ADVERTISEMENT

ಯಳಂದೂರು: ಮೊಹರಂನಲ್ಲಿ ಕರ್ಬಾಲ ಕಥನದ ‘ರಿವಾಯತ್’

ಗುಂಬಳ್ಳಿಯಲ್ಲಿ ಹಸನ್ ಹುಸೇನ್ ಆಗಮನ: ಬಾಬಯ್ಯನ ಹಬ್ಬದಲ್ಲಿ ಹಿಂದೂ– ಮುಸ್ಲಿಮರು ಭಾಗಿ

ಎನ್.ಮಂಜುನಾಥಸ್ವಾಮಿ
Published 18 ಜುಲೈ 2024, 7:06 IST
Last Updated 18 ಜುಲೈ 2024, 7:06 IST

ಗುಂಬಳ್ಳಿಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಪಂಜ ಇಟ್ಟಿದ್ದ ಮನೆಯಲ್ಲಿ ಹಿಂದೂಗಳು ಭಾಗವಹಿಸಿ ಸಾಮರಸ್ಯ ಸಾರಿದರು

ಗುಂಬಳ್ಳಿಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಪಂಜ ಇಟ್ಟಿದ್ದ ಮನೆಯಲ್ಲಿ ಹಿಂದೂಗಳು ಭಾಗವಹಿಸಿ ಸಾಮರಸ್ಯ ಸಾರಿದರು

ಯಳಂದೂರು: ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಪಂಜ (ಬಾಬಯ್ಯ) ಎದುರು ಕುಳಿತು ಪ್ರಾರ್ಥನೆ ಸಲ್ಲಿಸಿದ ಹಿಂದೂ–ಮುಸ್ಲಿಮರು, ಮಧ್ಯಾಹ್ನ ನಮಾಜು ಮುಗಿಯುತ್ತಿದ್ದಂತೆ ಭಕ್ತರಲ್ಲಿ ಆವಾಹನೆಯಾದ ಹಸನ್ ಹುಸೇನ್, ಕರ್ಬಾಲದಲ್ಲಿ ಹುತಾತ್ಮರಾದ ಕಾಶಿಮರಿಗೆ ಸಲಾಂ ಸಲ್ಲಿಸಿದ ಮಹಿಳೆ– ಪುರುಷರು ಹೀಗೆ... ಹತ್ತು ಹಲವಾರು ರೀತಿ ರಿವಾಜುಗಳ ನಡುವೆ ಬುಧವಾರ ಜರುಗಿದ ಮೊಹರಂ ಹಬ್ಬವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು.

ADVERTISEMENT

ಗ್ರಾಮದಲ್ಲಿ ನೂರಾರು ವರ್ಷಗಳಿಂದ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದು, ಬದಲಾದ ಕಾಲಘಟ್ಟ, ಸ್ಥಿತ್ಯಂತರ ಗಳ ನಡುವೆಯೂ ಸಂಪ್ರದಾಯಗಳನ್ನು ಉಳಿಸಿಕೊಂಡು ಬರಲಾಗಿದೆ. ಹಿಂದೂ ಗಳಲ್ಲೂ ಬಾಬಯ್ಯನ ಒಕ್ಕಲಿನವರು ನಡೆಸಿಕೊಂಡು ಬರುತ್ತಿದ್ದ ರೀತಿ ರಿವಾಜು ಬದಲಾದರೂ, ನಂಬಿಕೆಗಳು ಉಳಿದು ಬೆಳೆದಿವೆ. ಮೊಹರಂ ಕೊನೆಯ ದಿನದವರೆಗೂ ಹತ್ತು ದಿನಗಳ ಕಾಲ ಹಿಂದೂ– ಮುಸ್ಲಿಮರು ಮಾಂಸ ತ್ಯಜಿಸಿ, ತಲೆಗೆ ಹೂ ಧರಿಸದೆ ಹುಸೇನರ ಸ್ಮರಣೆ ಮಾಡುವ ವಾಡಿಕೆ ಇಲ್ಲಿದೆ.

‘ಸುನ್ನಿ ಮುಸಲ್ಮಾನರು ವ್ರತಾಚರಣೆ ಮಾಡಿ ಆರಾಧನೆಯಲ್ಲಿ ತೊಡಗಿ ದರು. ಹರಕೆ ಹೇಳಿ ಅಲಾಯಿ, ಪೀರಲ ದೇವರ ಗುಣಗಾನ ಮಾಡಿದರು. ಹರಕೆ ತಂದವರಿಗೆ ಬಾಬಾರು ನವಿಲು ಗರಿಗಳಿಂದ ಶ್ರೀರಕ್ಷೆ ಮಾಡಿ ವಿಭೂತಿ ನೀಡಿದರು. ಹಬ್ಬ ಮುಕ್ತಾಯವಾಗುವ ಹತ್ತು ದಿನವೂ ಇಂತಹ ವಿಶೇಷ ಸಾಂಸ್ಕೃತಿಕ ಕಾರ್ಯಗಳು ನಡೆದವು. ಕೊನೆಯ ದಿನ ಹಿಂದೂಗಳು ಪಂಜ ಇರುವ ಮನೆಗೆ ತೆರಳಿ ಪೂಜೆ ಸಲ್ಲಿಸುತ್ತಾರೆ’ ಎನ್ನುತ್ತಾರೆ ಗ್ರಾಮದ ರಾಮದಾಸ್.

