ADVERTISEMENT

ಸಂತೇಮರಹಳ್ಳಿ | ಶಿಲ್ಪಗಳಿಗೆ ಜೀವ ತುಂಬವ ಕಲಾವಿದ ನಾಗರಾಜಮೂರ್ತಿ

ನೂರಾರು ಮೂರ್ತಿ, ಕಾಂಕ್ರಿಟ್ ಶಿಲ್ಪಗಳ ನಿರ್ಮಾಣ

ಎಂ.ಮಹದೇವ್
Published 26 ಜೂನ್ 2024, 5:29 IST
Last Updated 26 ಜೂನ್ 2024, 5:29 IST
ತಾಲ್ಲೂಕಿನ ಮೂಡ್ಲುಪುರ ಗ್ರಾಮದ ಕಲಾವಿದ ನಾಗರಾಜ ಮೂರ್ತಿ.
ತಾಲ್ಲೂಕಿನ ಮೂಡ್ಲುಪುರ ಗ್ರಾಮದ ಕಲಾವಿದ ನಾಗರಾಜ ಮೂರ್ತಿ.   

ಸಂತೇಮರಹಳ್ಳಿ: ಭಕ್ತರಿಗೆ ಭಕ್ತಿಭಾವ ಮೂಡಿಸುವಂತಹ ದೇವರ ಮೂರ್ತಿಗಳನ್ನು ನಿರ್ಮಿಸುವ ಹಾಗೂ ಸುಂದರ ಶಿಲ್ಪಗಳನ್ನು ನಿರ್ಮಿಸುವ ಕಲಾವಿದರಾಗಿ ಪ್ರಸಿದ್ಧರಾಗಿದ್ದಾರೆ ಚಾಮರಾಜನಗರ ತಾಲ್ಲೂಕಿನ ಮೂಡ್ಲುಪುರ ಗ್ರಾಮದ ನಾಗರಾಜ ಮೂರ್ತಿ.

ಕಳೆದ 20 ವರ್ಷಗಳಿಂದ ದೇವರ ವಿಗ್ರಹಗಳು ಹಾಗೂ ಪ್ರಾಣಿ ಪಕ್ಷಿಗಳ ಕಾಂಕ್ರಿಟ್ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವ ಕಲಾವಿದ ನಾಗರಾಜ ಮೂರ್ತಿ ಸುಂದರವಾದ ಶಿಲ್ಪಗಳ ನಿರ್ಮಾಣದ ಮೂಲಕ ಗಮನ ಸೆಳೆದಿದ್ದಾರೆ.

ಬಾಲ್ಯದಿಂದ ವಿಗ್ರಹಗಳ ಕೆತ್ತನೆ ಬಗ್ಗೆ ಆಸಕ್ತಿ ಹೊಂದಿದ್ದ ನಾಗರಾಜ ಮೂರ್ತಿ ಚನ್ನಪಟ್ಟಣದ ನಾಗಲಿಂಗಪ್ಪ ಎಂಬ ಗುರುಗಳ ಬಳಿ ವಿಗ್ರಹಗಳ ಕೆತ್ತನೆ ಕೆಲಸ ಕಲಿತಿದ್ದಾರೆ. ಅಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪಡೆಯುವುದರ ಜತೆಗೆ ದೇವರ ವಿಗ್ರಹಗಳು, ಗೋಪುರ ಸೇರಿದಂತೆ ಪ್ರಾಣಿ ಪಕ್ಷಿಗಳನ್ನು ಸಿಮೆಂಟ್ ಮೂಲಕ ತಯಾರು ಮಾಡುವಲ್ಲಿ ಪರಿಣತಿ ಪಡೆದಿದ್ದಾರೆ.

ADVERTISEMENT

ಗುರುಗಳ ಬಳಿ ತರಬೇತಿ ಮುಗಿಸಿ ಗ್ರಾಮಕ್ಕೆ ಬಂದ ನಾಗರಾಜ ಮೂರ್ತಿ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ದೇವಸ್ಥಾನಗಳಲ್ಲಿ ವಿಗ್ರಹಗಳನ್ನು ತಯಾರು ಮಾಡುವಲ್ಲಿ ನಿಸ್ಸೀಮರು. ಇವರ ಕೈ ಚಳಕವನ್ನು ಗಮನಿಸಿದ ಊರು ಹಾಗೂ ಪರ ಊರುಗಳ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಆಹ್ವಾನಿಸಿ ದೇವಸ್ಥಾನದ ಕೆಲಸಗಳನ್ನು ನೀಡುತ್ತಿದ್ದಾರೆ.

