ADVERTISEMENT

ಮೂಡುಗೂರು ಮಠ: ನೇತ್ರ ಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 15:38 IST
Last Updated 3 ಅಕ್ಟೋಬರ್ 2024, 15:38 IST
ಗುಂಡ್ಲುಪೇಟೆ ತಾಲ್ಲೂಕಿನ ಮೂಡುಗೂರು ಮಠದ ಆವರಣದಲ್ಲಿ ನಡೆದ ‘ನೇತ್ರ ಚಿಕಿತ್ಸಾ ಶಿಬಿರ’ವನ್ನು ಇಮ್ಮಡಿ ಉದ್ದಾನ ಸ್ವಾಮೀಜಿ ಉದ್ಘಾಟಿಸಿದರು
ಗುಂಡ್ಲುಪೇಟೆ ತಾಲ್ಲೂಕಿನ ಮೂಡುಗೂರು ಮಠದ ಆವರಣದಲ್ಲಿ ನಡೆದ ‘ನೇತ್ರ ಚಿಕಿತ್ಸಾ ಶಿಬಿರ’ವನ್ನು ಇಮ್ಮಡಿ ಉದ್ದಾನ ಸ್ವಾಮೀಜಿ ಉದ್ಘಾಟಿಸಿದರು   

ಗುಂಡ್ಲುಪೇಟೆ: ತಾಲ್ಲೂಕಿನ ಮೂಡುಗೂರು ಮಠದ ಆವರಣದಲ್ಲಿ ಉದ್ದಾನೇಶ್ವರ ವಿರಕ್ತ ಮಠ ಮತ್ತು ದಿವ್ಯದೃಷ್ಟಿ ಕಣ್ಣಿನ ಆಸ್ಪತ್ರೆ, ನಾದ ವೆಲ್‌ಫೇರ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ನೇತ್ರ ಉಚಿತ ಚಿಕಿತ್ಸಾ ಶಿಬಿರ’ವನ್ನು ಇಮ್ಮಡಿ ಉದ್ದಾನ ಸ್ವಾಮೀಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸಮಸ್ಯೆ ಬಂದಲ್ಲಿ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಹಲವು ಅಡೆತಡೆಗಳಿವೆ. ಹೀಗಾಗಿ ನೇತ್ರ ಸಮಸ್ಯೆ ಕಡೆಗಣಿಸುವ ಸಾಧ್ಯತೆ ಪರಿಹರಿಸಲು ಮಠವು ಮುಂದಾಗಿದೆ. ಗ್ರಾಮದ ಜನ, ಭಕ್ತರ ಸಹಕಾರದಿಂದ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದೆ. ಅದರ ಫಲ ಪಡೆದುಕೊಳ್ಳಲು ಹಳ್ಳಿಯ ಜನ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಅಖಿಲ ಭಾರತ ವೀರಶೈವ ಮಹಾ ಸಭೆಯ ಜಿಲ್ಲಾ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ‘ಜನರು ಆರೋಗ್ಯವಂತರಾಗಲು ಹಳೆಯ ಜೀವನ ಪದ್ಧತಿಗೆ ಹಿಂದಿರುಗೋಣ’ ಎಂದು ತಿಳಿಸಿದರು.

ADVERTISEMENT

ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಮಾತನಾಡಿ, ‘ಮಠದ ಶ್ರೀಗಳು ಯುವಕರಾಗಿದ್ದು, ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ. ಮರ ಬೆಳಸಿ, ಧರೆ ಉಳಿಸಿ ಅಭಿಯಾನದಲ್ಲಿ ಪ್ರಕೃತಿಯ ಸಂರಕ್ಷಣೆ ಚಟುವಟಿಕೆ ನಡೆಸಿದಂತೆ, ಜನರ ಆರೋಗ್ಯದ ಬಗ್ಗೆ ಆಲೋಚಿಸಿ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದಾರೆ. ಮುಂದೆಯೂ ಮಠದ ಆಶ್ರಯದಲ್ಲಿ ಹಲವು ಜನಪರ ಕಾರ್ಯಕ್ರಮ ನಡೆಸಲು ಪೂರ್ಣ ಸಹಕಾರ ನೀಡಲಾಗುವುದು’ ಎಂದರು.

ಶಿಬಿರದಲ್ಲಿ 300ಕ್ಕೂ ಅಧಿಕ ಮಂದಿ ತಪಾಸಣೆ ಮಾಡಿಸಿಕೊಂಡರು. ಈ ವೇಳೆ 27 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು.

ಕಸಾಪ ಜಿಲ್ಲಾ ಅಧ್ಯಕ್ಷ ಶೈಲಕುಮಾರ್, ದಿವ್ಯದೃಷ್ಟಿ ಕಣ್ಣಿನ ಆಸ್ಪತ್ರೆ ವೈದ್ಯ ಪ್ರಶಾಂತ ರಾಯಬಾಗ್ ಮಾತನಾಡಿದರು. ಹೂರದಹಳ್ಳಿ ಪ್ರಸಾದ್, ವಚನ ಗಾಯಕ ಮಹೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.