ADVERTISEMENT

ಸೋಲಿಗರ ಸೊಬಗಿಗೆ ಸ್ತಬ್ಧಚಿತ್ರದ ರೂಪ

ಮೈಸೂರು ದಸರಾದಲ್ಲಿ ಗಮನ ಸೆಳೆದ ಸ್ತಬ್ಧಚಿತ್ರ ನಿರ್ಮಾಣ ಮಾಡಿದ ‘ವರ್ಣ ಆವರಣ’ ತಂಡ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 6:46 IST
Last Updated 16 ಅಕ್ಟೋಬರ್ 2024, 6:46 IST
ಮೈಸೂರು ದಸರಾ ಮಹೋತ್ಸವದ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಜಿಲ್ಲೆಯ ‘ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು’ ಸ್ತಬ್ಧಚಿತ್ರ
ಮೈಸೂರು ದಸರಾ ಮಹೋತ್ಸವದ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಜಿಲ್ಲೆಯ ‘ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು’ ಸ್ತಬ್ಧಚಿತ್ರ   

ಸಂತೇಮರಹಳ್ಳಿ: ಮೈಸೂರು ದಸರಾ ಮಹೋತ್ಸವದ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಜಿಲ್ಲೆಯ ‘ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು’ ಸ್ತಬ್ಧಚಿತ್ರ ತೃತೀಯ ಸ್ಥಾನ ಪಡೆದಿದ್ದು ಈ ಸಾಧನೆಯ ಹಿಂದೆ ಮಂಗಲದ ಹೊಸೂರಿನ ಕಲಾವಿದ ಮದುಸೂಧನ್ ನೇತೃತ್ವದ ವರ್ಣ ಆವರಣ ಕಲಾತಂಡದ ಶ್ರಮ ಪ್ರಮುಖವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಸ್ತಬ್ಧಚಿತ್ರಗಳ ಪೈಕಿ ಚಾಮರಾಜನಗರ ಜಿಲ್ಲೆಯ ಮೂಲನಿವಾಸಿಗಳಾದ ಸೋಲಿಗರ ಕುರಿತು ನಿರ್ಮಿಸಿದ್ದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆದಿತ್ತು. ಈ ಸ್ತಬ್ಧಚಿತ್ರ ತಯಾರಿಸಿದ್ದು ಮಧುಸೂಧನ್, ಪ್ರಕಾಶ್, ಮಹದೇವ್‌, ಮಹೇಶ್‌ ಹಾಗೂ ಬಸವರಾಜು ಅವರನ್ನೊಳಗೊಂಡ ‘ವರ್ಣ ಆವರಣ’ ತಂಡ.

ಏನಿತ್ತು ವಿಶೇಷ:

ADVERTISEMENT

ಜಿಲ್ಲೆಯ ವರ್ಣ ಆವರಣ ತಂಡವು ಸೋಲಿಗರ ಬದುಕಿನ ಚಿತ್ರಣವನ್ನು ಸ್ಥಬ್ಧ ಚಿತ್ರದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದೆ. ಬಿಳಿಗಿರಿ ರಂಗನಬೆಟ್ಟದಲ್ಲಿ ಶತಮಾನಗಳ ಇತಿಹಾಸವಿರುವ ದೊಡ್ಡ ಸಂಪಿಗೆ ಮರವನ್ನು ಅಲ್ಲಿನ ನಿವಾಸಿಗಳು ದೇವರು ಎಂದು ಪೂಜಿಸುತ್ತಿದ್ದು ಇದನ್ನು ಸ್ತಬ್ಧಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಇದಲ್ಲದೆ ಹಾಡಿಗಳಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿರುವ ರೊಟ್ಟಿಹಬ್ಬ, ಗೋರುಕನ ನೃತ್ಯ, ಲಂಟನಾ ಗಿಡಗಳಿಂದ ತಯಾರಾಗುವ ಕಲಾಕೃತಿಗಳು ಸ್ಥಾನ ಪಡೆದಿವೆ. ಜನಪದ ವೈದ್ಯ ಪದ್ದತಿಯಲ್ಲಿ 3 ಸಾವಿರ ಹೆರಿಗೆ ಮಾಡಿಸಿರುವ ಸಿದ್ದಮ್ಮ ಭಾವಚಿತ್ರ ಸ್ಥಬ್ಧಚಿತ್ರದಲ್ಲಿ ನೋಡುಗರ ಗಮನ ಸೆಳೆಯುವಂತಿದೆ.

