ADVERTISEMENT

ವಾಲ್ಮೀಕಿ ನಿಗಮ ಹಗರಣ: ಸಿಬಿಐ ತನಿಖೆಗೆ ಎನ್. ಮಹೇಶ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮೇ 2024, 8:04 IST
Last Updated 31 ಮೇ 2024, 8:04 IST
   

ಚಾಮರಾಜನಗರ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಶುಕ್ರವಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ರಕ್ಷಕರು, ಸಂವಿಧಾನ ರಕ್ಷಕರು, ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುತ್ತಾ ದಲಿತರ ಮತಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ದಲಿತ ವಿರೋಧಿಯಾಗಿ ನಡೆದುಕೊಳ್ಳುತ್ತಾ ಬಂದಿದೆ. ವರ್ಷದಿಂದ ನಡೆದಿರುವ ಹಗರಣಗಳು ಮತ್ತು ಅದು ಕೈಗೊಂಡ ತೀರ್ಮಾನಗಳು ಇದನ್ನು ಸಾಬೀತು ಪಡಿಸುತ್ತವೆ’ ಎಂದು ದೂರಿದರು.

‘ಗ್ಯಾರಂಟಿ ಯೋಜನೆಗಳಿಗೆ ಎಸ್ ಸಿಎಸ್ ಪಿ ಟಿಎಸ್ ಪಿ ಅನುದಾನವನ್ನು ಬಳಸಿ ಸರ್ಕಾರ ದಲಿತರಿಗೆ ಬಹುದೊಡ್ಡ ಅನ್ಯಾಯ ಮಾಡಿದೆ. ಈಗ ನಡೆದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಇದಕ್ಕೆ ಹೊಸ ಸೇರ್ಪಡೆ’ ಎಂದು ಮಹೇಶ್ ಹೇಳಿದರು.

ADVERTISEMENT

‘ಈ ಪ್ರಕರಣದಲ್ಲಿ ₹147 ಕೊಟಿ ದುರ್ಬಳಕೆ ಮಾಡಲಾಗಿದೆ. ಈ ಪೈಕಿ ₹94 ಕೋಟಿ ಯೂನಿಯನ್ ಬ್ಯಾಂಕ್ ನಲ್ಲಿ ಇಟ್ಟಿದ್ದ ಹಣವನ್ನು ವಿವಿಧ ಬ್ಯಾಂಕ್ ಗಳಿಗೆ ವರ್ಗಾವಣೆಯಾಗಿದೆ. ತೆಲಂಗಾಣದ ಬ್ರ್ಯಾಂಚ್ ಗಳಿಗೆ ವರ್ಗಾವಣೆಯಾಗಿದೆ. ಇಂತಹ ಹಗರಣ ನಡೆದಿದ್ದರೂ ಪರಿಶಿಷ್ಟಜಾತಿ ಸಮುದಾಯದ ಸಚಿವರಾದ ಜಿ.ಪರಮೇಶ್ವರ, ಪ್ರಿಯಾಂಕ್ ಖರ್ಗೆ ಅವರು ನಾಚಿಕೆ ಇಲ್ಲದೆ ಸಚಿವ ನಾಗೇಂದ್ರ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

‘ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಡೆತ್ ನೋಟ್ ಬರೆದಿದ್ದು ಸಚಿವರ ಮೌಖಿಕ ಆದೇಶದಿಂದಲೇ ಹಣ ವರ್ಗಾವಣೆ ಆಗಿದೆ ಎಂದು ಅವರು ಹೇಳಿದ್ದಾರೆ’ ಎಂದು ಹೇಳಿದರು.

‘ನಾಗೇಂದ್ರ ಎಸ್ ಟಿ ಮೀಸಲು ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಸಮುದಾಯದ ಬಗ್ಗೆ ಕಾಳಜಿಯಿಂದ ಕೆಲಸ ಮಾಡಬೇಕಾಗಿದ್ದ ಅವರು ‘ನನಗೆ ಗೊತ್ತೇ ಇಲ್ಲ’ ಎಂದು ಹೇಳುತ್ತಿದ್ದಾರೆ ಎಂದರೆ ಮಂತ್ರಿ ಸ್ಥಾನದಲ್ಲಿ ಇರಲು ಅವರು ಲಾಯಕ್ಕಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಚಿವ ಸ್ಥಾನದಿಂದ ವಜಾ ಮಾಡಬೇಕು’ ಎಂದು ಮಹೇಶ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.