ಚಾಮರಾಜನಗರ: ಜಿಲ್ಲೆಯ ಸಾಹಿತಿ, ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರುಕೇಂದ್ರ ಸಾಹಿತ್ಯ ಅಕಾಡೆಮಿಯ ಈ ವರ್ಷದ ಪುಸ್ತಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.
ತಾಲ್ಲೂಕಿನ ಮೂಡ್ನಾಕೂಡು ಗ್ರಾಮದವರಾದ ಚಿನ್ನಸ್ವಾಮಿ ಅವರು, ತಮ್ಮ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತಸವಾಗಿದೆ. 40 ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ತೊಡಗಿಕೊಂಡಿದ್ದೇನೆ. ಗಂಭೀರವಾದ ವಿಚಾರ ಹಾಗೂ ಸಮಾಜಮುಖಿ ಬರವಣಿಗೆ ಮೂಲಕ ನೊಂದವರ ಪರವಾಗಿ ಮಾತನಾಡುತ್ತಾ ಬಂದಿದ್ದೇನೆ. ನನ್ನ ಸಾಹಿತ್ಯದ ದ್ರವ್ಯ ಕಾವ್ಯವಾಗಿದ್ದರೂ, ಗಂಭೀರವಾದ ಲೇಖನ, ಪ್ರಬಂಧಗಳನ್ನು ಬರೆದಿದ್ದೇನೆ. ‘ಬಹುತ್ವದ ಭಾರತ...’ ಅಂತಹ ಕೃತಿ. ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ಮಾತ್ರವಲ್ಲದೇ ಚಾಮರಾಜನಗರದ ಜಿಲ್ಲೆಯವನೆಂಬ ಹೆಮ್ಮೆಯೂ ಇದೆ’ ಎಂದರು.
1954ರ ಸೆಪ್ಟೆಂಬರ್ 22ರಂದು ಜನಿಸಿರುವ ಡಾ.ಚಿನ್ನಸ್ವಾಮಿ ಅವರು ಕವನಗಳನ್ನು ಮಾತ್ರವಲ್ಲದೆ, ಕಥೆ, ಪ್ರಬಂಧ, ಗದ್ಯ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಲ್ಲಿ ತೊಡಗಿಕೊಂಡಿದ್ದಾರೆ. ನಾಟಕಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು ಸಾಹಿತ್ಯವನ್ನು ಹವ್ಯಾಸವನ್ನಾಗಿ ಮುಂದುವರಿಸಿದವರು.
ಇಂದಿರಾ ಗಾಂಧಿ ಹತ್ಯೆಗೀಡಾದ ಸಂದರ್ಭದಲ್ಲಿ ಅವರು ಬರೆದಿದ್ದ ‘ಪ್ರಿಯದರ್ಶಿನಿಗೊಂದು ಶ್ರದ್ಧಾಂಜಲಿ’ ಎಂಬುದು ಮೊದಲ ಪ್ರಕಟಿತ ಕವಿತೆ. ಪಾಪು ಅವರ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಅದು ಪ್ರಕಟಗೊಂಡಿತ್ತು.
‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಗೋಧೂಳಿ’, ‘ಮತ್ತೆ ಮಳೆ ಬರುವ ಮುನ್ನ’, ‘ನಾನೊಂದು ಮರವಾಗಿದ್ದರೆ,’ ‘ಚಪ್ಪಲಿ ಮತ್ತು ನಾನು’ ಅವರ ಪ್ರಮುಖ ಕವನ ಸಂಕಲನಗಳು. ‘ಮೋಹದ ದೀಪ’ ಎಂಬ ಕಥಾಸಂಕಲನವನ್ನೂ ಪ್ರಕಟಿಸಿದ್ದಾರೆ.
‘ಕೆಂಡಾಮಂಡಲ’, ‘ಬಹುರೂಪಿ’ ನಾಟಕಗಳನ್ನು ಬರೆದಿದ್ದಾರೆ. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಎಂಬುದು ಅವರ ಆತ್ಮಕಥೆ.
2009ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವ, ಸನ್ಮಾನಗಳಿಗೆ ಅವರು ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.