ವರ್ಷಪೂರ್ತಿ ಕೆಲಸ ಸಿಗುವುದಿಲ್ಲ. ಮಳೆಗಾಲ ಸಮಯದಲ್ಲಿ ಬೇಡಿಕೆ ಇರುವುದಿಲ್ಲ. ಕೆಲಸ ಇದ್ದರೇ ಮಾತ್ರ ಜೀವನ ಸಾಗುತ್ತದೆ. ನಮ್ಮಂತಹ ಶಿಲ್ಪಿಗಳನ್ನು ಕಲಾವಿದರು ಎಂದು ಪರಿಗಣಿಸಿ ಸರ್ಕಾರ ಪ್ರೋತ್ಸಾಹ ನೀಡಬೇಕು.
ನಾಗರಾಜಮೂರ್ತಿ, ಕಲಾವಿದ

ದೇವಸ್ಥಾನಗಳಲ್ಲಿ ಗೋಪುರ ಹಾಗೂ ವಿವಿಧ ದೇವರ ವಿಗ್ರಹಗಳ ಕೆತ್ತನೆಯಲ್ಲಿ ತೊಡಗಿರುವ ನಾಗರಾಜ ಮೂರ್ತಿ, ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಲೆ ಮಹದೇಶ್ವರ, ಶಿವ–ಪಾರ್ವತಿ, ಶಿವಲಿಂಗ, ವಿಘ್ನೇಶ್ವರ, ಬಸವ, ಆಂಜನೇಯ ಮೂರ್ತಿ, ಮಾರಮ್ಮ ಸೇರಿದಂತೆ ವಿವಿಧ ದೇವರ ಸುಂದರ ಮೂರ್ತಿಗಳನ್ನು ನಿರ್ಮಿಸಿದ್ದಾರೆ.

ಶಾಲೆಗಳ ಉದ್ಯಾನಗಳಲ್ಲೂ ಮಕ್ಕಳ ಆಕರ್ಷಣೆಗಾಗಿ ಹುಲಿ, ಸಿಂಹ, ಆನೆ, ಚಿರತೆ, ಕರಡಿ, ನವಿಲು, ಪಾರಿವಾಳ ಇನ್ನಿತರ ಪ್ರಾಣಿ ಪಕ್ಷಿಗಳ ಶಿಲ್ಪಗಲನ್ನು ತಯಾರಿಸಿದ್ದಾರೆ.

ಅರಣ್ಯ ಇಲಾಖೆಗೆ ಸೇರಿದ ಬಂಡೀಪುರದ ಮೇಲುಕಾಮನಹಳ್ಳಿ ಬಳಿ ಆನೆ, ಚಿರತೆ, ಜಿಂಕೆ, ಕಾಟಿ ಎಮ್ಮೆ, ಕರಡಿಯಂತಹ ಕಾಡು ಪ್ರಾಣಿಗಳನ್ನು ಕೆತ್ತನೆ ಮಾಡಿ, ಬಣ್ಣ ಹಚ್ಚುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ಕೆ ಕೊಡುಗೆ ನೀಡಿದ್ದಾರೆ.

ಬಿಳಿಗಿರಿ ರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದ ಗೋಪುರದಲ್ಲಿ ಶಂಖನಾಮ ಚಕ್ರ ಗೋಪುರ ನಿರ್ಮಾಣದಲ್ಲಿ ಕೈ ಚಳಕ ತೋರಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ದೇವರ ವಿಗ್ರಹಗಳನ್ನು ಕೆತ್ತುವುದರಲ್ಲಿ ಮನೆ ಮಾತಾಗಿದ್ದಾರೆ.

ಹೊರ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ದೇವಸ್ಥಾನಗಳ ಮೇಲೆ ಅಲ್ಲಿನ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಪಾಳು ಬಿದ್ದಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಇವರಿಗೆ ಆಹ್ವಾನ ನೀಡುತ್ತಿದ್ದಾರೆ.

ಇವರ ಕಲೆಯನ್ನು ಗಮನಿಸಿದ ಹಲವು ಸಂಘದವರು ಹಾಗೂ ದೇವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಗೌರವಿಸಿ ಸನ್ಮಾನಿಸಿದ್ದಾರೆ.

ಶಿಲ್ಪ ತಯಾರಿಕೆಯಲ್ಲಿ ತೊಡಗಿರುವ ತಾಲ್ಲೂಕಿನ ಮೂಡ್ಲುಪುರ ಗ್ರಾಮದ ಕಲಾವಿದ ನಾಗರಾಜ ಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.