ಮೊಹರಂ ಹಬ್ಬದ ಆರಂಭ ಚಂದ್ರ ದರ್ಶನದ ನಂತರ ದೇವರ ವಿಸರ್ಜನೆ ತನಕ ವ್ರತದ ನಿಯಮಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ನಡೆಯುತ್ತದೆ. ಜಾತಿ ಮತದ ಸೋಂಕು ಇಲ್ಲದೆ ಜನರು ಭಾಗವಹಿಸುತ್ತಾರೆ. ಬಾಬಯ್ಯನ ಹೆಸರಿನಲ್ಲಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.

‘ಉರುಸ್ ಸಂದರ್ಭ ಸುತ್ತಮುತ್ತಲಿನ ಜನರೆಲ್ಲರೂ ಸೇರಿ ಧಾರ್ಮಿಕ ಸಹಿಷ್ಣುತೆಗೆ ಸಾಕ್ಷಿಯಾಗುತ್ತಾರೆ. ಹಿಂದೂಗಳು ಕೆಂಪು ಸಕ್ಕರೆ, ಕೊಬ್ಬರಿ ಅರ್ಪಿಸುತ್ತಾರೆ. ಮಧ್ಯಾಹ್ನ ಸಿಹಿಯೂಟ ತಯಾರಿಸಿ ಎಲ್ಲರಿಗೂ ವಿತರಿಸಲಾಗುತ್ತದೆ. ಪರಸ್ಪರ ನಂಬುಗೆ, ಏಕತೆ, ಸೌಹಾರ್ದ ಇದ್ದರೆ ಇಂತಹ ಆಚರಣೆಗಳಿಗೆ ಬಲ ಬರುತ್ತದೆ’ ಎಂದು ಮುಖಂಡರಾದ ಅಬ್ದುಲ್ ಅಜೀಜ್, ಮುನಾವರ್ ಹೇಳಿದರು.

ಮೊಹರಂ ಹೊಸ ವರ್ಷದ ಮೊದಲ ದಿನ. ಇಳೆಗೆ ಮೊದಲ ಮಳೆ ಹನಿ ಬಿದ್ದ ಸುದಿನ. ಪ್ರವಾದಿ ಪೈಗಂಬರರ ಮೊಮ್ಮಗ ಹಝ್ರತ್ ಹುಸೈನರು ಕದನದಲ್ಲಿ ಮಡಿದ ಕರಾಳ ದಿನ. ಕೊನೆಯ ದಿನ ಅಶೂರಾ ಎಂದು ಶೋಕ ವ್ಯಕ್ತಪಡಿಸುವ ರೂಢಿಯೂ ಕೆಲ ಸಮುದಾಯಗಳಲ್ಲಿ ಇದೆ.

ಗ್ರಾಮೀಣ ಭಾಗಗಳಲ್ಲಿ ಸಮರ ನಡೆದ ಪ್ರತೀಕವಾಗಿ ಭಕ್ತರ ಮೇಲೆ ಹಸನ್ ಹುಸೇನ್ ಆವಾಹನೆ ನಡೆಯುತ್ತದೆ. ಈ ಸಮಯದಲ್ಲಿ ಹತ್ತಾರು ರಿವಾಜುಗಳು ನಡೆಯುತ್ತವೆ. ಈ ವೇಳೆ ಶೋಕಿಸುವುದು, ಹರಕೆ ಕಟ್ಟುವ ಸಂಪ್ರದಾಯ ಮುಂದುವರಿಯುತ್ತದೆ. ಹೀಗೆ ಹಿಂದೂ– ಮುಸ್ಲಿಮರು ಒಂದಾಗಿ ಸೇರುವುದು ನೆಲದ ಸಹಬಾಳ್ವೆಯ ಸಂಕೇತವಾಗಿ ಮುಂದುವರಿದಿದೆ.

ಸಾಂಕೇತಿಕ ಆಚರಣೆ

ಗ್ರಾಮದಲ್ಲಿ ಮೊಹರಂ ಹಬ್ಬದಂದು ಕೊಂಡೋತ್ಸವ ನಡೆಯುತ್ತಿತ್ತು. ಹಿಂದೂಗಳು ಹುಲಿವೇಷ ಕಟ್ಟಿ ಹರಕೆ ತೀರಿಸುತ್ತಿದ್ದರು. ಹಝ್ರತರ ಏಳು ಸಹೋದರರ ಸ್ಮರಣೆ ಸಾರುವ ಬೆಳ್ಳಿ ಪಂಜ ಮೆರವಣಿಗೆಯಲ್ಲಿ ಸಾಗುತ್ತಿತ್ತು. ರಾಜ್ಯದ ವಿವಿಧೆಡೆ ಯಿಂದ ಭಕ್ತರು ಬರುತ್ತಿದ್ದರು. ಕುಣಿತಕ್ಕೆ ಸಾಕ್ಷಿಯಾಗಿದ್ದ ಬಾಬಯ್ಯನ ಹಬ್ಬ ಬದಲಾದ ಪರಿಸ್ಥಿತಿಯಲ್ಲಿ ಸಾಂಕೇತಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.