅಡಿಯಲ್ಲಿ ಆದಿ ಕರ್ನಾಟಕ ಅಭಿವೃದ್ಧಿ ಸಂಘಕ್ಕೆ ₹10 ಲಕ್ಷ ನೀಡಿರುವ ಬಗ್ಗೆ ಕೇಳಿದ್ದಕ್ಕೆ ‘₹10 ಲಕ್ಷ ಹಂಚಿಕೆ ಮಾಡಿರುವುದು ನಿಜ. ಆದರೆ ವಿವಾದ ಇದ್ದರೆ ಹಣ ನೀಡುವುದಕ್ಕೆ ಬರುವುದಿಲ್ಲ. ಜಿಲ್ಲಾಧಿಕಾರಿ ಅದನ್ನು ತಡೆ ಹಿಡಿಯುತ್ತಾರೆ. ಆ ಹಣವನ್ನು ಬೇರೆ ಕಡೆ ಬಳಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.