ಅರಣ್ಯ ಉತ್ಪನ್ನಗಳಾದ ಜೇನು, ಸೀಗೆಕಾಯಿ, ಬೆಟ್ಟದ ನೆಲ್ಲಿಕಾಯಿ, ಸೊಗದೆ ಬೇರು, ಚಕೋತ ಸೇರಿದಂತೆ ವಿವಿಧ ಕಾಡಿನ ಉತ್ಪನ್ನಗಳನ್ನು ಮಾದರಿಯನ್ನು ಸ್ತಬ್ಧಚಿತ್ರದಲ್ಲಿ ಪ್ರದರ್ಶನ ಮಾಡಲಾಗಿದೆ. ಕಳೆದ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಚಾಮರಾಜನಗರದ ಜನಪದ ಕಲೆಗಳಾದ ಗೊರವರ ಕುಣಿತ ಹಾಗೂ ಮಹದೇಶ್ವರ ಮೂರ್ತಿಗೆ ಪ್ರಥಮ ಬಹುಮಾನ ಬಂದಿತ್ತು. ಈ ವರ್ಷವೂ ಬಹುಮಾನ ಬಂದಿರುವುದು ಇಲ್ಲಿನ ಕಲಾವಿದರ ಕಲಾನೈಪುಣ್ಯತೆಗೆ ಸಾಕ್ಷಿಯಾಗಿದೆ.

34ರ ಹರೆಯದ ಮಧುಸೂದನ್ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಜಾನಪದ, ಸಂಸ್ಕೃತಿ, ನೃತ್ಯ ಹಾಗೂ ಬುಡಕಟ್ಟು ಜನಾಂಗಗಳ ಕಲೆಗಳು, ಸಂಸ್ಕೃತಿ ಪರಂಪರೆಗಳನ್ನೇ ತಮ್ಮ ಚಿತ್ರಗಳಿಗೆ ಕಥಾವಸ್ತುಗಳನ್ನಾಗಿ ಆಯ್ಕೆ ಮಾಡುವುದು ವಿಶೇಷ.

ಸ್ಪಾಟ್ ಪೇಂಟಿಂಗ್ ಅಂದರೆ ಎದುರಿಗಿದ್ದ ವ್ಯಕ್ತಿಯನ್ನು ನೋಡಿಕೊಂಡು ಸ್ಥಳದಲ್ಲೇ ಚಿತ್ರ ಬರೆಯುವ ಕಲೆಯೂ ಮಧುಸೂದನ್‌ಗೆ ಕರಗತವಾಗಿದೆ. ವಾಲ್‌ಪೇಂಟಿಂಗ್, ಪರಿಸರ ಜಾಗೃತಿ, ಅರಣ್ಯ ಇಲಾಖೆಯ ಪ್ರಾಣಿ ಸಂರಕ್ಷಣೆ, ಶಿಕ್ಷಣ ಇಲಾಖೆಯ ಶೈಕ್ಷಣಿಕ ಜಾಗೃತಿ ಸೇರಿದಂತೆ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳನ್ನು ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ರಚಿಸಿದ್ದಾರೆ. ಜತೆಗೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕಲಾ ಶಿಬಿರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಮೈಸೂರಿನ ವೈಜಯಂತಿ ಶಾಲೆಯಲ್ಲಿ ಚಿತ್ರಕಲೆ ಡಿಪ್ಲೊಮಾ ಮುಗಿಸಿದ್ದು ಹಂಪಿ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆ ವಿಷಯದಲ್ಲಿ ಪದವಿ ಪಡೆದಿದ್ದು, ಗುಲ್ಬರ್ಗಾ ವಿವಿಯಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಧುಸೂದನ್‌ಗೆ 2019ರಲ್ಲಿ ಚಿತ್ರಕಲಾ ಅಕಾಡೆಮಿ ಪ್ರಶಸ್ತಿ, 2021ರಲ್ಲಿ ದೃಶ್ಯ ಬೆಳಕು ಪ್ರಶಸ್ತಿ ಸಂದಿವೆ.

‘ಖುಷಿ ಕೊಟ್ಟಿದೆ’

ರಾಜ್ಯದ ವಿವಿಧ ಸ್ಥಬ್ಧ ಚಿತ್ರಗಳ ಪೈಕಿ ಜಿಲ್ಲೆಯ ಸ್ಥಬ್ಧಚಿತ್ರಕ್ಕೆ ಬಹುಮಾನ ಬಂದಿರುವುದು ಖುಷಿ ತಂದಿದೆ. ಪ್ರಶಸ್ತಿಗಳು ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ಹಾಗೂ ಪ್ರೇರಣೆ ಸಿಗುತ್ತದೆ. ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ರಾಜ್ಯ ಮಟ್ಟದಲ್ಲಿ ಬಿಂಬಿಸಲು ಸಹಕಾರಿಯಾಗುತ್ತದೆ. –ಮಧುಸೂದನ್ ಕಲಾವಿದ

ಮಧುಸೂದನ್ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.